ADVERTISEMENT

ನರಸಿಂಹರಾಜಪುರ: ಭಾವೈಕ್ಯತೆಯ ಕೇಂದ್ರದಲ್ಲಿ ಉರುಸ್‌ ಸಂಭ್ರಮ

ಕೆ.ವಿ.ನಾಗರಾಜ್
Published 26 ಮೇ 2024, 5:32 IST
Last Updated 26 ಮೇ 2024, 5:32 IST
ನರಸಿಂಹರಾಜಪುರದ ಪ್ರವಾಸಿ ಮಂದಿರದ ಬಳಿಯಿರುವ ಸೈಯದ್ ಹಯಾತ್ ಷಾವಲಿ ಅವರ ದರ್ಗಾ
ನರಸಿಂಹರಾಜಪುರದ ಪ್ರವಾಸಿ ಮಂದಿರದ ಬಳಿಯಿರುವ ಸೈಯದ್ ಹಯಾತ್ ಷಾವಲಿ ಅವರ ದರ್ಗಾ   

ನರಸಿಂಹರಾಜಪುರ: ಮೂಲತಃ ಎಡೆಹಳ್ಳಿ ಎಂದು ಗುರುತಿಸಿಕೊಂಡಿದ್ದ ನರಸಿಂಹರಾಜಪುರ 1882ರವರೆಗೂ ಅಂದಿನ ಲಕ್ಕವಳ್ಳಿ ತಾಲ್ಲೂಕಿನ ಕೇಂದ್ರವಾಗಿತ್ತು. 1915ರಲ್ಲಿ ಯುವರಾಜ ಕಂಠೀರವ ನರಸಿಂಹರಾಜ ಒಡೆಯರ್‌ ಇಲ್ಲಿ ಭೇಟಿ ಕೊಟ್ಟ ಸವಿ ನೆನಪಿಗಾಗಿ ಈ ಸ್ಥಳಕ್ಕೆ ನರಸಿಂಹರಾಜಪುರ ಎಂಬ ಹೆಸರು ಬಂತು.

ಈ ಪ್ರದೇಶ ಹಿಂದೆ ರಾಜ್ಯದಲ್ಲಿ ಆಳ್ವಿಕೆ ನಡೆಸಿದ ಪ್ರಸಿದ್ಧ ಮನೆತನಗಳ ಆಳ್ವಿಕೆಗೂ ಒಳಪಟ್ಟಿತ್ತು ಎಂಬುದು ಐತಿಹಾಸಿಕ ದಾಖಲೆಗಳಿಂದ ತಿಳಿದುಬರುತ್ತದೆ. ಈ ರೀತಿ ಐತಿಹಾಸಿಕ ಪ್ರಾಮುಖ್ಯತೆ ಪಡೆದಿರುವ ತಾಲ್ಲೂಕು ಕೇಂದ್ರದ ಪ್ರವಾಸಿ ಮಂದಿರದ ಬಳಿ ಇರುವ, ಬಹಳ ಹಿಂದಿನಿಂದಲೂ ಭಾವೈಕ್ಯದ ಕೇಂದ್ರವಾಗಿರುವ ಸೈಯದ್ ಹಯಾತ್ ಷಾವಲಿ ರ ಅಲೈ ದರ್ಗಾದಲ್ಲಿ ಉರುಸ್ ಮಹೋತ್ಸವ ನಡೆದುಕೊಂಡು ಬರುತ್ತಿದೆ. ಸಂಕಷ್ಟಗಳ ನಿವಾರಣೆಗೆ ಜಾತಿ, ಧರ್ಮ ಮೀರಿ ಜನರು ಇಲ್ಲಿ ಹರಕೆ ಹೊರುವ ಪದ್ಧತಿ ಇಂದಿಗೂ ನಡೆದು ಕೊಂಡು ಬಂದಿದೆ. ಪ್ರತಿ ಧಾರ್ಮಿಕ ಕೇಂದ್ರಗಳಿಗೂ ಇರುವಂತೆ ಇಲ್ಲಿನ ದರ್ಗಾಕ್ಕೂ ಪೌರಾಣಿಕ ಹಿನ್ನಲೆ ಇದೆ.

19ನೇ ಶತಮಾನದ ಕೊನೆಯ ಭಾಗದಲ್ಲಿ ಅಂದರೆ ಕಳೆದಿ ಅರಸರ ಹಾಗೂ ಟಿಪ್ಪುಸುಲ್ತಾನನ ಆಳ್ವಿಕೆ ಕಾಲದಲ್ಲಿ ಸೈಯದ್ ಹಯಾತ್ ಷಾವಲಿ ಎಂಬ ಫಕೀರರು ಪಟ್ಟಣದಲ್ಲಿ ವಾಸವಾಗಿದ್ದರು. ದೈವಾಂಶ ಸಂಭೂತ ಹಾಗೂ ಪವಾಡ ಪುರುಷರಾದ ಅವರು ಅಪಾರ ಜನಮನ್ನಣೆಗಳಿಸಿ ಪ್ರಸಿದ್ಧಿ ಪಡೆದಿದ್ದರು. ಪ್ರತಿ ನಿತ್ಯ ಊರಿನ ಮನೆ, ಮನೆಗೆ ತೆರಳಿ ಭಿಕ್ಷೆ ಬೇಡುತ್ತಾ ಜೀವನ ಸಾಗಿಸುತ್ತಿದ್ದ ಅವರು ಶ್ವಾನಪ್ರಿಯರೂ ಆಗಿದ್ದರು ಎಂದು ಹಿರಿಯರು ತಿಳಿಸುತ್ತಾರೆ.

ADVERTISEMENT

ಪಟ್ಟಣಕ್ಕೆ ಆ ಕಾಲದಲ್ಲಿ ಹೊಳಲ್ಕೆರೆಯಿಂದ ವಲಸೆ ಬಂದ ದಿ.ಎಚ್.ಕೆ.ಅಬ್ದುಲ್‌ ಸಮದ್ ಸಾಬ್ ಅವರ ಅಜ್ಜ ಹಯಾತ್ ಸಾಹೇಬ್ ಅವರಿಗೂ ಈ ಫಕೀರರಿಗೂ ಅವಿನಾಭಾವ ಸಂಬಂಧವಿತ್ತು. ಹಾಗಾಗಿ ಫಕೀರರ ನಿಧನ ನಂತರ 1889ರಿಂದ ಹಯಾತ್ ಸಾಹೇಬರು ಉರುಸ್ ಉತ್ಸವವನ್ನು ಪ್ರಾರಂಭಿಸಿದರು. ನಂತರ ಅವರ ಮಗ ಜಲೀಲ್ ಸಾಹೇಬ್ ದೊಡ್ಡಮಟ್ಟದಲ್ಲಿ ಪ್ರಾರಂಭಿಸಿದರು. ಅಂದಿನಿಂದ ಸುಮಾರು ನೂರು ವರ್ಷಗಳ ಕಾಲ ಅವರ ಕುಟುಂಬದವರು ಗಂಧೋತ್ಸವ ನಡೆಸಿಕೊಂಡು ಬಂದರು. 1960ರಲ್ಲಿ ಮೊಟ್ಟಮೊದಲ ಬಾರಿಗೆ ಉರುಸ್‌ನಲ್ಲಿ ಕವ್ವಾಲಿ ಮುಂತಾದ ಸಾಂಸ್ಕೃತಿಕ ಚಟುವಟಿಕೆಗಳನ್ನು ಪ್ರಾರಂಭಿಸಲಾಯಿತು. ಆ ಕಾಲದಿಂದಲೇ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ನಡೆಸಿಕೊಂಡು ಬರಲಾಗುತ್ತಿದೆ.

ಪ್ರಸ್ತುತ ಮಸೀದಿ ವತಿಯಿಂದ ಸಮಿತಿ ರಚಿಸಿ ಉರುಸ್‌ ನಡೆಸಲಾಗುತ್ತಿದೆ. ಸೈಯದ್ ಷಾವಲಿ ಅವರ 135ನೇ ವರ್ಷದ ಉರುಸ್ ಮಹೋತ್ಸವ ಮೇ 27ರಂದು ಸೋಮವಾರ ವಿಜೃಂಭಣೆಯಿಂದ ನಡೆಯಲಿದೆ. ಇದರ ಅಂಗವಾಗಿ ಅಂದು ಸಂಜೆ 6ಕ್ಕೆ ಧಾರ್ಮಿಕ ಸಭೆ, ರಾತ್ರಿ ಅನ್ನಸಂತರ್ಪಣೆ ಹಾಗೂ ಕವ್ವಾಲಿ ಕಾರ್ಯಕ್ರಮ ನಡೆಯಲಿದೆ.

ನರಸಿಂಹರಾಜಪುರದ ಪ್ರವಾಸಿ ಮಂದಿರದ ಬಳಿಯಿರುವ ಸೈಯದ್ ಹಯಾತ್ ಷಾವಲಿ ಅವರ ದರ್ಗಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.