ADVERTISEMENT

ತರೀಕೆರೆ | ರೈತರು ಬಹು ಬೆಳೆ ಪದ್ಧತಿಯನ್ನು ಕೈಗೊಳ್ಳಿ: ಲೋಕೇಶಪ್ಪ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2025, 7:12 IST
Last Updated 27 ಡಿಸೆಂಬರ್ 2025, 7:12 IST
ತರೀಕೆರೆ ತಾಲ್ಲೂಕಿನ ಲಿಂಗದಹಳ್ಳಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ನಡೆದ ರೈತರ ದಿನಾಚರಣೆ ಕಾರ್ಯಕ್ರಮದಲ್ಲಿ ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಬಿ.ಆರ್.ರವಿ ಅವರು ಮಾಜಿ ಪ್ರಧಾನಿ ಚೌಧರಿ ಚರಣ್‌ಸಿಂಗ್ ಅವರ ಭಾವಚಿತ್ರಕ್ಕೆ ಪುಷ್ವಾರ್ಚನೆ ಮಾಡಿದರು
ತರೀಕೆರೆ ತಾಲ್ಲೂಕಿನ ಲಿಂಗದಹಳ್ಳಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ನಡೆದ ರೈತರ ದಿನಾಚರಣೆ ಕಾರ್ಯಕ್ರಮದಲ್ಲಿ ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಬಿ.ಆರ್.ರವಿ ಅವರು ಮಾಜಿ ಪ್ರಧಾನಿ ಚೌಧರಿ ಚರಣ್‌ಸಿಂಗ್ ಅವರ ಭಾವಚಿತ್ರಕ್ಕೆ ಪುಷ್ವಾರ್ಚನೆ ಮಾಡಿದರು   

ತರೀಕೆರೆ: ರೈತರು ಒಂದೇ ಬೆಳೆಗೆ ಅವಲಂಬಿತರಾಗದೇ ಬಹು ಬೆಳೆ ಪದ್ಧತಿಯನ್ನು ಕೈಗೊಳ್ಳಬೇಕು ಎಂದು ಕೃಷಿ ಸಹಾಯಕ ನಿರ್ದೇಶಕ ಲೋಕೇಶಪ್ಪ ಹೇಳಿದರು.

ತಾಲ್ಲೂಕಿನ ಲಿಂಗದಹಳ್ಳಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ನಡೆದ ರೈತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದ ಪ್ರಧಾನಿಯಾಗಿದ್ದ ಚೌಧರಿ ಚರಣಸಿಂಗ್ ಅವರ ಅವಧಿಯಲ್ಲಿ ರೈತರ ಏಳಿಗೆಗಾಗಿ ನೀರಾವರಿ ಸೇರಿ ಅನೇಕ ಯೋಜನೆಗಳನ್ನು ಜಾರಿಗೆ ತಂದ ಪರಿಣಾಮ ಆಹಾರ ಕೊರತೆಯಿಂದ ಬಳಲುತ್ತಿದ್ದ ದೇಶವು ಆಹಾರೋತ್ಪಾದನೆಯಲ್ಲಿ ಸ್ವಾವಲಂಬಿಯಾಗಲು ಸಾಧ್ಯವಾಯಿತು. ಹಾಗಾಗಿ ಅವರ ಜನ್ಮ ದಿನವನ್ನು ರೈತ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು.

ADVERTISEMENT

‘ಅನೇಕ ಅಡಿಕೆ ಬೆಳೆಗಾರರು ತಾವು ಬೆಳೆದ ಅಡಿಕೆಯನ್ನು ಛೇಣಿದಾರರಿಗೆ ನೀಡುತ್ತಿರುವುದರಿಂದ ಛೇಣಿದಾರರು ಅಡಿಕೆ ಸಂಸ್ಕರಿಸಿದ ನಂತರ ಉಳಿದ ಅಡಿಕೆ ತ್ಯಾಜ್ಯಗಳನ್ನು ರಸ್ತೆ ಬದಿಗಳಿಗೆ ಹಾಕುತ್ತಿದ್ದು ಇದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಇದನ್ನು ನಿಲ್ಲಿಸಿ ಅಡಿಕೆ ಸಿಪ್ಪೆಯಿಂದ ಉತ್ತಮ ಗುಣಮಟ್ಟದ ಕಾಂಪೋಸ್ಟ್ ಗೊಬ್ಬರವನ್ನು ಮಾಡಿಕೊಳ್ಳಲು ಬಳಸಬೇಕು’ ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಟಿ.ಯತಿರಾಜ್ ಹೇಳಿದರು.

‘ಇತ್ತೀಚಿನ ದಿನಗಳಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ರೈತರು ಹಿಂದೇಟು ಹಾಕುತ್ತಿದ್ದು, ಈ ಭಾಗದಲ್ಲಿ ರೈತರು ಅಡಿಕೆ ಬೆಳೆಯುತ್ತಾ ಇತರೆ ಸಾಂಪ್ರದಾಯಿಕ ಬೆಳೆಗಳನ್ನು ಕೈಬಿಟ್ಟಿರುವುದು ಸರಿಯಲ್ಲ ಎಂದು ತರೀಕೆರೆ ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಬಿ.ಆರ್. ರವಿ ಹೇಳಿದರು.

‘ಪುರಾತನ ಕಾಲದಲ್ಲಿ ಯಾವುದೇ ರಾಸಾಯನಿಕ ಬಳಸದೇ ಬೆಳೆಯುತ್ತಿದ್ದ ಭತ್ತ, ರಾಗಿ, ನವಣೆ, ದ್ವಿದಳ ಧಾನ್ಯಗಳಂತಹ ಆಹಾರ ಪದ್ಧತಿಯಲ್ಲಿ ರೋಗ ರುಜಿನ ಬರುತ್ತಿರಲಿಲ್ಲ. ಇಂದಿನ ದಿನಮಾನಗಳಲ್ಲಿ ಸಾವಯವ ಪದ್ಧತಿ ಕೈಬಿಟ್ಟಿರುವ ಪರಿಣಾಮ ರೋಗ ರುಜಿನಗಳಿಗೆ ಸುಲಭವಾಗಿ ತುತ್ತಾಗುತ್ತಿದ್ದೇವೆ’ ಎಂದರು.

ಕಾರ್ಯಕ್ರಮದಲ್ಲಿ ತರೀಕೆರೆ ತಾಲ್ಲೂಕಿನ ಕರಕುಚ್ಚಿ ಗ್ರಾಮದ ಪ್ರಗತಿಪರ ಯುವ ರೈತ ಸುದರ್ಶನ್, ಅಜ್ಜಂಪುರ ತಾಲ್ಲೂಕಿನ ಯುವ ರೈತ ಬಿ.ಎಂ. ದರ್ಶನ್ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಲಿಂಗದಹಳ್ಳಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ನಿರ್ದೇಶಕಿ ಉಷಾ ಕುಮಾರಿ , ಲಿಂಗದಹಳ್ಳಿ ಕೃಷಿ ಬೀಜೋತ್ಪಾದನಾ ಕೇಂದ್ರದ ಅಧಿಕಾರಿ ಕರಿಯಪ್ಪ, ಅಜ್ಜಂಪುರ ತಾಲ್ಲೂಕು ಕೃಷಿ ಸಮಾಜದ ಅಧ್ಯಕ್ಷ ಸಿದ್ದಬಸಪ್ಪ, ಎರಡು ತಾಲ್ಲೂಕುಗಳ ಕೃಷಿ ಸಮಾಜದ ಪದಾಧಿಕಾರಿಗಳು, ಪಿಎಲ್‍ಡಿ ಬ್ಯಾಂಕ್ ನಿರ್ದೇಶಕ ತಮ್ಮಯ್ಯ, ಬಸವರಾಜು, ರೈತರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.