
ನರಸಿಂಹರಾಜಪುರದ ಕೃಷಿ ಇಲಾಖೆಯಲ್ಲಿ ಬುಧವಾರ ನಡೆದ ರಾಷ್ಟ್ರೀಯ ರೈತ ದಿನಾಚರಣೆಯಲ್ಲಿ ಜಿಲ್ಲಾ ಮಟ್ಟದ ಭತ್ತದ ಬೆಳೆಯಲ್ಲಿ ವಿಜೇತರಾದ ರೈತರನ್ನು ಸನ್ಮಾನಿಸಲಾಯಿತು
ನರಸಿಂಹರಾಜಪುರ: ಯುವ ಜನಾಂಗವನ್ನು ಕೃಷಿಯತ್ತ ಆಕರ್ಷಿಸುವ ಕಾರ್ಯ ಮಾಡಬೇಕಾಗಿದೆ ಎಂದು ಶಿವಮೊಗ್ಗ ಭದ್ರಾ ಅಚ್ಚಕಟ್ಟು ಪ್ರದೇಶಾಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ಪಿ.ಅಂಶುಮಂತ್ ಹೇಳಿದರು.
ಇಲ್ಲಿನ ತಾಲ್ಲೂಕು ಕೃಷಿ ಇಲಾಖೆಯ ಸಭಾಂಗಣದಲ್ಲಿ ಬುಧವಾರ ತಾಲ್ಲೂಕು ಕೃಷಿಕ ಸಮಾಜ ಮತ್ತು ಕೃಷಿ ಇಲಾಖೆಯ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸ್ಥಳೀಯವಾಗಿ ರೈತರು ಕಿರು ಉದ್ಯಮ ಸ್ಥಾಪಿಸುವ ಮೂಲಕ ತಾವು ಬೆಳೆದ ಉತ್ಪನ್ನಗಳನ್ನು ಸಂಸ್ಕರಣೆ, ಮಾರಾಟ ಮತ್ತು ಬ್ರ್ಯಾಂಡಿಂಗ್ ಮಾಡುವ ಜಾಗತಿಕ ಮಾರುಕಟ್ಟೆ ಕಂಡುಕೊಳ್ಳಬಹುದು. ಇಂತಹ ಆಹಾರ ಸಂಸ್ಕರಣ ಉದ್ಯಮ ಆರಂಭಿಸಲು ಪಿಎಂಎಸ್ ಎಂಇ ಯೋಜನೆಯ ಮೂಲಕ ಕೆಪೆಕ್ಸ್ ಸಂಸ್ಥೆಯಿಂದ ರೈತರಿಗೆ ವೈಯಕ್ತಿಕ ₹3 ಲಕ್ಷದಿಂದ ₹15 ಲಕ್ಷದವರೆಗೆ, ಸ್ವಸಹಾಯ ಸಂಘಗಳಿಗೆ ₹30 ಲಕ್ಷದವರೆಗೆ ಸರ್ಕಾರ ನೆರವು ನೀಡುತ್ತಿದೆ. ಇಂತಹ ಯೋಜನೆಗಳ ಬಗ್ಗೆ ರೈತರು ಅರಿವು ಹೊಂದಿ ಆದಾಯ ವೃದ್ಧಿಸಿಕೊಳ್ಳುವ ಕಾರ್ಯ ಮಾಡಬೇಕು ಎಂದರು.
ರೈತರ ಕೃಷಿಯಲ್ಲಿ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಳ್ಳಬೇಕು. ಉತ್ಪಾದಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಣ್ಣು ಪರೀಕ್ಷೆ ಅತ್ಯಂತ ಅಗತ್ಯ. ಕೇವಲ ದಾಖಲೆಗಳಿಗಾಗಿ ಮಣ್ಣು ಪರೀಕ್ಷೆ ಮಾಡದೆ ಕೃಷಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡುವುದರ ಮೂಲಕ, ಗ್ರಾಮ ಸಭೆಗಳಲ್ಲಿ ಮಣ್ಣು ಪರೀಕ್ಷೆಯ ಬಗ್ಗೆ ರೈತರಿಗೆ ಅರಿವು ಮೂಡಿಸಬೇಕು. ಏಕ ಬೆಳೆಗಿಂತಲೂ ಮಿಶ್ರ ಬೆಳೆ ಬೆಳೆಯುವತ್ತ ಗಮನಹರಿಸಬೇಕು ಎಂದರು.
ಜಿಲ್ಲಾ ಕೃಷಿಕ ಸಮಾಜದ ಪ್ರಧಾನ ಕಾರ್ಯದರ್ಶಿ ಪಿ.ಕೆ. ಬಸವರಾಜಪ್ಪ ಮಾತನಾಡಿ, ರೈತರು ಅನೇಕ ಸಂಕಷ್ಟ ಎದುರಿಸುತ್ತಿದ್ದಾರೆ. ರೈತರ ಬಗ್ಗೆ ಕರುಣೆ ತೋರಿಸುವ ದಯಾಪರತೆ ಯಾರಲ್ಲೂ ಇಲ್ಲವಾಗಿದೆ. ಪ್ರಸ್ತುತ ಮಲೆನಾಡು ಭಾಗದ ರೈತರು ಅಡಿಕೆ ಬೆಳೆಗೆ ಎಲೆಚುಕ್ಕಿ ರೋಗ, ಹಳದಿ ಎಲೆ ರೋಗದ ಸಮಸ್ಯೆ ಎದುರಿಸುತ್ತಿದ್ದಾರೆ. ಭತ್ತ ಬೆಳೆದರೂ ಬೆಂಬಲ ಬೆಲೆಯಲ್ಲಿ ಕೊಳ್ಳಲು ಭತ್ತ ಖರೀದಿ ಕೇಂದ್ರವೇ ಆರಂಭವಾಗುವುದಿಲ್ಲ. ಬೆಳೆ ಪಾವತಿಸಿದರೂ ಬೆಳೆ ವಿಮೆ ಪಾವತಿಸಿದ ಮೊತ್ತಕ್ಕಿಂತ ಕಡಿಮೆ ಹಣ ಬರುತ್ತಿದೆ. ಕೆಲವರಿಗೆ ಹಣವೂ ಬಂದಿಲ್ಲ. ಶೇ 70ರಷ್ಟು ಜನರು ರೈತಾಪಿ ವೃತ್ತಿ ಅವಲಂಭಿಸಿದ್ದರೂ ರೈತರಲ್ಲಿ ಒಗ್ಗಟ್ಟು ಇಲ್ಲವಾಗಿದೆ. ರೈತರು ಸಂಘಟನಾತ್ಮಕವಾಗಿ ಹೋರಾಡಿದರೆ ಮಾತ್ರ ನ್ಯಾಯ ಸಿಗಲು ಸಾಧ್ಯ ಎಂದರು.
ತಾಲ್ಲೂಕು ಸಹಾಯಕ ಕೃಷಿ ಅಧಿಕಾರಿ ಮಹೇಶ್ ಮಾತನಾಡಿದರು. ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಬಿ.ಕೆ.ನಾರಾಯಣಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.
ಸಾಂಬಾರು ಮಂಡಳಿಯ ನಿವೃತ್ತ ಅಧಿಕಾರಿ ಶ್ರೀನಿವಾಸ್ ಉಪನ್ಯಾಸ ನೀಡಿದರು. ತಹಶೀಲ್ದಾರ್ ನೂರುಲ್ ಹುದಾ, ತಾಲ್ಲೂಕು ಕೃಷಿಕ ಸಮಾಜದ ಉಪಾಧ್ಯಕ್ಷ ಬಿ.ಜಿ.ಮಂಜಪ್ಪಗೌಡ, ಕಾರ್ಯದರ್ಶಿ ನವೀನ್, ನಿರ್ದೇಶಕರಾದ ವೈ.ಎಸ್.ರವಿ, ಎನ್.ಪಿ.ರಮೇಶ್, ರಂಜಿತ್, ನಾಗರಾಜ್, ಸುಪ್ರಿತಾ, ತಿಮ್ಮಣ್ಣ, ತೀರ್ಥೆಶ್ವರ್, ಕೃಷಿ ಇಲಾಖೆಯ ಅರುಣ್ ಕುಮಾರ್ ಹಾಜರಿದ್ದರು.
ಹೈನುಗಾರಿಕೆಯಿಂದ ರೈತರ ಆದಾಯ ವೃದ್ಧಿಯಾಗಲಿದ್ದು, ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪಿಸುವ ನಿಟ್ಟಿನಲ್ಲಿ ರೈತರು ಒಗ್ಗಟ್ಟಿನಿಂದ ಹೋರಾಟ ಮಾಡಬೇಕುಕೆ.ಪಿ.ಅಂಶುಮಂತ್, ಭದ್ರಾ ಕಾಡಾ ನಿಗಮದ ಅಧ್ಯಕ್ಷ
ಭತ್ತದ ಬೆಳೆ ಸ್ಪರ್ಧೆ: ವಿಜೇತರಿಗೆ ಸನ್ಮಾನ
ಭತ್ತದ ಬೆಳೆಯಲ್ಲಿ ಮಹಿಳಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ರತ್ನಮ್ಮ, ತೃತೀಯ ಸ್ಥಾನ ಪಡೆದ ಅನಸೂಯ, ಪುರುಷರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಕೆ.ವಿ.ಉಮೇಶ್, ಎರಡನೇ ಸ್ಥಾನ ಪಡೆದ ಅರವಿಂದ, ಮೂರನೇ ಸ್ಥಾನ ಪಡೆದ ರೇವಣ್ಣಪ್ಪ, ತಾಲ್ಲೂಕು ಮಟ್ಟದ ಭತ್ತದ ಬೆಳೆಯಲ್ಲಿ ಮಹಿಳಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ವೆಂಕಮ್ಮ, ದ್ವಿತೀಯ ಸ್ಥಾನ ಪಡೆದ ಸುಂದ್ರಮ್ಮ, ಮೂರನೇ ಸ್ಥಾನ ಪಡೆದ ಕೊಲ್ಲಮ್ಮ, ಪುರುಷರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಕುಮಾರೇಗೌಡ, ದ್ವಿತೀಯ ಸ್ಥಾನ ಪಡೆದ ಜಿ.ಆರ್.ಮಂಜುನಾಥ್, 3ನೇ ಸ್ಥಾನ ಪಡೆದ ರತ್ನಾಕರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಹಿರಿಯ ರೈತರಾದ ಬಿ.ಕೆ.ಜಾಕೀರಾಂ, ವಿನಾಯಕ್ ಮಾಳೂರುದಿಣ್ಣೆ ಅವರನ್ನು ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.