ADVERTISEMENT

ಚಿಕ್ಕಮಗಳೂರು: ಹಲವೆಡೆ ಜಲಸ್ತಂಬನ, ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2025, 6:52 IST
Last Updated 4 ಅಕ್ಟೋಬರ್ 2025, 6:52 IST
ಚಿಕ್ಕಮಗಳೂರು ತಾಲ್ಲೂಕಿನ ಬೀಕನಹಳ್ಳಿಯಲ್ಲಿ ನಡೆದ ಜಂಬೂ ಸವಾರಿ ಮೆರವಣಿಗೆಯಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಭಾಗವಹಿಸಿದ್ದರು
ಚಿಕ್ಕಮಗಳೂರು ತಾಲ್ಲೂಕಿನ ಬೀಕನಹಳ್ಳಿಯಲ್ಲಿ ನಡೆದ ಜಂಬೂ ಸವಾರಿ ಮೆರವಣಿಗೆಯಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಭಾಗವಹಿಸಿದ್ದರು   

ಚಿಕ್ಕಮಗಳೂರು: ನವರಾತ್ರಿ ನಾಡ ಹಬ್ಬದ ಅಂಗವಾಗಿ ವಿವಿಧೆಡೆ ದುರ್ಗಾದೇವಿ ಜಲಸ್ತಂಭನ, ಮಹಿಷಾಸುರ ದಹನ, ಶಾರದಮಾತೆ ಮೆರವಣಿಗೆ, ಅಂಬು ಹೊಡೆಯುವ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ನಾಡಹಬ್ಬಕ್ಕೆ ತೆರೆ ಬಿದ್ದಿದೆ.

ನಗರದ ವಿಜಯಪುರದಲ್ಲಿ 9ದಿನ ಪ್ರತಿಷ್ಠಾಪಿಸಿದ್ದ ದುರ್ಗಾದೇವಿಯನ್ನು ಗುರುವಾರ ರಾತ್ರಿ ಜಲಸ್ತಂಭನಗೊಳಿಸಲಾಯಿತು. ದೇವಿಯನ್ನು ಅಲಂಕೃತ ಮಂಟಪದಲ್ಲಿ ಕೂರಿಸಿ ವಿವಿಧ ಕಲಾತಂಡಗಳೊಂದಿಗೆ ನಗರದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು. ಮೆರವಣಿಗೆ ನಂತರ ಮಹಿಷಾಸುರ ದಹನ ಕಾರ್ಯ ನಡೆಯಿತು. ಇಂದಾವರ ಕೆರೆಯಲ್ಲಿ ದೇವಿಯನ್ನು ವಿಸರ್ಜಿಸಲಾಯಿತು.

ತಾಲ್ಲೂಕಿನ ಮರ್ಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗರಹಳ್ಳಿಯಲ್ಲಿ ಪಟೇಲ್‌ ರಾಜು ಅವರ ಸಾರಥ್ಯದಲ್ಲಿ ವಿಜಯ ದಶಮಿಯಂದು ಸಾಂಪ್ರದಾಯಿಕ ಪೂಜಾ ವಿಧಿ ವಿಧಾನಗಳ ಮೂಲಕ ಅಂಬು ಹೊಡೆದು ಗ್ರಾಮಸ್ಥರು ಸಂಭ್ರಮಿಸಿದರು. 

ADVERTISEMENT

ನವರಾತ್ರಿ ಕೊನೆಯ ದಿನವಾದ ವಿಜಯದಶಮಿಯಂದು ಕಾಳಿಕಾಂಬ ಸೇವಾ ಸಮಿತಿಯಿಂದ ರಾಮನಹಳ್ಳಿ ಸಮೀಪದ ರತ್ನಗಿರಿ ಬೋರೆಯಲ್ಲಿ ಕಾಳಿಕಾಂಬ ದೇವಿಗೆ ವಿಶೇಷ ಪೂಜೆ ಹಾಗೂ ಹೋಮಗಳನ್ನು ನಡೆಸಲಾಯಿತು.

ಬೆಳಿಗ್ಗೆ 6.30ಕ್ಕೆ ಧ್ವಜಾರೋಹಣ, ದೇವತಾ ಪ್ರಾರ್ಥನೆ, ಸಂಕಲ್ಪ ಗಣಪತಿ ಪೂಜೆ, ಪುಣ್ಯಾಹ, ದೇವನಾಂದಿ, ಕಳಸ ಸ್ಥಾಪನೆ, ಹೋಮಗಳು ಜರುಗಿದವು.

ಬೀಕನಹಳ್ಳಿಯಲ್ಲಿ ದಸರಾ ಹಬ್ಬದ ಅಂಗವಾಗಿ ಜಂಬೂ ಸವಾರಿಯೊಂದಿಗೆ ಅಂಬು ಒಡೆಯುವ ಕಾರ್ಯಕ್ರಮ ನಡೆಯಿತು. ಮೆರವಣಿಗೆಯಲ್ಲಿ ಬಣ್ಣ ಬಣ್ಣದ ಸಿಡಿಮದ್ದು, ಬಸವನ ಅಲಂಕಾರ, ಡೊಳ್ಳು ಕುಣಿತ, ಭಜನೆ, ಚಟ್ಟಿಮೇಳ, ಕೋಲಾಟ, ಜಾನಪದ ನೃತ್ಯ, ಹೆಣ್ಣು ಮಕ್ಕಳಿಂದ ಆರತಿ, ಭಕ್ತರ ಮನಸೂರೆಗೊಂಡಿತು.

ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ಚಾಮುಂಡೇಶ್ವರಿ ಸುಕ್ಷೇತ್ರ ಸೇವಾ ಸಮಿತಿಯ ಅಧ್ಯಕ್ಷ ಬಿ.ಪಿ ನಂಜಪ್ಪ, ಉಪಾಧ್ಯಕ್ಷ ಬಿ.ಎಚ್ ಗುರುಬಸಪ್ಪ, ಕಾರ್ಯದರ್ಶಿ ಬಿ.ಎಂ. ಯೋಗಾನಂದ್, ಖಜಾಂಚಿ ಬಿ.ಎಚ್ ಸೋಮೇಗೌಡ, ಸದಸ್ಯರಾದ ನಂಜುಂಡಪ್ಪ, ಗುರುಸಿದ್ದಪ್ಪ, ಯತಿರಾಜ್, ಲೋಕನಾಥ್, ಎಚ್.ಪಿ ಮಂಜೇಗೌಡ, ರಂಗಪ್ಪ, ಬಿ.ಎಂ. ನಾಗರಾಜು, ಲಲಿತಾ ಬಸವರಾಜ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.