ADVERTISEMENT

‘ಡಿಮ್‌ಡಿಪ್‌’ಗೆ ಅಲಕ್ಷ್ಯ; ಅಪಘಾತ ‘ಕಂಟಕ’

 ರಾತ್ರಿ ಹೊತ್ತು ವಾಹನ ಸಂಚಾರ ಪಡಿಪಾಟಲು

ಬಿ.ಜೆ.ಧನ್ಯಪ್ರಸಾದ್
Published 4 ಮೇ 2019, 20:27 IST
Last Updated 4 ಮೇ 2019, 20:27 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಚಿಕ್ಕಮಗಳೂರು: ರಾತ್ರಿ ಹೊತ್ತು ವಾಹನ ಚಲಾಯಿಸುವಾಗ ಹೆಡ್‌ಲೈಟ್‌ ‘ಡಿಮ್‌–ಡಿಪ್‌’ ಮಾಡುವುದನ್ನು ಬಹಳಷ್ಟು ಚಾಲಕರು ಪಾಲಿಸದಿರುವುದು ಸಂಚಕಾರವಾಗಿ ಪರಿಣಮಿಸಿದೆ. ಕಣ್ಣು ಚುಚ್ಚುವಂಥ ಬೆಳಕಿನಲ್ಲಿ ದೃಷ್ಟಿ ಹಾಯಿಸಿಕೊಂಡು ಸಂಚರಿಸುವುದೇ ಸವಾಲಾಗಿದೆ.

ಪ್ರಖರ ಬೆಳಕು ಹೊರಸೂಸುವ ‘ಹ್ಯಾಲೋಜನ್‌’, ‘ರೇಡಿಯಂ’, ‘ಎಲ್‌ಇಡಿ’, ‘ಹೈ ಬೀಮ್‌’ ಮೊದಲಾದ ಲೈಟುಗಳನ್ನು ಬಹಳಷ್ಟು ವಾಹನಗಳಲ್ಲಿ ಅಳವಡಿಸಿರುತ್ತಾರೆ. ಕೆಲ ವಾಹನಗಳಲ್ಲಿ ಐದಾರು ಲೈಟುಗಳು ಇರುತ್ತವೆ. ಹೆಡ್‌ಲೈಟ್‌ ಫೋಕಸ್‌ನಲ್ಲಿ ಎದುರುಗಡೆ ಗಾಡಿಗಳವರು ದೃಷ್ಟಿ ಹಾಯಿಸುವುದಕ್ಕೆ ಪೀಕಲಾಟ ಪಡಬೇಕು.

‘ಬಹಳಷ್ಟು ಮಂದಿ ಡಿಮ್‌–ಡಿಪ್‌ ಮಾಡಲು ಉದಾಸೀನ. ಹೆಡ್‌ಲೈಟ್‌ಗಳ ಪ್ರಖರ ಬೆಳಕಿಗೆ ಕಣ್ಣುಬಿಡುವುದೇ ಕಷ್ಟ. ಆ ಕಡೆ, ಈ ಕಡೆ ಏನಿದೆ ಎಂಬುವುದು ಗೋಚರಿಸುವುದಿಲ್ಲ. ರಾತ್ರಿ ಹೊತ್ತಿನಲ್ಲಿ ವಾಹನ ಓಡಿಸಲು ಭಯವಾಗುತ್ತದೆ. ಪೊಲೀಸರು, ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಈ ನಿಟ್ಟಿನಲ್ಲಿ ನಿಗಾವಹಿಸಬೇಕು’ ಎಂದು ಎಲೆಕ್ಟ್ರಿಷಿಯನ್‌ ಸತೀಶ್‌ ರಾವ್‌ ಹೇಳುತ್ತಾರೆ.

ADVERTISEMENT

ಪ್ರಾದೇಶಿಕ ಸಾರಿಗೆ ಇಲಾಖೆಯ ಅಂಕಿಅಂಶಗಳ ಪ್ರಕಾರ ಈ ಮಾ‌ರ್ಚ್‌ ಅಂತ್ಯಕ್ಕೆ ಜಿಲ್ಲೆಯಲ್ಲಿ 3.12 ಲಕ್ಷ ವಾಹನಗಳು ಇವೆ. ವರ್ಷಕ್ಕೆ ಸುಮಾರು 25 ಸಾವಿರ ವಾಹನಗಳು ನೋಂದಣಿಯಾಗುತ್ತವೆ. ಮಲೆನಾಡು ಮತ್ತು ಭೌಗೋಳಿಕೆ ವೈಶಿಷ್ಟ್ಯ, ನಿಸರ್ಗ ಸೊಬಗಿನ ಪ್ರವಾಸಿ ತಾಣಗಳ ಈ ಜಿಲ್ಲೆಗೆ ವಿಧೆಡೆಗಳಿಂದ ನಿತ್ಯ ಸಹಸ್ರಾರು ವಾಹನಗಳು ಬಂದುಹೊಗುತ್ತವೆ. ಹೆದ್ದಾರಿ, ಘಾಟಿ ಮಾರ್ಗ, ಗಿರಿಶ್ರೇಣಿ, ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ ಇದ್ದೇ ಇರುತ್ತದೆ.

‘ಚಾಲನಾ ಪರವಾನಗಿ ನೀಡುವಾಗ ಮಾರ್ಗದರ್ಶನ ನೀಡಿರುತ್ತೇವೆ. ಪಾಲನೆ ಮಾಡುವವರು ಕಡಿಮೆ. ರಾತ್ರಿ ಹೊತ್ತಿನಲ್ಲಿ ಅಪಘಾತಗಳು ಸಂಭವಿಸುವುದು ಹೆಚ್ಚಾಗಿದೆ. ಜಿಲ್ಲೆಯಲ್ಲಿ ಅಪಘಾತ ವಲಯಗಳನ್ನು ಗುರುತಿಸಲಾಗಿದೆ. ಫಲಕಗಳನ್ನು ಅಳವಡಿಸಲು, ಕ್ರಮ’ ಎಂದು ಚಿಕ್ಕಮಗಳೂರಿನ ಆರ್‌ಟಿಒ ಕಚೇರಿ ಅಧಿಕಾರಿಯೊಬ್ಬರು ಹೇಳುತ್ತಾರೆ.

‘ನಿಯಮ ಪಾಲಿಸದವರ, ಉಡಾಫೆ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಬೇಕು. ಆರ್‌ಟಿಒ ಮತ್ತು ಪೊಲೀಸರು ಜಂಟಿಯಾಗಿ ನಿರಂತರವಾಗಿ ಗಸ್ತು ಕಾರ್ಯಾಚರಣೆ ಮಾಡಿ ‘ಚಳಿ’ ಬಿಡಿಸಬೇಕು. ಅರಿವು ಮೂಡಿಸುವುದರ ಜತೆಗೆ ತಪಾಸಣೆ ಬಿಗಿಗೊಳಿಸಿದರೆ ಕಡಿವಾಣ ಹಾಕಲು ಸಾಧ್ಯ’ ಎಂದು ಚಾಲಕ ಎಸ್‌.ಸಿ.ಮಂಜುನಾಥ್‌ ಹೇಳುತ್ತಾರೆ.

ಮಲೆನಾಡು ಭಾಗ, ಘಾಟಿ ಮಾರ್ಗ, ಗಿರಿಶ್ರೇಣಿ ರಸ್ತೆಗಳಲ್ಲಿ ಹಠಾತ್‌ ತಿರುವುಮುರುವುಗಳು ಹೆಚ್ಚು ಇವೆ. ಕೆಲವೊಮ್ಮೆ ನಸುಕಿನಲ್ಲಿ ಮಂಜು ಮುಸುಕಿರುತ್ತದೆ. ಈ ಭಾಗಗಳಲ್ಲಿ ವಾಹನಗಳನ್ನು ಚಲಾಯಿಸುವುದೇ ಸಾಹಸ. ಪ್ರವಾಸಿ ವಾಹನಗಳ ಕೆಲವರು ತಿರುವುಮುರುವುಗಳನ್ನು ಲೆಕ್ಕಿಸದೆ ಯದ್ವಾತದ್ವಾವಾಗಿ ವಾಹನಗಳನ್ನು ಚಲಾಯಿಸುತ್ತಾರೆ. ಜಿಲ್ಲೆಯಲ್ಲಿ 2018ರಲ್ಲಿ (ಜನವರಿಯಿಂದ ಡಿಸೆಂಬರ್‌ಗೆ) 164 ರಸ್ತೆ ಅಪಘಾತ ಪ್ರಕರಣ ಸಂಭವಿಸಿದ್ದು, ಅಪಘಾತಗಳಲ್ಲಿ 170 ಮಂದಿ ಮೃತಪಟ್ಟಿದ್ದಾರೆ.‘ರಾತ್ರಿ ವಾಹನ ಓಡಿಸುವುದು ದೊಡ್ಡ ತಲೆನೋವಾಗಿದೆ. ಡಿಮ್‌–ಡಿಪ್‌ ಮಾಡದಿರುವುದರಿಂದ ಎದುರಿಗೆ ಯಾವ ವಾಹನ ಬರುತ್ತಿದೆ ಎಂಬುದೇ ಗೋಚರಿಸಲ್ಲ. ಕೆಲವೊಮ್ಮೆ ಟ್ರಾಕ್ಟರ್‌, ಲಾರಿ, ಜೀಪುಗಳವರು ಒಂದೇ ಹೆಡ್‌ಲೈಟ್‌ ಹಾಕಿಕೊಂಡು ಸಂಚರಿಸುತ್ತಾರೆ. ಒಂದು ಲೈಟು ಇರುವುದನ್ನು ನೋಡಿ ಬೈಕು ಇರಬೇಕು ಎಂದು ಎಣಿಸಿ ಮುಂದೆ ಚಲಿಸಿ ಅನಾಹುತವಾಗಿರುವ ಹಲವಾರು ನಿದರ್ಶನಗಳು ಇವೆ’ ಎಂದು ಕೆಎಸ್‌ಆರ್‌ಟಿಸಿ ಚಾಲಕ ಮಂಜುನಾಥ್‌ ಹೇಳುತ್ತಾರೆ.

****

ತಪಾಸಣೆ ಕಾರ್ಯಾಚರಣೆ ನಡೆಸಿ ನಿಗಾ ವಹಿಸಲಾಗುವುದು. ಹೆಡ್‌ಲೈಟ್‌ ವಿಷಯದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಜನರಲ್ಲಿ ಅರಿವು ಮೂಡಿಸುದಕ್ಕೆ ಒತ್ತು ನೀಡಲಾಗುವುದು. ಅಪಘಾತ ವಲಯ ಸಹಿತ ವಿವಿಧೆಡೆಗಳಲ್ಲಿ ಫಲಕಗಳನ್ನು ಅಳವಡಿಸಲಾಗುವುದು.

–ಮುರುಗೇಂದ್ರ ಶಿರೋಳ್ಕರ್‌, ಪ್ರಾದೇಶಿಕ ಸಾರಿಗೆ ಪ್ರಭಾರ ಅಧಿಕಾರಿ, ಚಿಕ್ಕಮಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.