
ಗಡಿಗೇಶ್ವರ(ನರಸಿಂಹರಾಜಪುರ): ವಿದ್ಯಾರ್ಥಿಗಳು ಪತ್ರಿಕೆಯನ್ನು ಓದಿ ಜ್ಞಾನ ಹೆಚ್ಚಿಸಿಕೊಳ್ಳಬೇಕು ಎಂದು ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ಗೇರುಬೈಲು ನಟರಾಜ್ ಹೇಳಿದರು.
ಗಡಿಗೇಶ್ವರ ಸರ್ಕಾರಿ ಪ್ರೌಢಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ತಾವು ಪ್ರಾಯೋಜಿಸಿದ್ದ ‘ಪ್ರಜಾವಾಣಿ’ ಎಸ್‌ಎಸ್‌ಎಲ್‌ಸಿ ಪರೀಕ್ಷಾ ದಿಕ್ಸೂಚಿಯನ್ನು ಶುಕ್ರವಾರ ಬಿಡುಗಡೆ ಮಾಡಿ ಅವರು ಮಾತನಾಡಿದರು.
‘ಪ್ರಜಾವಾಣಿ’ಯಲ್ಲಿ ಪ್ರಕಟವಾಗುವ ಎಸ್‌ಎಸ್‌ಎಲ್‌ಸಿ ದಿಕ್ಸೂಚಿ ಓದಿ ಉತ್ತಮ ಅಂಕಗಳನ್ನು ಪಡೆದು ಭವಿಷ್ಯ ರೂಪಿಸಿಕೊಳ್ಳಬೇಕು. ಒಳ್ಳೆಯ ಉದ್ದೇಶದಿಂದ ಮಕ್ಕಳಿಗೆ ಪತ್ರಿಕೆ ನೀಡಿದ್ದು, ಬೆಳವಣಿಗೆಗೆ ಪೂರಕವಾಗಿ ಬಳಸಿಕೊಳ್ಳಬೇಕು ಎಂದರು.
ಶಾಲೆಯ ಮುಖ್ಯಶಿಕ್ಷಕ ಮಂಜುನಾಥ್ ಮಾತನಾಡಿ, ‘ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದ್ದು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದು, ಸುತ್ತಮುತ್ತಲಿನ ಗ್ರಾಮದ ಮಕ್ಕಳು ಶಾಲೆಗೆ ದಾಖಲಾಗುವಂತೆ ಮಾಡಬೇಕು. ಮಕ್ಕಳಿಗೆ ದಾನಿಗಳ ಮೂಲಕ ಪತ್ರಿಕೆ ಉಚಿತವಾಗಿ ಲಭಿಸಿದರೂ ದಾನ ನೀಡುವವರು ಅದರ ವೆಚ್ಚ ಬರಿಸುತ್ತಾರೆ. ಹಣವಿರುವುದು ಮುಖ್ಯವಲ್ಲ, ಇರುವ ಹಣವನ್ನು ಸಮಾಜಮುಖಿ ಕಾರ್ಯಗಳಿಗೆ ಹಂಚುವುದು ಮುಖ್ಯ. ಗೇರುಬೈಲು ನಟರಾಜ್ ಅವರು ಶಾಲೆಯ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಹಲವಾರು ವರ್ಷಗಳಿಂದ ‘ಪ್ರಜಾವಾಣಿ’ ಪತ್ರಿಕೆಯನ್ನು ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕವಾಗಿ ಕೊಡುತ್ತಿದ್ದಾರೆ. ಅವರ ಸಹಕಾರ ಇನ್ನೂ ಮುಂದೆಯೂ ಹೀಗೆಯೇ ಮುಂದುವರೆಯಲಿ’ ಎಂದು ಆಶಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ದೈಹಿಕ ಶಿಕ್ಷಣ ಶಿಕ್ಷಕ ರಾಘವೇಂದ್ರ, ‘ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಆರ್ಥಿಕವಾಗಿ ಹಿಂದುಳಿದಿರುವುದರಿಂದ ದಾನಿಗಳ ಮೂಲಕ ‘ಪ್ರಜಾವಾಣಿ’ ಪತ್ರಿಕೆಯನ್ನು ಕೊಡುವ ವ್ಯವಸ್ಥೆ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಪಠ್ಯದ ವಿಷಯದ ಜತೆಗೆ ಪ್ರಚಲಿತ ವಿದ್ಯಮಾನ ತಿಳಿದುಕೊಳ್ಳಲು ದಿನಪತ್ರಿಕೆ ಪೂರಕವಾಗಿದೆ’ ಎಂದರು.
ಸಹ ಶಿಕ್ಷಕಿ ಗೀತಾ, ವಿದ್ಯಾರ್ಥಿನಿಯರಾದ ಸಿಂಚನ ಮತ್ತು ಸಿಂಚನ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.
‘ಪ್ರಜಾವಾಣಿ’ ಪತ್ರಿಕೆ ನೀಡಿರುವುದರಿಂದ ಪ್ರತಿನಿತ್ಯ ಪತ್ರಿಕೆ ಓದುವ ಹವ್ಯಾಸ ಬೆಳೆಯಿತು. 10ನೇ ತರಗತಿಯ ಪಠ್ಯವಾರು ವಿಷಯಗಳನ್ನು ತಿಳಿದುಕೊಳ್ಳಲು ಸಹಾಯಕವಾಯಿತು. ಇದರಲ್ಲಿ ದ್ವಿತೀಯ ಪಿಯುಸಿ ಪಠ್ಯದ ವಿಷಯವೂ ಬರುವುದರಿಂದ ಮನೆಯಲ್ಲಿ ನಮ್ಮ ಅಕ್ಕನ ಓದಿಗೂ ಸಹಾಯವಾಯಿತು. ಪತ್ರಿಕೆ ನೀಡಿದ ನಟರಾಜ್ ಅವರಿಗೆ ಧನ್ಯವಾದಗಳು ತಿಳಿಸುತ್ತೇನೆ ಎನ್ನುತ್ತಾರೆ 10ನೇ ತರಗತಿ ವಿದ್ಯಾರ್ಥಿ ಶ್ರೇಯಸ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.