ADVERTISEMENT

ಕೊಪ್ಪ | ಕಾರ್ಯಕರ್ತರಿಗೆ ಬಲ ತುಂಬುವ ಕೆಲಸ: ನಿಖಿಲ್ ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 25 ಜುಲೈ 2025, 2:50 IST
Last Updated 25 ಜುಲೈ 2025, 2:50 IST
ಕೊಪ್ಪದಲ್ಲಿ ಜೆಡಿಎಸ್ ಸದಸ್ಯತ್ವ ನೋಂದಣಿ ಅಭಿಯಾನ ಕಾರ್ಯಕ್ರಮವನ್ನು ರಾಜ್ಯ ಯುವ ಜೆಡಿಎಸ್ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಉದ್ಘಾಟಿಸಿದರು. ಸುಧಾಕರ ಎಸ್.ಶೆಟ್ಟಿ, ಎಚ್.ಕೆ.ಕುಮಾರಸ್ವಾಮಿ, ರಂಜನ್ ಅಜಿತ್ ಕುಮಾರ್ ಭಾಗವಹಿಸಿದ್ದರು
ಕೊಪ್ಪದಲ್ಲಿ ಜೆಡಿಎಸ್ ಸದಸ್ಯತ್ವ ನೋಂದಣಿ ಅಭಿಯಾನ ಕಾರ್ಯಕ್ರಮವನ್ನು ರಾಜ್ಯ ಯುವ ಜೆಡಿಎಸ್ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಉದ್ಘಾಟಿಸಿದರು. ಸುಧಾಕರ ಎಸ್.ಶೆಟ್ಟಿ, ಎಚ್.ಕೆ.ಕುಮಾರಸ್ವಾಮಿ, ರಂಜನ್ ಅಜಿತ್ ಕುಮಾರ್ ಭಾಗವಹಿಸಿದ್ದರು   

ಕೊಪ್ಪ: ‘ಗ್ರಾಮ ಪಂಚಾಯಿತಿ ರಾಜಕಾರಣದ ಬೇರು ಇದ್ದಂತೆ, ಕಾರ್ಯಕರ್ತರು ಪಕ್ಷದ ಉಳಿವಿಗಾಗಿ ಶ್ರಮಿಸುತ್ತಿದ್ದಾರೆ. ಅವರಿಗೆ ಬಲ ತುಂಬುವ ಕೆಲಸ ಮಾಡಲಾಗುತ್ತದೆ’ ಎಂದು ರಾಜ್ಯ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.

ಎಂ.ಎಸ್.ದ್ಯಾವೇಗೌಡ ಸ್ಮಾರಕ ಒಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಜೆಡಿಎಸ್ ಪಕ್ಷದ ಸದಸ್ಯತ್ವ ನೋಂದಣಿಗೆ ಗುರುವಾರ ಚಾಲನೆ ನೀಡಿ ಮಾತನಾಡಿದ ಅವರು, ‘ಪಕ್ಷದ ವರಿಷ್ಠ ದೇವೇಗೌಡರು, ನಾಯಕ ಕುಮಾರಣ್ಣ ಅವರು 60 ದಿನಗಳಲ್ಲಿ ನೋಂದಣಿ ಪೂರ್ಣಗೊಳಿಸುವಂತೆ ಸೂಚಿಸಿದ್ದರು. ಇನ್ನು 30 ದಿನಗಳಲ್ಲಿ ಪೂರ್ಣಗೊಳಿಸಬೇಕಾಗಿದೆ’ ಎಂದರು.

ಶೃಂಗೇರಿ ಕ್ಷೇತ್ರದಲ್ಲಿ ಸುಧಾಕರ ಶೆಟ್ಟಿ ಅವರ ನೇತೃತ್ವದಲ್ಲಿ ಪಕ್ಷ ಬಲಿಷ್ಠಗೊಳಿಸಬೇಕು. ಜನರ ಪ್ರೀತಿ ನಮ್ಮ ಆಸ್ತಿಯಾಗಬೇಕು. ಸುಧಾಕರ್ ಅವರ ಮನಸಲ್ಲಿ ಸ್ವಾರ್ಥ ಇಟ್ಟುಕೊಂಡಿಲ್ಲ. ಎರಡು ರಾಷ್ಟ್ರೀಯ ಪಕ್ಷಗಳಲ್ಲೂ ಇರದ ಚಿನ್ನದಂತಹ ಕಾರ್ಯಕರ್ತರು ನಮ್ಮ ಜೆಡಿಎಸ್ ಪಕ್ಷದಲ್ಲಿ ಇದ್ದಾರೆ ಎಂದು ತಿಳಿಸಿದರು.

ADVERTISEMENT

‘ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ತಿಳಿದಿದ್ದೆವು. ಅವರ ಮೇಲೆ ಒಬ್ಬರು ಮುಖ್ಯಮಂತ್ರಿ ಇದ್ದಾರೆ ಎಂದು ಇತ್ತೀಚೆಗೆ ಗೊತ್ತಾಗಿದೆ. ಶಾಸಕರು ಅನುದಾನ ಕೊಡಿಸುವಂತೆ ಸುರ್ಜೆವಾಲ ಅವರನ್ನು ಕೇಳುವಂತಾಗಿದೆ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ರೈತರಿಗೆ ವಿದ್ಯುತ್‌ ಪರಿವರ್ತಕ ಅಳವಡಿಸಲು ₹25 ಸಾವಿರ ಇತ್ತು. ಆದರೆ, ಅದು ಈಗ ಎರಡೂವರೆ ಲಕ್ಷಕ್ಕೆ ಹೋಗಿದೆ, ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ’ ಎಂದರು.

ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಸುಧಾಕರ ಎಸ್.ಶೆಟ್ಟಿ ಮಾತನಾಡಿ, ‘ನಿಖಿಲ್ ಕುಮಾರಸ್ವಾಮಿ ಬಂದಾಗ ಶೃಂಗೇರಿ ಕ್ಷೇತ್ರದಲ್ಲಿ ರಾಜಕೀಯ ಕಂಪನ ಶುರುವಾಗಿದೆ. ಕುಮಾರಸ್ವಾಮಿ ಅವರ ಮಾತು ನನಗೆ ವೇದವಾಕ್ಯ. ಕುಮಾರಸ್ವಾಮಿ ಅವರನ್ನು ಒಂದು ಬಾರಿ ಮುಖ್ಯಮಂತ್ರಿಯಾಗಿ ನೋಡುವ ಆಸೆ, 2028ಕ್ಕೆ ಅದು ನೆರವೇರಲಿದೆ’ ಎಂದರು.

ಸಕಲೇಶಪುರ ಮಾಜಿ ಶಾಸಕ ಎಚ್.ಕೆ.ಕುಮಾರಸ್ವಾಮಿ ಮಾತನಾಡಿ, ‘ಎಲ್ಲಾ ಭಾಗ್ಯಗಳನ್ನು ಕೊಟ್ಟ ರಾಜ್ಯ ಸರ್ಕಾರ ಅಭಿವೃದ್ಧಿ ಶೂನ್ಯವಾಗಿದೆ. ಜಾನುವಾರುಗಳನ್ನು ಅರಣ್ಯಕ್ಕೆ ಬಿಡಬೇಡಿ ಎಂದು ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ. ಅವರ ಮನೆ ಬಾಗಿಲಿಗೆ ದನ–ಕರುಗಳನ್ನು ಕಟ್ಟೋಣ. ಇಲ್ಲವೇ ಮೇವಿನ ಭಾಗ್ಯ ಕೊಡಲಿ. ನಮ್ಮ ಪಕ್ಷ ಯಾವಾಗಲೂ ಮಲೆನಾಡು ಪರವಾಗಿ ನಿಲ್ಲುತ್ತದೆ’ ಎಂದು ತಿಳಿಸಿದರು.

ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ರಂಜನ್ ಅಜಿತ್ ಕುಮಾರ್, ಶೃಂಗೇರಿ ಕ್ಷೇತ್ರ ಕೋರ್ ಕಮಿಟಿ ಅಧ್ಯಕ್ಷ ಎಚ್.ಜಿ.ವೆಂಕಟೇಶ್, ಕಾರ್ಯದರ್ಶಿ ವಿನಯ್ ಕಣಿವೆ, ರಾಜ್ಯ ಮುಖಂಡರಾದ ರಶ್ಮಿ ರಾಮೇಗೌಡ, ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಕನ್ಯಾಕುಮಾರಿ, ಕ್ಷೇತ್ರ ಘಟಕದ ಅಧ್ಯಕ್ಷ ಭಂಡಿಗಡಿ ದಿವಾಕರ ಭಟ್, ತಾಲ್ಲೂಕು ಘಟಕದ ಅಧ್ಯಕ್ಷ ಕಗ್ಗಾ ರಾಮಸ್ವಾಮಿ, ಬಾಳೆಹೊನ್ನೂರಿನ ಗೋವಿಂದೆಗೌಡ, ಕುಸುಮ, ವಾಸಪ್ಪ ಕುಂಚೂರು, ಚಂದ್ರಶೇಖರ್, ಉದಯ್ ಸುವರ್ಣ, ಅನಿಲ್ ನಾರ್ವೆ, ಬದ್ರಿಯಾ ಮೊಹಮ್ಮದ್, ಹೊಸೂರ್ ಸುರೇಶ್, ಸಂಜಯ್ ಎಸ್.ಎಸ್., ಭರತ್, ದೀಪಕ್ ಮರಿಗೌಡ ಇದ್ದರು.

ಇತ್ತೀಚೆಗೆ ನಿಧನರಾದ ಜೆಡಿಎಸ್ ಮುಖಂಡ ಎಚ್.ಟಿ.ರಾಜೇಂದ್ರ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ತಾಲ್ಲೂಕು ಒಕ್ಕಲಿಗರ ಸಂಘ, ಬಂಟರ ಯಾನೆ ನಾಡವರ ಸಂಘ, ಎನ್.ಆರ್.ಪುರ ಜೆಡಿಎಸ್ ಯುವ ಘಟಕದಿಂದ ನಿಖಿಲ್ ಅವರನ್ನು ಸನ್ಮಾನಿಸಲಾಯಿತು. 5 ಮಂದಿ ಹಿರಿಯ ಕಾರ್ಯಕರ್ತರನ್ನು ಗೌರವಿಸಲಾಯಿತು. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ಭಾವಚಿತ್ರ ವಿತರಣೆಗೆ ಚಾಲನೆ ನೀಡಲಾಯಿತು. ಅಮ್ಮ ಫೌಂಡೇಷನ್ ವತಿಯಿಂದ ಆರೋಗ್ಯ ಶಿಬಿರದಲ್ಲಿ ಇತ್ತೀಚೆಗೆ ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾದವರಿಗೆ ಕನ್ನಡಕ ವಿತರಿಸಲಾಯಿತು.

ಶೃಂಗೇರಿ ಕ್ಷೇತ್ರ ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಒತ್ತುವರಿ ಸಮಸ್ಯೆ ಬಗೆಹರಿದಿಲ್ಲ ಜಂಟಿ ಸರ್ವೆ ಆಗಿಲ್ಲ. ದನಗಳನ್ನು ಅರಣ್ಯಕ್ಕೆ ಬಿಡಬೇಡಿ ಎಂದರೆ ಸೊಪ್ಪಿನಬೆಟ್ಟ ಗೋಮಾಳ ಎಂಬುದು ಏನಾಯಿತು
ಸುಧಾಕರ ಎಸ್. ಶೆಟ್ಟಿ ಜೆಡಿಎಸ್ ಉಪಾಧ್ಯಕ್ಷ

ಕಾಡಾನೆ ದಾಳಿ: ಸರ್ವ ಪಕ್ಷದ ಸಭೆ ನಡೆಸಿ

ಸುದ್ದಿಗಾರರೊಂದಿಗೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ ‘ಎನ್.ಆರ್.ಪುರ ಕೊಪ್ಪ ಭಾಗದಲ್ಲಿ ಕಳೆದ 9 ತಿಂಗಳಿಂದ ನಿರಂತರವಾಗಿ ಕಾಡಾನೆ ದಾಳಿ ನಡೆಸುತ್ತಿದೆ. ನಾಲ್ವರು ಮೃತಪಟ್ಟಿದ್ದಾರೆ. ರೈತ ಸಂಘ ಸಾರ್ವಜನಿಕರು ಇಂದು ಬೀದಿಗಿಳಿದು ಹೋರಾಟ ಮಾಡುವಾಗ ನಾನು ಕೂಡ ಭೇಟಿ ನೀಡಿದ್ದೇನೆ. ಎಲೆಕ್ಟ್ರಿಕ್ ಬೇಲಿ ಮುಂತಾದ ತಂತ್ರಜ್ಞಾನ ಬಳಸಿಕೊಂಡು ಕಾಡಾನೆಗಳನ್ನು ನಿಯಂತ್ರಣ ಮಾಡಬಹುದು. ಈ ನಿಟ್ಟಿನಲ್ಲಿ ಅರಣ್ಯ ಸಚಿವರಿಗೆ ಜವಾಬ್ದಾರಿ ಪದದ ಅರ್ಥ ಗೊತ್ತಿದ್ದರೆ ಅವರು ಇಲಾಖೆ ಅಧಿಕಾರಿಗಳನ್ನು ಕೂರಿಸಿಕೊಂಡು ಸಭೆ ನಡೆಸಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಅವಶ್ಯಕತೆ ಇದ್ದರೆ ಸರ್ವ ಪಕ್ಷದ ಸಭೆ ನಡೆಸಬೇಕು’ ಎಂದರು.

ಧರ್ಮಸ್ಥಳ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಅವರು ‘ಎಸ್ಐಟಿ ತನಿಖೆಗೆ ಕೋರ್ಟ್ ನಿರ್ದೇಶನ ಕೊಟ್ಟಿದೆ. ಕಾನೂನಿನಡಿ ಪ್ರಕರಣ ಇದೆ. ತನಿಖೆ ಬಳಿಕ ಸತ್ಯಾಸತ್ಯತೆ ಹೊರ ಬರುವವರೆಗೆ ಕಾದು ಅಂತಿಮವಾಗಿ ಇದಕ್ಕೆ ಉತ್ತರ ಕೊಡಬೇಕಿದೆ. ಅಲ್ಲಿಯವರೆಗೆ ಏನೇ ಹೇಳಿದರೂ ತಪ್ಪಾಗುತ್ತದೆ’ ಎಂದರು.

ದನ–ಕರುಗಳನ್ನು ಅರಣ್ಯಕ್ಕೆ ಮೇಯಲು ಬಿಡಬಾರದು ಎಂಬ ಅರಣ್ಯ ಸಚಿವರ ಹೇಳಿಕೆ ಬೇಜವಾಬ್ದಾರಿತನದಿಂದ ಕೂಡಿದೆ. ಅವುಗಳನ್ನು ಸಚಿವರ ಮನೆ ಬಾಗಿಲಿಗೆ ಬಿಡಲಾಗುತ್ತದೆಯೇ ಎಂದು ಪ್ರಶ್ನಿಸಿದರು. ರಸ್ತೆ ಗುಂಡಿ ಬಿದ್ದಿದೆ ಹಕ್ಕುಪತ್ರ ಕೊಟ್ಟಿಲ್ಲ. ಇಲ್ಲಿನ ಕಾಂಗ್ರೆಸ್ ಶಾಸಕರಿಗೆ ಕ್ಷೇತ್ರದ ಜನರ ಮೇಲೆ ಎಷ್ಟು ಪ್ರೀತಿ ಇಟ್ಟಿದ್ದಾರೆ ಎಂದು ಗೊತ್ತಾಗುತ್ತದೆ. ವಸತಿ ಶಾಲೆಯಲ್ಲಿ ಬಾಲಕಿ ಸಾವು ಪಾರದರ್ಶಕ ತನಿಖೆಯಾಗಬೇಕು. ಎರಡು ಹೆಣ್ಣುಮಕ್ಕಳ ಸಾವು ಗಂಭೀರ ಪ್ರಕರಣ ಈ ವಿಚಾರವನ್ನು ಕುಮಾರಸ್ವಾಮಿ ಅವರ ಬಳಿ ಮಾತನಾಡುತ್ತೇನೆ. ಪೊಲೀಸರು ಯಾರ ಒತ್ತಡಕ್ಕೂ ಮಣಿಯದೇ ಸಮಗ್ರ ತನಿಖೆ ನಡೆಸಬೇಕು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.