ADVERTISEMENT

ತರೀಕೆರೆ: ಅ.10ರಿಂದ ಶರಣ ನುಲಿಯ ಚಂದಯ್ಯ ದಾಸೋಹ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2022, 13:27 IST
Last Updated 8 ಅಕ್ಟೋಬರ್ 2022, 13:27 IST
 ಗರ್ಭಗೃಹದಲ್ಲಿರುವ ಉದ್ಭವ ಶ್ರೀ ಸಿದ್ದೇಶ್ವರ ಸ್ವಾಮಿ. 
 ಗರ್ಭಗೃಹದಲ್ಲಿರುವ ಉದ್ಭವ ಶ್ರೀ ಸಿದ್ದೇಶ್ವರ ಸ್ವಾಮಿ.    

ತರೀಕೆರೆ: ‘ಕಾಯಕದಿಂದ ಬಂದದ್ದು ಲಿಂಗಾರ್ಪಿತ’ ಎಂದುಶರಣ ಕಾಯಕ ಯೋಗಿ ನುಲಿಯ ಚಂದಯ್ಯನವರು ದಾಸೋಹ ಸೇವೆ ಮಾಡುತ್ತಾ ಕಾಯಕದಲ್ಲೇ ದೈವತ್ವ ಕಂಡ ಕ್ಷೇತ್ರ ತಾಲ್ಲೂಕಿನ ನಂದಿ ಸಿದ್ದೇಶ್ವರ. ಅ.10ರಿಂದ ಇಲ್ಲಿ ಜಾತ್ರಾ ಮಹೋತ್ಸವ ನಡೆಯಲಿದೆ.

ಇಲ್ಲಿನ ಸಿದ್ದೇಶ್ವರ ದೇವರಿಗೆ ಶ್ರಾವಣ ಮತ್ತು ಕಾರ್ತಿಕ ಮಾಸದಲ್ಲಿ ವಿಶೇಷ ಪೂಜೆ ನಡೆದರೂ, ಅಶ್ವಯಿಜ ಮಾಸದಲ್ಲಿ ಒಂಬತ್ತು ದಿನಗಳ ಜಾತ್ರಾ ಮಹೋತ್ಸವನ್ನು ನಂದಿ ಮತ್ತು ಸುಣ್ಣದಹಳ್ಳಿ ಗ್ರಾಮಸ್ಥರು ಸೇರಿ ನಡೆಸುತ್ತಾರೆ.

ಸನಿಹದಲ್ಲಿ ಶರಣ ಕಾಯಕ ಯೋಗಿ ನುಲಿಯ ಚಂದಯ್ಯ ಅವರ ಗದ್ದುಗೆಯಿದೆ. ನುಲಿಯ ಚಂದಯ್ಯ ಅವರು ನೂಲಿನ ಕಾಯಕ ಮಾಡಿ ಸಿದ್ದೇಶ್ವರನಿಗೆ ದಾಸೋಹ ಸೇವೆ ಮಾಡುತ್ತಿದ್ದರು. ಇಂದಿಗೂ ಜಾತ್ರೆಯಲ್ಲಿ ಅವರ ಪಾದುಕೆ ಮುದ್ರೆಯೊಂದಿಗೆ ಸುತ್ತಲಿನ ಗ್ರಾಮಗಳಲ್ಲಿ ‘ಚರ’ ಹೋಗುವ ಮೂಲಕ ಧಾನ್ಯ ಸಂಗ್ರಹಿಸಿ ಅನ್ನ ದಾಸೋಹ ನಡೆಸಲಾಗುತ್ತದೆ.

ADVERTISEMENT

ಸೋಮವಾರ (ಅ.10) ಬೆಳಿಗ್ಗೆ ಸಿದ್ದೇಶ್ವರ ಸ್ವಾಮಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಅಲಂಕಾರ ಸೇವೆ ನಡೆಯುತ್ತದೆ. ಸಂಜೆ ಗೋದೂಳಿ ಲಗ್ನದಲ್ಲಿ ಧ್ವಜಾರೋಹಣ ನಡೆಯಲಿದ್ದು, ಜಾತ್ರೆಗೆ ಚಾಲನೆ ನೀಡಲಾಗುತ್ತದೆ. ಮರು ದಿವಸ ದೇವರನ್ನು ರಾಜಬೀದಿಯಲ್ಲಿ ಉತ್ಸವ ನಡೆಸಲಾಗುತ್ತದೆ. ಪ್ರತಿದಿನ ಸಂಜೆ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮ ಹಾಗೂ ನಾಡಿನ ನುಲಿಯ ಚಂದಯ್ಯನವರ ಬಗ್ಗೆ ಪ್ರವಚನ ನಡೆಯುತ್ತದೆ. ದಾಸೋಹದ ವ್ಯವಸ್ಥೆ ಇರುತ್ತದೆ. ಎಂಟನೆಯ ರಾತ್ರಿ ಪಾಕಶಾಲೆಯಲ್ಲಿ ಕರೀಬೇವಿನ ಪೂಜೆ ಸಲ್ಲಿಸಲಾಗುತ್ತದೆ. ಪ್ರಸಾದ ಮಂದಿರದಲ್ಲಿ ಉಳಿಯುವ ಪ್ರಸಾದವನ್ನು ಮರು ವರ್ಷದ ಜಾತ್ರೆವರೆಗೂ ಇರಿಸಲಾಗುತ್ತಿದ್ದು, ಕೆಡದಿರುವುದೇ ಇಲ್ಲಿನ ವಿಶೇಷ.

ಒಂಬತ್ತನೆ ದಿನ ಸಿದ್ದೇಶ್ವರ ಸ್ವಾಮಿಯನ್ನು ನಂದಿ ಗ್ರಾಮದ ರಾಜ ಬೀದಿಯಲ್ಲಿ ಹೊವಿನ ಪಲ್ಲಕ್ಕಿ ಉತ್ಸವ ದೊಂದಿಗೆ ಊರೊಳಗಿನ ಮಠಕ್ಕೆ ತರಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.