ADVERTISEMENT

ಚಿಕ್ಕಮಗಳೂರು ಬಂದ್: ತೆರೆಯದ ಅಂಗಡಿ-ಮುಂಗಟ್ಟು

ಪಹಲ್ಗಾಮ್ ದಾಳಿ, ಸುಹಾಸ್ ಶೆಟ್ಟಿ ಹತ್ಯೆ ಖಂಡಿಸಿ ಬಂದ್‌ಗೆ ಕರೆ

​ಪ್ರಜಾವಾಣಿ ವಾರ್ತೆ
Published 5 ಮೇ 2025, 5:01 IST
Last Updated 5 ಮೇ 2025, 5:01 IST
   

ಚಿಕ್ಕಮಗಳೂರು: ಪಹಲ್ಗಾಮ್ ಉಗ್ರರ ದಾಳಿ ಮತ್ತು ಮಂಗಳೂರಿನ ಹಿಂದುತ್ವಾದಿ ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಖಂಡಿಸಿ ವಿಶ್ವ ಹಿಂದೂ ಪರಿಷತ್ ಮತ್ತಿ ಬಜರಂಗದಳ ಮುಖಂಡರು ಚಿಕ್ಕಮಗಳೂರು ಬಂದ್ ಕರೆ ನೀಡಿದ್ದು, ನಗರದ ಪ್ರಮುಖ ರಸ್ತೆಗಳಲ್ಲಿ ಅಂಗಡಿ, ಮುಂಗಟ್ಟುಗಳು ಬಂದ್ ಆಗಿವೆ.

ಎಂ.ಜಿ.ರಸ್ತೆ, ಮಾರ್ಕೇಟ್ ರಸ್ತೆ, ಐ.ಜಿ.ರಸ್ತೆಗಳಲ್ಲಿ 10 ಗಂಟೆ ಬಳಿಕವೂ ಅಂಗಡಿಗಳನ್ನು ತೆರೆಯದೆ ವರ್ತಕರು ಬಂದ್‌ಗೆ ಬೆಂಬಲ ಸೂಚಿಸಿದ್ದಾರೆ. ಬಡಾವಣೆಗಳಲ್ಲಿ ಅಂಗಡಿಗಳು ತೆರೆದಿವೆ.

ಮೂಡಿಗೆರೆ, ಕೊಟ್ಟಿಗೆಹಾರ, ಕೊಪ್ಪ, ಶೃಂಗೇರಿ, ಕಳಸ, ಎನ್.ಆರ್.ಪುರದಲ್ಲಿ ಅಂಗಡಿಗಳು ಬಂದ್ ಆಗಿವೆ‌. ಬಸ್, ಆಟೊರಿಕ್ಷಾ ಸೇರಿ ವಾಹನ ಸಂಚಾರ ಎಲ್ಲೆಡೆ ಸಹಜ ಸ್ಥಿತಿಯಲ್ಲಿದೆ‌. ಸರ್ಕಾರಿ ಕಚೇರಿಗಳು, ಕಾಲೇಜುಗಳು ಎಂದಿನಂತೆ ತೆರೆದಿವೆ.

ADVERTISEMENT

ಕಡೂರು, ಅಜ್ಜಂಪುರ, ತರೀಕೆರೆಯಲ್ಲಿ ಬಂದ್‌ಗೆ ಬೆಂಬಲ ದೊರೆತಿಲ್ಲ. ಅಂಗಡಿಗಳು ಎಂದಿನಂತೆ ತೆರೆದಿವೆ.

ಬಲವಂತದಿಂದ ಬಂದ್ ನಡೆಸಲು ಮುಂದಾದರೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

ಎಲ್ಲೆಡೆ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಚಿಕ್ಕಮಗಳೂರಿನ ಹನುಮಂತಪ್ಪ ವೃತ್ತದಲ್ಲಿ ಪ್ರತಿಭಟನೆಗೆ ಮುಂದಾದ 10ಕ್ಕೂ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.