ಅಮಾನತು
ಚಿಕ್ಕಮಗಳೂರು: ಕಡೂರು ತಾಲ್ಲೂಕಿನಲ್ಲಿ ಮಧ್ಯ ವಯಸ್ಸಿನವರಿಗೆ ಅಕ್ರಮವಾಗಿ ವೃದ್ಧಾಪ್ಯ ವೇತನ ಮಂಜೂರು ಮಾಡಿರುವ ಆರೋಪದಲ್ಲಿ ಕಂದಾಯ ಇಲಾಖೆಯ ಎಂಟು ಮಂದಿ ಅಧಿಕಾರಿಗಳನ್ನು ಅಮಾನತು ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ನಾಡ ಕಚೇರಿ ವಿಷಯ ನಿರ್ವಾಹಕ ಗಿರೀಶ್, ಕಂದಾಯ ಅಧಿಕಾರಿ ಪಿ.ಆರ್.ರವಿಕುಮಾರ್, ಗ್ರಾಮ ಆಡಳಿತಾಧಿಕಾರಿಗಳಾದ ನಿರ್ಮಲಾ ಟಿ.ಎಸ್., ಹನುಮಂತಪ್ಪ ಆರ್., ರವಿ ಕೆ.ಆರ್., ಲಿಂಗರಾಜು ಕೆ.,ಕಾವ್ಯಾ ಟಿ.ಎಂ., ಕುಮಾರ್ ಜೆ.ಎಂ. ಅವರನ್ನು ಅಮಾನತು ಮಾಡಲಾಗಿದೆ.
ಎನ್.ಕೆ.(ನಾಡ ಕಚೇರಿ)–5 ತಂತ್ರಾಂಶದಲ್ಲಿ ಅಕ್ರಮವಾಗಿ 64 ಜನರಿಗೆ ಪಿಂಚಣಿ ಮಂಜೂರು ಮಾಡಿ ಸರ್ಕಾರಕ್ಕೆ ₹9.03 ಲಕ್ಷ ನಷ್ಟ ಮಾಡಿದ್ದಾರೆ ಎಂದು ತಹಶೀಲ್ದಾರ್ ವರದಿಯಲ್ಲಿ ತಿಳಿಸಿದ್ದರು. ಅದನ್ನು ಆಧರಿಸಿ ತನಿಖೆ ನಡೆಸಿದ್ದ ಕಂದಾಯ ಇಲಾಖೆ, 11 ಜನರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿತ್ತು.
ಕಡೂರು ತಹಶೀಲ್ದಾರ್ ಇತ್ತೀಚೆಗೆ ಮತ್ತೊಂದು ವರದಿಯನ್ನು ಸಲ್ಲಿಸಿದ್ದು, ಕಡೂರು ತಾಲ್ಲೂಕಿನ ಕಸಬಾ ಹೋಬಳಿಯಲ್ಲಿ ಎನ್.ಕೆ.–4 ತಂತ್ರಾಂಶದಲ್ಲೂ 1,485 ಅನರ್ಹರಿಗೆ ಅಕ್ರಮವಾಗಿ ಪಿಂಚಣಿ ಮಂಜೂರಾಗಿ ಸರ್ಕಾರಕ್ಕೆ ₹2.17 ಕೋಟಿ ನಷ್ಟವಾಗಿದೆ ಎಂದು ಉಲ್ಲೇಖಿಸಿದ್ದರು.
ಈ ಪ್ರಕರಣಗಳಲ್ಲಿ ಯಾವ ಅಧಿಕಾರಿಗಳ ಎಲ್ಲೆಲ್ಲಿ ಕರ್ತವ್ಯಲೋಪ ಎಸಗಿದ್ದಾರೆ. ಯಾರಿಂದ ಎಷ್ಟು ನಷ್ಟ ಆಗಿದೆ ಎಂದು ಕೂಲಂಕಷವಾಗಿ ಪರಿಶೀಲಿಸಿರುವ ಜಿಲ್ಲಾಧಿಕಾರಿ ಮೀನಾ ನಾಗರಾಜ್, 8 ಸಿಬ್ಬಂದಿ ಅಮಾನತು ಮಾಡಿ ಆದೇಶಿಸಿದ್ದಾರೆ. ಶಿರಸ್ತೇದಾರ್ ಕಲ್ಮರುಡಪ್ಪ ಅವರನ್ನು ಈ ಹಿಂದೆಯೇ ಅಮಾನತು ಮಾಡಲಾಗಿತ್ತು.
‘ಆಕ್ರಮವಾಗಿ ಪಿಂಚಣಿ ಮಂಜೂರಾತಿ ಪ್ರಕರಣದಲ್ಲಿ ಸಿಬ್ಬಂದಿಯನ್ನು ಅಮಾನತು ಮಾಡಿರುವ ಕ್ರಮ ಸ್ವಾಗತಾರ್ಹ. ಎಲ್ಲಾ ತಾಲ್ಲೂಕು ಮತ್ತು ಹೋಬಳಿಗಳಲ್ಲಿ ಎನ್.ಕೆ.–4 ಮತ್ತು ಎನ್.ಕೆ.–5 ತಂತ್ರಾಂಶ ಪರಿಶೀಲಿಸಬೇಕು. ಅಕ್ರಮಗಳನ್ನು ಪತ್ತೆ ಹಚ್ಚಬೇಕು’ ಎಂದು ಕಡೂರಿನ ವಕೀಲ ನಾಗರಾಜ್ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.