ಕಳಸ (ಚಿಕ್ಕಮಗಳೂರು): ಕಾಳುಮೆಣಸಿನ ಕೊಯ್ಲು ನಡೆಯುತ್ತಿದ್ದು, ತಾಲ್ಲೂಕಿನಲ್ಲಿ ಈ ವರ್ಷದ ಉತ್ಪಾದನೆ ಕಳೆದ ವರ್ಷದ ಅರ್ಧಕ್ಕಿಂತಲೂ ಕಡಿಮೆಯಾಗಲಿದೆ ಎಂದು ಬೆಳೆಗಾರರು ಹೇಳುತ್ತಿದ್ದಾರೆ.
ಜಾಗತಿಕವಾಗಿ ಕೂಡ ಕಾಳುಮೆಣಸಿನ ಬೆಳೆ ಪ್ರಮಾಣ ಕುಸಿಯುತ್ತಿದ್ದು, ಧಾರಣೆ ಏರುಮುಖವಾಗುವ ನಿರೀಕ್ಷೆ ಬೆಳೆಗಾರರು ಮತ್ತು ವ್ಯಾಪಾರಿ ವಲಯದಲ್ಲಿದೆ. ಕಳೆದ ಬೇಸಿಗೆಯ ಅಧಿಕ ಉಷ್ಣಾಂಶ ಮತ್ತು ಮಳೆಗಾಲದ ಅಧಿಕ ತೇವಾಂಶದಿಂದಾಗಿ ಬಳ್ಳಿಗಳಲ್ಲಿ ಫಸಲು ವಿರಳವಾಗಿದೆ. ಮಳೆಗಾಲದ ನಂತರ ತಗುಲಿದ ಕೀಟಗಳ ಹಾವಳಿಯಿಂದ ಹಲವಾರು ಬಳ್ಳಿಗಳು ಸತ್ತಿವೆ.
ಜಗತ್ತಿನಲ್ಲಿ ಉತ್ಪಾದನೆ ಆಗುವ ಶೇ 38ರಷ್ಟು ಕಾಳುಮೆಣಸು ಬೆಳೆಯುವ ವಿಯೆಟ್ನಾಂ ದೇಶದಲ್ಲಿ ಹವಾಮಾನ ವೈಪರೀತ್ಯದಿಂದ ಕಾಳುಮೆಣಸಿನ ಫಸಲು ಕುಂಠಿತವಾಗಿದೆ. ಕಾಫಿ ಮತ್ತು ಡೂರಿಯನ್ ಬೆಳೆಗಳ ಬೆಲೆ ಏರಿಕೆಯಿಂದ ಕಾಳುಮೆಣಸಿನ ಬಗ್ಗೆ ಅಲ್ಲಿ ಕೂಡ ಆಸಕ್ತಿ ಕಡಿಮೆ ಆಗುತ್ತಿದೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.
ಬ್ರೆಜಿಲ್ ದೇಶವು ಜಗತ್ತಿನ ಶೇ 18ರಷ್ಟು ಕಾಳುಮೆಣಸು ಬೆಳೆಯುತ್ತದೆ. ಆದರೆ, ಅಲ್ಲಿ ಕಾಳುಮೆಣಸಿನ ಉತ್ಪಾದನೆ ಕಡಿಮೆ ಆಗುತ್ತಿದೆ. ಭಾರತದಲ್ಲಿ ಜಗತ್ತಿನ ಶೇ 12 ಕಾಳುಮೆಣಸು ಬೆಳೆದರೂ ಆಂತರಿಕ ಬಳಕೆಗೆ ಇದು ಸಾಕಾಗುತ್ತಿಲ್ಲ. 2023 ಮತ್ತು 2024ರ ಉತ್ತಮ ಫಸಲಿನ ನಂತರ ಇಂಡೊನೇಷ್ಯಾ ಮತ್ತು ಶ್ರೀಲಂಕಾದಲ್ಲಿ ಈ ವರ್ಷ ಫಸಲಿನ ಪ್ರಮಾಣ ಕಡಿಮೆ ಆಗಿದೆ. ಅಲ್ಲಿನ ಬೆಳೆಗಾರರ ಬಳಿ ಕಳೆದ ವರ್ಷದ ಸರಕು ಕೂಡ ಉಳಿದಿಲ್ಲ. ಕೊಕ್ಕೊ ಬೆಳೆ ಬಗ್ಗೆ ಅಲ್ಲಿ ಆಕರ್ಷಣೆ ಶುರು ಆಗಿದೆ. ಚೀನಾದಲ್ಲಿ ಸಣ್ಣ ಪ್ರಮಾಣದಲ್ಲಿ ಬೆಳೆಯುವ ಕಾಳುಮೆಣಸು ಆಂತರಿಕ ಬಳಕೆಗೆ ಸಾಕಾಗದೆ, ಆ ದೇಶ ಕೂಡ ಆಮದು ಮಾಡುತ್ತಿದೆ. ಈ ವರ್ಷ ಆ ದೇಶದ ಆಮದು ಪ್ರಮಾಣದ ಆಧಾರದ ಮೇಲೆ ಕಾಳುಮೆಣಸಿನ ಧಾರಣೆ ಏರುವ ನಿರೀಕ್ಷೆ ಇದೆ ಎಂಬುದು ಅವರ ವಿಶ್ಲೇಷಣೆ.
2015ರಲ್ಲಿ 5.87 ಲಕ್ಷ ಟನ್ ಇದ್ದ ಜಾಗತಿಕ ಕಾಳು ಮೆಣಸಿನ ಉತ್ಪಾದನೆ ಈ ವರ್ಷ 4.86 ಲಕ್ಷ ಟನ್‌ಗೆ ಕುಸಿಯುವ ಅಂದಾಜು ಇದೆ. ಹೀಗಾಗಿ, ಧಾರಣೆ ಏರಬಹುದು ಎಂದು ಬೆಳೆಗಾರರು ನಂಬಿದ್ದಾರೆ. ಆದ್ದರಿಂದ ಮಾರುಕಟ್ಟೆಗೆ ಬರುವ ಕಾಳುಮೆಣಸಿನ ಪ್ರಮಾಣವೂ ಕಡಿಮೆಯಾಗಿದೆ ಎಂಬುದು ವ್ಯಾಪಾರಸ್ಥರ ಅಭಿಪ್ರಾಯ.
**
ನಮ್ಮ ತೋಟದಲ್ಲಿ ಕಳೆದ ವರ್ಷ 20 ಕಾರ್ಮಿಕರು 21 ದಿನ ಕಾಳುಮೆಣಸು ಕೊಯ್ದಿದ್ದರು. ಈ ವರ್ಷ 20 ಜನರು ಒಂದು ವಾರದಲ್ಲೇ ಕೊಯ್ದು ಮುಗಿಸಿದ್ದಾರೆ
––ಚಂದ್ರಶೇಖರ್ ಲಿಂಬೆಕೊಂಡದ ಬೆಳೆಗಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.