ADVERTISEMENT

ಉತ್ತಮ ಇಳುವರಿಗೆ ಫಣಿಯೂರು ಕಾಳುಮೆಣಸು ತಳಿ: ಪ್ರಾಧ್ಯಾಪಕ ವಿಕ್ರಮ್ ಸಲಹೆ

ಐಪಿಎಲ್ ಆಯೋಜಿಸಿದ್ದ ಕೃಷಿ ತರಬೇತಿ ಕಾರ್ಯಾಗಾರದಲ್ಲಿ ಪ್ರಾಧ್ಯಾಪಕ ವಿಕ್ರಮ್ ಸಲಹೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2025, 13:38 IST
Last Updated 3 ಜೂನ್ 2025, 13:38 IST
ಕೊಪ್ಪ ಸಮೀಪದ ಯಡಗೆರೆಯಲ್ಲಿ ಆಯೋಜಿಸಿದ್ದ ಕಾಫಿ, ಕಾಳುಮೆಣಸು, ಅಡಿಕೆ ಕುರಿತ ತರಬೇತಿ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ರೈತರು ಭಾಗವಹಿಸಿದ್ದರು
ಕೊಪ್ಪ ಸಮೀಪದ ಯಡಗೆರೆಯಲ್ಲಿ ಆಯೋಜಿಸಿದ್ದ ಕಾಫಿ, ಕಾಳುಮೆಣಸು, ಅಡಿಕೆ ಕುರಿತ ತರಬೇತಿ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ರೈತರು ಭಾಗವಹಿಸಿದ್ದರು   

ಕೊಪ್ಪ: ‘ಭಾರತದ ಪ್ರಸಿದ್ಧ ಪ್ರಥಮ ಹೈಬ್ರಿಡ್ ಕಾಳುಮೆಣಸಿನ ತಳಿಗಳಲ್ಲಿ ಒಂದಾದ ಫಣಿಯೂರು ಮಾದರಿ ವಿಶ್ವದ ಎಂಟು ದೇಶಗಳಲ್ಲಿ ಜನಪ್ರಿಯವಾಗಿದ್ದು, ಉತ್ತಮ ಇಳುವರಿ ನೀಡುತ್ತಿದೆ’ ಎಂದು ಕೇರಳ ಕಣ್ಣೂರಿನ ಕಾಳುಮೆಣಸು ಸಂಶೋಧನಾ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಎಚ್.ಎಲ್.ವಿಕ್ರಮ್ ತಿಳಿಸಿದರು.

ಇಂಡಿಯನ್ ಪೆಪ್ಪರ್ ಲೀಗ್(ಐಪಿಎಲ್) ವತಿಯಿಂದ ತಾಲ್ಲೂಕಿನ ಸಮೀಪದ ಮ್ಯಾಮ್ಕೋಸ್ ಮಾಜಿ ಉಪಾಧ್ಯಕ್ಷ ಯಡಗೆರೆ ಸುಬ್ರಹ್ಮಣ್ಯ ಅವರ ಕೃಷಿ ತೋಟದಲ್ಲಿ ಆಯೋಜಿಸಿದ್ದ ಕೃಷಿ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ‘ಫಣಿಯೂರು 1 ಮಾದರಿ ಅತಿ ಹೆಚ್ಚು ಇಳುವರಿ ನೀಡುತ್ತಿದ್ದು, ಒಂದು ಮರದಿಂದ ಗರಿಷ್ಠ 25 ಕೆ.ಜಿ ಒಣ ಕಾಳುಮೆಣಸು ಪಡೆದ ಉದಾಹರಣೆ ಇದೆ’ ಎಂದರು.

ಫಣಿಯೂರು 5 ಮಾದರಿ ತಳಿ ಅಡಿಕೆ, ತೆಂಗು ತೋಟಕ್ಕೆ ಸೂಕ್ತ. ಕರಿಮುಂಡ ತಳಿಗೆ ರೋಗ ಜಾಸ್ತಿ. ಆದರೆ, ಕಾಳುಮೆಣಸಿನ ಗಾತ್ರ ದೊಡ್ಡದು. ಅಡಿಕೆ, ತೆಂಗಿನ ಮರಗಳಿಗೆ ಎರಡು ಬಳ್ಳಿಗಳನ್ನು ನೆಡುವುದು ಸೂಕ್ತ, ಸಿಲ್ವರ್ ಮರಗಳಿಗೆ ಮೂರು ಗಿಡಗಳನ್ನು ನಾಟಿ ಮಾಡಬಹುದು ಎಂದು ತಿಳಿಸಿದರು.

ADVERTISEMENT

ತಾಂತ್ರಿಕ ಸಲಹೆಗಾರ ಸುನಿಲ್ ತಾಮಗಾಳೆ ಮಾತನಾಡಿ, ‘ಮಳೆ ಪ್ರಮಾಣ ಜಾಸ್ತಿಯಾದಂತೆ ಕಾಳುಮೆಣಸಿಗೆ ರೋಗಗಳೂ ಜಾಸ್ತಿಯಾಗುತ್ತದೆ. ರೋಗರಹಿತವಾಗಿ ಮಾಡಲು ಫಂಗಿಸೈಡ್ ಬಳಕೆ ಅಗತ್ಯ. ಒಂದು ಡ್ರಮ್ ನೀರಿಗೆ 2 ಕೆ.ಜಿ ಮೈಲು ತುತ್ತ ಹಾಗೂ 2 ಕೆ.ಜಿ ಸುಣ್ಣವನ್ನು ಏಕಕಾಲದಲ್ಲಿ ಹಾಕಿ ಬೋರ್ಡೋ ದ್ರಾವಣ ಸಿದ್ಧಪಡಿಸಬೇಕು. ಹೀಗೆ ಸಿದ್ಧಪಡಿಸಿದ ದ್ರಾವಣವನ್ನು ಅರ್ಧ ಗಂಟೆ ಕಾಲ ಬಿಟ್ಟು ತೋಟಕ್ಕೆ ಸಿಂಪಡಣೆ ಮಾಡಬೇಕು. ರಾಳ ಬಳಕೆ ಮಾಡಬಾರದು, ಗಮ್ ಕೊನೆಗೆ ಹಾಕಿ, ಮಿಶ್ರಣ ತಯಾರಿಸಿದ ಮೂರು ಗಂಟೆಯ ಒಳಗೆ ಸಿಂಪಡಣೆ ಮಾಡಬೇಕು. ವಾತಾವರಣ ನೋಡಿ ಔಷಧಿ ಸಿಂಪಡಿಸುವುದು ಉತ್ತಮ ಎಂದು ಸಲಹೆ ನೀಡಿದರು.

ಯಡಗೆರೆ ಸುಬ್ರಹ್ಮಣ್ಯ ಮಾತನಾಡಿ, ಕೃಷಿ ಬೆಳೆಗಳ ಬೆಲೆಗಳ ಏರಿಳಿತ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಆದರೆ, ವಾತಾವರಣದ ಏರುಪೇರಿನಿಂದಾಗಿ ಒಂದೇ ಮಾದರಿಯ ಫಸಲು ನಿರೀಕ್ಷೆ, ಆದಾಯ ಮಾತ್ರ ಅಸಾಧ್ಯವಾಗಿದೆ. ಇತ್ತೀಚಿನ ದಿನಗಳಲ್ಲಿನ ಖರ್ಚು ವೆಚ್ಚಗಳನ್ನು ನೋಡಿದಾಗ ಕೃಷಿಕರಿಗೆ ಆದಾಯ ಕಾಣುತ್ತಿಲ್ಲ. ಇಂತಹ ತರಬೇತಿಗಳಿಂದ ಕೃಷಿಕರಿಗೆ ಆತ್ಮಸ್ಥೈರ್ಯ ಹೆಚ್ಚಲಿದೆ ಎಂದರು.

ಬೋರ್ಡೋ ದ್ರಾವಣ ತಯಾರಿ, ಮಿಶ್ರಣ, ಸಿಂಪಡಣೆ ಕುರಿತು ಪ್ರಾತ್ಯಕ್ಷಿಕೆ ನಡೆಯಿತು. ಇಂಡಿಯನ್ ಪೆಪ್ಪರ್ ಲೀಗ್ ಅಧ್ಯಕ್ಷ ಎಚ್.ವಿ.ಪ್ರದೀಪ್ ಕುಮಾರ್, ಉಪಾಧ್ಯಕ್ಷ ಸತ್ಯಪ್ರಕಾಶ್, ಚಂದ್ರಶೇಖರ್ ಹೆಗ್ಡೆ, ಕಾರ್ಯದರ್ಶಿ ವಿಶ್ವನಾಥ್, ಖಜಾಂಚಿ ಎಚ್.ಎಸ್.ಕುಮಾರಸ್ವಾಮಿ, ನಿರ್ದೇಶಕರಾದ ಎಚ್.ಎಂ.ಚೆನ್ನಕೇಶವ, ಕೆ.ಸಿ.ಮಧುಕುಮಾರ್, ಎಸ್.ಆರ್.ಆದರ್ಶ, ಯಾರ ಇಂಡಿಯಾ ಕಂಪನಿಯ ವಂದನಾ, ಸನ್ ಬ್ರ್ಯಾಂಡ್‌ ಕಂಪನಿಯ ಬಿ.ಸುಬ್ರಹ್ಮಣ್ಯ ನಾಯಕ್, ಯಡಗೆರೆಯ ಭಾಸ್ಕರ್, ಉಪೇಂದ್ರ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.