ನರಸಿಂಹರಾಜಪುರ: ‘ಪ್ರತಿಯೊಬ್ಬರು ಸ್ವತಂತ್ರ ಚಿಂತನೆ ಮಾಡಬೇಕು. ಪಕ್ಷ ನಿಷ್ಠೆ, ವ್ಯಕ್ತಿ ನಿಷ್ಠೆ, ಸಮಾಜ ನಿಷ್ಠೆಗಿಂತಲೂ ಧರ್ಮ ನಿಷ್ಠೆ ಮುಖ್ಯವಾದುದು’ ಎಂದು ಚಿತ್ತಾಪುರ ಧರ್ಮಶ್ರೀ ನಾರಾಯಣಗುರು ಶಕ್ತಿಪೀಠದ ಪೀಠಾಧಿಪತಿ ಪ್ರಣವಾನಂದ ಸ್ವಾಮೀಜಿ ಹೇಳಿದರು.
ಪಟ್ಟಣದಲ್ಲಿ ಕೋಟೆ ಮಾರಿಕಾಂಬ ಜಾತ್ರೋತ್ಸವದ ಪ್ರಯುಕ್ತ ಗುರುವಾರ ರಾತ್ರಿ ಆಯೋಜಿಸಿದ್ದ ಧಾರ್ಮಿಕ ಸಭೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಹಿಂದೆ ಭಕ್ತಾರು ದೇವರ ದರ್ಶನ, ಗುರುಗಳ ದರ್ಶನ, ಧಾರ್ಮಿಕ ಪ್ರವಚನ, ದಾಸೋಹಕ್ಕೆ ಮಠ–ಮಂದಿರಗಳಿಗೆ ಬರುತ್ತಿದ್ದರು. ಆದರೆ, ದೂರದರ್ಶನ ಮನೆಯೊಳಗೆ ಬಂದಮೇಲೆ ಧರ್ಮ ದರ್ಶನ ಮನೆಯಿಂದ ಹೊರಗೆ ಹೋಗಿದೆ. ಪ್ರಸ್ತುತ ಜನರನ್ನು ಧಾರ್ಮಿಕ ಕೇಂದ್ರಗಳಿಗೆ, ಜಾತ್ರೋತ್ಸವಕ್ಕೆ ಬರುವಂತೆ ಮಾಡಬೇಕಾದರೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಬೇಕು, ಚಲನಚಿತ್ರ ನಟರನ್ನು ಕರೆಸುವ ಸ್ಥಿತಿ ನಿರ್ಮಾಣವಾಗಿರುವುದು ವಿಷಾದದ ಸಂಗತಿ ಎಂದರು.
ಹಿಂದೂ ಧರ್ಮದ ಸಂಸ್ಕೃತಿ, ಸಂಸ್ಕಾರ, ಆಚಾರ–ವಿಚಾರಗಳ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡಬೇಕು. ಹಿಂದೂ ಧರ್ಮದ ದೇವತೆಗಳಲ್ಲಿ ಶಸ್ತ್ರ ಮತ್ತು ಶಾಸ್ತ್ರ ಎರಡು ಇದ್ದು ಶಾಸ್ತ್ರ ಕಲಿಯುವುದಕ್ಕೆ, ಶಸ್ತ್ರ ಧರ್ಮರಕ್ಷಣೆಗೆ ಎಂಬುದನ್ನು ಅರಿತುಕೊಳ್ಳಬೇಕು. ದೇಶ ಮತ್ತು ಧರ್ಮಕ್ಕೆ ಧಕ್ಕೆಯಾದಾಗ ಎಲ್ಲರೂ ರಕ್ಷಣೆಗೆ ನಿಲ್ಲಬೇಕು ಎಂದು ಹೇಳಿದರು.
ಕೋಟೆ ಮಾರಿಕಾಂಬ ದೇವಿ ಸಮಿತಿ ಅಧ್ಯಕ್ಷ ಕೆ.ಪಿ.ಸುರೇಶ್ ಕುಮಾರ್ ಮಾತನಾಡಿ, ‘ಜಾತ್ರೋತ್ಸವಗಳು ಕೇವಲ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಕಾರ್ಯಕ್ರಮವಾಗಿರದೆ, ಬಾಂಧವ್ಯಗಳನ್ನು ಬೆಸೆಯುವ ಸಂಪರ್ಕ ಸಾಧನವಾಗಿದೆ’ ಎಂದರು.
ಮಡಬೂರು ದಾನಿವಾಸ ದುರ್ಗಾಂಬ ದೇವಸ್ಥಾನ ಸಮಿತಿ ಅಧ್ಯಕ್ಷ ಡಿ.ಸಿ.ದಿವಾಕರ್ ಮಾತನಾಡಿ, ‘ಜಾತ್ರೆಗಳು ಯಶಸ್ವಿಯಾಗಬೇಕಾದರೆ ಭಕ್ತಾದಿಗಳ ಸಹಕಾರ ಅಗತ್ಯ. ಶಾಂತಿಯುತವಾಗಿ ಜಾತ್ರೋತ್ಸವ ನಡೆದಾಗ ದೇವರ ಅನುಗ್ರಹ ಪ್ರಾಪ್ತವಾಗುತ್ತದೆ’ ಎಂದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜುಬೇದಾ ಮಾತನಾಡಿದರು. ಕೋಟೆ ಮಾರಿಕಾಂಬ ಜಾತ್ರೋತ್ಸವ ಸಮಿತಿ ಅಧ್ಯಕ್ಷ ಪಿ.ಆರ್.ಸದಾಶಿವ ಅಧ್ಯಕ್ಷತೆ ವಹಿಸಿದ್ದರು.
ಹಳೇಪೇಟೆ ಗುತ್ತ್ಯಮ್ಮ ದೇವಸ್ಥಾನ ಸಮಿತಿ ಕಾರ್ಯದರ್ಶಿ ಎಚ್.ಎನ್.ರವಿಶಂಕರ್, ಮೇದರ ಬೀದಿ ಅಂತರಘಟ್ಟಮ್ಮ ದೇವಸ್ಥಾನ ಸಮಿತಿ ಅಧ್ಯಕ್ಷ ಪ್ರವೀಣ್, ಅಂಬೇಡ್ಕರ್ ನಗರ ಮುತ್ತಿನಮ್ಮ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ರವಿಕುಮಾರ್, ಚೌಡಮ್ಮ ದೇವಸ್ಥಾನ ಸಮಿತಿಯ ಪಿ.ಮಂಜುನಾಥ್ ಪೆರುಮಾಳ್, ಜಾತ್ರಾ ಸಮಿತಿಯ ಎನ್.ಎಂ.ಕಾರ್ತಿಕ್, ನಿಶಾಲ್ ವಸಂತಕುಮಾರ್, ಶ್ರೀಧರಪಾನಿ, ಆರ್.ಕೃಷ್ಣಮೂರ್ತಿ, ಪಿ.ಆರ್.ಸುಕುಮಾರ್, ಗುರುಶಾಂತಪ್ಪ, ದೀಪ್ತಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.