ADVERTISEMENT

ಬೀರೂರು: ತಟ್ಟೆ ಖಾಲಿಯಾಗದೆ ತುಂಬದು ಹೊಟ್ಟೆ

ಲಾಕ್‌ಡೌನ್‌: ಅಡಿಕೆಹಾಳೆ ತಟ್ಟೆ ತಯಾರಕರ ಸ್ಥಿತಿ ಶೋಚನೀಯ

ಎನ್‌.ಸೋಮಶೇಖರ
Published 12 ಮೇ 2020, 20:00 IST
Last Updated 12 ಮೇ 2020, 20:00 IST
ಪಟ್ಟಣದ ಸಜ್ಜನ್‍ರಾವ್ ಬಡಾವಣೆಯಲ್ಲಿ ಅಡಕೆ ಹಾಳೆ ಮೂಲಕ ತಟ್ಟೆಗಳನ್ನು ತಯಾರಿಸುವ ಗೃಹ ಕೈಗಾರಿಕೆಯಲ್ಲಿ ತೊಡಗಿರುವ ನಾಗೇಶ ಮತ್ತು ಶಂಕರ್.
ಪಟ್ಟಣದ ಸಜ್ಜನ್‍ರಾವ್ ಬಡಾವಣೆಯಲ್ಲಿ ಅಡಕೆ ಹಾಳೆ ಮೂಲಕ ತಟ್ಟೆಗಳನ್ನು ತಯಾರಿಸುವ ಗೃಹ ಕೈಗಾರಿಕೆಯಲ್ಲಿ ತೊಡಗಿರುವ ನಾಗೇಶ ಮತ್ತು ಶಂಕರ್.   

ಬೀರೂರು: ಅಡಿಕೆ ತೋಟಗಳಲ್ಲಿ ಉತ್ಪಾದನೆಯಾಗುವ ಹಾಳೆಗಳನ್ನು ಬಳಸಿ ತಟ್ಟೆ ತಯಾರಿಸುವ ಮೂಲಕ ಬದುಕು ಕಟ್ಟಿಕೊಳ್ಳಲು ಮುಂದಾದ ಹಲವು ಕುಟುಂಬಗಳು ಲಾಕ್‍ಡೌನ್ ಪರಿಣಾಮವಾಗಿ ಸಂಕಷ್ಟಕ್ಕೆ ಸಿಲುಕಿವೆ. ಸಭೆ, ಸಮಾರಂಭಗಳು ನಡೆಯದೆ, ತಯಾರಿಸಿದ ತಟ್ಟೆಗಳು ವ್ಯಾಪಾರವಾಗದೆ ಅತ್ತ ಬಂಡವಾಳ ವಾಪಸ್ ಬರದ, ಇತ್ತ ದುಡಿಮೆ ಇಲ್ಲದೆ ಹೊಟ್ಟೆ ತುಂಬದ ಸ್ಥಿತಿ ಎದುರಾಗಿದೆ.

ಬೀರೂರು ಪಟ್ಟಣ ವ್ಯಾಪ್ತಿಯಲ್ಲಿ ಸುಮಾರು 50 ಕುಟುಂಬಗಳು ಈ ಅಡಕೆ ತಟ್ಟೆ ತಯಾರಿಸುವ, ಮಾರಾಟ ಮಾಡುವ ವ್ಯವಹಾರದಲ್ಲಿ ತೊಡಗಿವೆ. ತೋಟಗಳಿಂದ ಅಡಿಕೆ ಹಾಳೆ ಸಂಗ್ರಹಿಸುವ, ಅದಕ್ಕೆ ರೂಪು ನೀಡುವ, ಅಂಗಡಿಗಳಿಗೆ ಪೂರೈಸುವ, ದೊಡ್ಡ ಸಮಾರಂಭಗಳು ನಡೆದರೆ ಬೇಡಿಕೆಗೆ ತಕ್ಕಂತೆ ಈ ಉಪ ಉತ್ಪನ್ನವನ್ನು ಪೂರೈಸುವ, ಆ ಮೂಲಕ ಸಂಸಾರವನ್ನು ತೂಗಿಸಿಕೊಂಡು ಹೋಗುವ ಸಾಮರ್ಥ್ಯವನ್ನು ಈ ಉದ್ಯೋಗದ ಮೂಲಕ ಕಂಡುಕೊಂಡ ಕುಟುಂಬಗಳು ಇಂದು ಕಂಗಾಲಾಗಿವೆ. ಹೆಚ್ಚು ಜನ ಸೇರುವ ಯಾವುದೇ ಸಭೆ ಸಮಾರಂಭಗಳು ನಡೆಯಬಾರದು ಎಂದು ಸರ್ಕಾರ ನಿರ್ಬಂಧ ವಿಧಿಸಿರುವುದರಿಂದ ಇವರು ಉತ್ಪಾದಿಸುವ ಊಟದ ತಟ್ಟೆಗೆ ಬೇಡಿಕೆಯೇ ಇಲ್ಲದಂತಾಗಿರುವುದು ಇದಕ್ಕೆ ಕಾರಣ.

ಬೀರೂರಿನ ಸಜ್ಜನರಾಜ್ ಬಡಾವಣೆಯಲ್ಲಿ ಅಡಿಕೆಹಾಳೆಯ ಮೂಲಕ ತಟ್ಟೆ ತಯಾರಿಸುವ ಗುಡಿ ಕೈಗಾರಿಕೆಯಂತಹ ಸಣ್ನ ಉದ್ಯಮದಲ್ಲಿ ತೊಡಗಿಕೊಂಡಿರುವ ಶಂಕರಣ್ಣ ಹೇಳುವಂತೆ, ‘ತೋಟಗಳಲ್ಲಿ ಸಂಗ್ರಹವಾಗುವ ಈ ಹೊರ ಪಾಳೆಗೆ ನಾವು ₹ 1.70ರಂತೆ ಖರೀದಿ ಮಾಡುತ್ತೇವೆ. ಆಟೊ ಮೂಲಕ ನಮ್ಮ ಕೆಲಸ ಮಾಡುವ ಜಾಗಕ್ಕೆ ನಾವೇ ತಂದು ಹಾಕಿಕೊಳ್ಳುತ್ತೇವೆ. ಬೀರೂರಿನಲ್ಲಿ ಸುಮಾರು 15 ಇಂತಹ ಘಟಕಗಳಿದ್ದು 50-55 ಸಂಸಾರಗಳು ಇದೇ ವೃತ್ತಿ ಅವಲಂಬಿಸಿ ದಿನ ದೂಡುತ್ತಿವೆ. ಹೊರಪಾಳೆಗಳು ಹಸಿ ಇದ್ದರೆ ನಾವು ತಯಾರಿಸಿದ ತಟ್ಟೆ ಸಂಕುಚನಗೊಳ್ಳುತ್ತದೆ. ಹಾಗಾಗಿ ಮೊದಲು ಇದನ್ನು ಒಣಗಿಸಿ ಬಳಿಕ ನೀರಿನಲ್ಲಿ ನೆನೆಸಿ ಹದಗೊಳಿಸಿ ತಟ್ಟೆ ಉತ್ಪಾದನೆಯಲ್ಲಿ ತೊಡಗುತ್ತೇವೆ. ಸಾಮಾನ್ಯವಾಗಿ ಬಳಸಿ ಎಸೆಯಬಹುದಾದ ಈ ತಟ್ಟೆಗಳ ಬೆಲೆ ಒಂದಕ್ಕೆ ₹ 2ರಿಂದ 3 ಇದ್ದು ಅದರ ಅಳತೆಯ ಮೇಲೆ ದರ ನಿರ್ಧಾರವಾಗುತ್ತದೆ, ಒಂದು ಹಾಳೆಯಲ್ಲಿ ಸಾಮಾನ್ಯವಾಗಿ 2 ತಟ್ಟೆ ತಯಾರಿಸಬಹುದಾಗಿದೆ’ ಎಂದು ಹೇಳುತ್ತಾರೆ.

ADVERTISEMENT

‘ಜಾತ್ರೆ, ಸಭೆ, ಸಮಾರಂಭಗಳು, ಮದುವೆ ಮತ್ತಿತರ ಕಾರ್ಯಕ್ರಮಗಳಲ್ಲಿ ಬಳಸಲು ಸುಲಭವಾದ ಮತ್ತು ಎಲ್ಲ ಕಾಲದಲ್ಲಿಯೂ ದೊರೆಯುವ ಇಂತಹ ತಟ್ಟೆಗಳಿಗೆ ಬೇಡಿಕೆ ಇದೆ. ಆದರೆ, ಎರಡು ತಿಂಗಳಿನಿಂದ ಕೆಲಸವೂ ಸ್ಥಗಿತಗೊಂಡು, ವ್ಯಾಪಾರವೂ ಇಲ್ಲದ ಅತಂತ್ರ ಬದುಕು ನಮ್ಮದಾಗಿದೆ. ನಾವು ತಯಾರಿಸಿದ ಉತ್ಪನ್ನ ಹಾಳಾಗುವುದಿಲ್ಲವಾದರೂ ಜಾಗವೇ ಇಲ್ಲದ ಕಡೆ ಎಷ್ಟು ಅಂತ ತಯಾರು ಮಾಡಿ ಪೇರಿಸಿ ಇಟ್ಟುಕೊಳ್ಳುವುದು? ಹಾಗಾಗಿ ಕೆಲಸವನ್ನೇ ಸ್ಥಗಿತಗೊಳಿಸಿದ್ದೇವೆ. ಇದು ನಮಗೂ ನಮ್ಮ ಅವಲಂಬಿತರಿಗೂ ಸಂಕಷ್ಟ ತಂದಿದೆ. ಯಾರ ಹಂಗಿನಲ್ಲೂ ಬದುಕಬಾರದು ಎಂದು ನಾವು ಶ್ರಮಿಸಿದರೂ ಹಣೆಬರಹಕ್ಕೆ ಹೊಣೆ ಯಾರು?' ಎನ್ನುವುದು ಅವರ ಮಾತು.

ಒಟ್ಟಾರೆ ದಿನಗೂಲಿ ಕಾರ್ಮಿಕರಿಂದ ಹಿಡಿದು ದೊಡ್ಡ ಉದ್ಯಮಿಗಳವರೆಗೂ ಹೊಡೆತ ನೀಡಿರುವ ಈ ಕೊರೊನಾ ಮಹಾಮಾರಿ ಕೂಲಿಗಾರರಿಗೆ ಹೊಟ್ಟೆ ತುಂಬಿಸಿಕೊಳ್ಳಲೂ ಸಾಧ್ಯವಾಗದ ಪರಿಸ್ಥಿತಿ ನಿರ್ಮಿಸಿದೆ. ಆದಷ್ಟು ಬೇಗ ಸಾಮಾನ್ಯ ಸ್ಥಿತಿಗೆ ಜನಜೀವನ ಮರಳಲಿ, ಶ್ರಮಪಟ್ಟು ದುಡಿಯುವವರ ಬದುಕು ಹಸನಾಗಲಿ ಎನ್ನುವುದು ಆಶಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.