ADVERTISEMENT

ಆರಂಭವಾಗದ 561 ಮನೆಗಳ ಕಾಮಗಾರಿ

ಪ್ರಧಾನ ಮಂತ್ರಿ ಆವಾಸ್‌ ಯೋಜನೆ: ಕಳೆದ 2 ವರ್ಷ ರಾಜ್ಯ ಸರ್ಕಾರದ ಅನುದಾನ ಸ್ಥಗಿತ

ಬಿ.ಜೆ.ಧನ್ಯಪ್ರಸಾದ್
Published 14 ಮೇ 2022, 2:23 IST
Last Updated 14 ಮೇ 2022, 2:23 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಚಿಕ್ಕಮಗಳೂರು: ಜಿಲ್ಲೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಡಿ (ಪಿಎಂಎವೈ) 1,654 ಮನೆಗಳ ನಿರ್ಮಾಣಕ್ಕೆ ಅನುಮೋದನೆ ನೀಡ ಲಾಗಿದೆ. ಈ ಪೈಕಿ 561 ಫಲಾನುಭವಿ ಗಳು ಕಾಮಗಾರಿ ಆರಂಭಿಸಿಲ್ಲ, ರಾಜ್ಯ ಸರ್ಕಾರ ಎರಡು ವರ್ಷಗಳಿಂದ ಈ ಕಾಮಗಾರಿಗೆ ಅನುದಾನ ಒದಗಿಸಿಲ್ಲ.

ವಾಜಪೇಯಿ ವಸತಿ ಯೋಜನೆಯಡಿ ಸಾಮಾನ್ಯ ವರ್ಗದ ಫಲಾನುಭವಿಗೆ ₹ 2.70 ಲಕ್ಷ ಅನುದಾನವನ್ನು ಒದಗಿಸಲಾಗುತ್ತದೆ. ಕೇಂದ್ರ ಸರ್ಕಾರ ₹ 1.5 ಲಕ್ಷ , ರಾಜ್ಯ ಸರ್ಕಾರ ₹ 1.2 ಲಕ್ಷ ನೀಡುತ್ತದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಅಂಬೇಡ್ಕರ್‌ ವಸತಿ ಯೋಜನೆಯಡಿ ಫಲಾನುಭವಿಗೆ ₹ 3.30 ಲಕ್ಷ ಅನುದಾನ ನೀಡಲಾಗುತ್ತದೆ. ಕೇಂದ್ರ ಸರ್ಕಾರ ₹ 1.50 ಲಕ್ಷ ಹಾಗೂ ರಾಜ್ಯ ಸರ್ಕಾರ 1.80 ಲಕ್ಷ ಒದಗಿಸುತ್ತದೆ.
ವಾಜಪೇಯಿ ವಸತಿ ಯೋಜನೆಗೆ ಅರ್ಜಿ ಸಲ್ಲಿಕೆಗೆ ಆದಾಯ ಮಿತಿ 2 ಲಕ್ಷ ಹಾಗೂ ಅಂಬೇಡ್ಕರ್‌ ವಸತಿ ಯೋಜನೆಗೆ ₹ 3.3 ಲಕ್ಷ ನಿಗದಿಪಡಿಸಲಾಗಿದೆ.

ADVERTISEMENT

ನಗರ ಆಶ್ರಯ ಸಮಿತಿಯವರು ಫಲಾನುಭವಿಗಳನ್ನು ಆಯ್ಕೆ ಮಾಡುತ್ತಾರೆ.

‘ಬರಿ ₹ 1.50 ಲಕ್ಷದಲ್ಲಿ (ಕೇಂದ್ರ ಅನುದಾನ) ಮನೆ ನಿರ್ಮಿಸಲು ಆಗಲ್ಲ. ರಾಜ್ಯ ಸರ್ಕಾರದ ₹ 1.20 ಲಕ್ಷ ಅನುದಾನ ಒದಗಿಸಬೇಕು ಅಥವಾ ಬೇರೆ ಯೋಜನೆಯಡಿ ಅನುದಾನ ಮಂಜೂರು ಮಾಡುವಂತೆ ಮನವಿ ಮಾಡಿದ್ದೇವೆ’ ಎಂದು ಕಡೂರಿನ ಫಲಾನುಭವಿಯೊಬ್ಬರು ತಿಳಿಸಿದರು.

ಮಂಜೂರಾಗಿರುವ 1654 ವಸತಿ ಪೈಕಿ ಈವರೆಗೆ 671 ಮನೆಗಳ ಕಾಮಗಾರಿ ಮುಗಿದಿದೆ. ಕಾಮಗಾರಿ ಪ್ರಗತಿ ಶೇ 41 ಮಾತ್ರ ಸಾಧನೆಯಾಗಿದೆ. 438 ಮನೆಗಳು ಕಾಮಗಾರಿ ಹಂತದಲ್ಲಿವೆ.

‘ಕೋವಿಡ್‌ ತಲ್ಲಣದಿಂದಾಗಿ 2019–20, 2020–21ನೇ ಸಾಲಿನಲ್ಲಿ ರಾಜ್ಯ ಸರ್ಕಾರ ಅನುದಾನ ನೀಡಿಲ್ಲ. ರಾಜ್ಯ ಸರ್ಕಾರವು ಈಗ ‘ವಾಜಪೇಯಿ’ ಮತ್ತು ಅಂಬೇಡ್ಕರ್‌ ಯೋಜನೆಗಳಿಗೆ 2021–22ನೇ ಸಾಲಿಗೆ ಅನುದಾನ ಬಿಡುಗಡೆ ಮಾಡಿ, ಗುರಿ ನಿಗದಿಪಡಿಸಿದೆ. ಕಾಮಗಾರಿ ಆರಂಭಿಸದಿರುವ 561 ಫಲಾನುಭವಿಗಳಿಗೆ ಈ ಪಟ್ಟಿಗೆ ಸೇರಿ ಅನುದಾನ ಒದಗಿಸಲಾಗುವುದು’ ಎಂದು ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಮನೋಹರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘2019–20 ಮತ್ತು 2020–21ನೇ ಸಾಲಿನಲ್ಲಿ ‘ಪಿಎಂಎವೈ– ಬೆನಿಫಿಶಿಯರಿ ಲೆಡ್‌ ಕಾಂಟ್ರಿಬ್ಯುಷನ್‌ ಸ್ಕೀಂ’ ನಲ್ಲಿ 1654 ಮನೆ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. ನಿರ್ಮಾಣ ಹಂತದಲ್ಲಿರುವ 438 ಮನೆಗಳು ಕಾಮಗಾರಿ ಮೂರು ತಿಂಗಳಲ್ಲಿ ಮುಗಿಯಲಿದೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.