ADVERTISEMENT

ಪೊಲೀಸ್‌ ಧ್ವಜ ದಿನ: ಸಾರ್ವಜನಿಕರೊಂದಿಗೆ ಸಂಪರ್ಕ, ನಂಬಿಕೆ ಮುಖ್ಯ -ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2021, 3:14 IST
Last Updated 3 ಏಪ್ರಿಲ್ 2021, 3:14 IST
ಚಿಕ್ಕಮಗಳೂರಿನಲ್ಲಿ ಶುಕ್ರವಾರ ನಡೆದ ಪೊಲೀಸ್‌ ಧ್ವಜ ದಿನಾಚರಣೆಯಲ್ಲಿ ಪಥಸಂಚಲನ ನಡೆಯಿತು. –ಪ್ರಜಾವಾಣಿ ಚಿತ್ರ
ಚಿಕ್ಕಮಗಳೂರಿನಲ್ಲಿ ಶುಕ್ರವಾರ ನಡೆದ ಪೊಲೀಸ್‌ ಧ್ವಜ ದಿನಾಚರಣೆಯಲ್ಲಿ ಪಥಸಂಚಲನ ನಡೆಯಿತು. –ಪ್ರಜಾವಾಣಿ ಚಿತ್ರ   

ಚಿಕ್ಕಮಗಳೂರು: ಸಾರ್ವಜನಿಕರೊಂದಿಗಿನ ಸಂಪರ್ಕ, ನಂಬಿಕೆಯೇ ಪರಿಣಾಮಕಾರಿ ಪೊಲೀಸ್‌ ವ್ಯವಸ್ಥೆ ಅಸ್ತ್ರಗಳು ಎಂದು ಜಿಲ್ಲಾಧಿಕಾರಿ ಕೆ.ಎನ್‌.ರಮೇಶ್‌ ಹೇಳಿದರು.

ರಾಮನಹಳ್ಳಿಯ ಕವಾಯತು ಮೈದಾನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪೊಲೀಸ್‌ ಧ್ವಜ ದಿನಾಚರಣೆಯಲ್ಲಿ ಮಾತನಾಡಿದರು. ‘ಒಂದೊಮ್ಮೆ ಜನರು ಪೊಲೀಸ್‌ ಠಾಣೆಗೆ ಬರಲು ಭಯಪಡುತ್ತಿದ್ದರು. ಪಂಚಾಯಿತಿಮಟ್ಟದಲ್ಲಿ ವ್ಯಾಜ್ಯ ಇತ್ಯರ್ಥಪಡಿಸಿಕೊಳ್ಳುತ್ತಿದ್ದರು. ಇಂದಿನ ದಿನಗಳಲ್ಲಿ ಜನರು ಠಾಣೆಗೆ ಬರುತ್ತಾರೆ, ಸಣ್ಣ ವಿಚಾರಗಳನ್ನೂ ಪೊಲೀಸರ ಗಮನಕ್ಕೆ ತರುತ್ತಾರೆ.ಈ ಸಾಮಾಜಿಕ ರೂಪಾಂತರಕ್ಕೆ ಇಲಾಖೆ ಕಾರ್ಯನಿರ್ವಹಣೆಯೇ ಕಾರಣ’ ಎಂದು ಅಭಿಪ್ರಾಯಪಟ್ಟರು.

ಸೈನಿಕರು ದೇಶದ ಗಡಿ ಭದ್ರತೆ ಕಾಯಕ ನಿರ್ವಹಿಸುತ್ತಾರೆ. ಪೊಲೀಸರು ದೇಶದೊಳಗಿನ ಭದ್ರತೆ ಕಾರ್ಯನಿರ್ವಹಿಸುತ್ತಾರೆ. ಸೇನೆ, ಪೊಲೀಸ್ ಎರಡೂ ಶಿಸ್ತಿನ ಸೇವೆಗಳು ಎಂದು ಹೇಳಿದರು.

ADVERTISEMENT

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್‌.ಪೂವಿತಾ ಮಾತನಾಡಿ, ಜಿಲ್ಲೆಯಲ್ಲಿ ಪೊಲೀಸ್‌ ಇಲಾಖೆ ಮತ್ತು ಇತರ ಇಲಾಖೆಗಳೊಂದಿಗಿನ ಸಮನ್ವಯ ಚೆನ್ನಾಗಿದೆ. ಸಮಸ್ಯೆಯನ್ನು ಗಮನಕ್ಕೆ ತಂದ ತಕ್ಷಣ ಸ್ಪಂದಿಸುತ್ತಾರೆ ಎಂದರು.

ನಿವೃತ್ತ ಪೊಲೀಸ್‌ ಇನ್‌ಸ್ಪೆಕ್ಟರ್‌ ಕೆ.ಪ್ರಭಾಕರ್‌ ಮಾತನಾಡಿ, ಪೊಲೀಸರಿಗೆ ನಿತ್ಯ ಸವಾಲುಗಳು ಎದುರಾಗುತ್ತವೆ. ವಿವಿಧ ಇಲಾಖೆಗಳು ಮತ್ತು ಸಾರ್ವಜನಿಕರೊಂದಿಗೆ ಸಮನ್ವಯ ಕಾಪಾಡಿಕೊಂಡು ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.

‘ತಪ್ಪು ಮಾಡಿ ಮೇಲಧಿಕಾರಿಗಳಿಗೆ ನೋವುಂಟು ಮಾಡಬಾರದು. ಎಫ್‌ಐಆರ್‌ ದಾಖಲಿಸಲು ವಿಳಂಬ ಮಾಡಬಾರದು. ಯಾರಾದರೂ ದೂರು ನೀಡಿದಾಗ ಎನ್‌ಸಿಆರ್‌, ಎಫ್‌ಐಆರ್‌, ಎಫ್‌ಎಆರ್‌ ದಾಖಲಿಸುವುದು ಪೊಲೀಸರ ಕೆಲಸ. ಠಾಣೆಗೆ ಬಂದವರೊಂದಿಗೆ ಸೌಜನ್ಯಯುತವಾಗಿ ವರ್ತಿಸಬೇಕು’ ಎಂದು ಕಿವಿಮಾತು ಹೇಳಿದರು.

ಠಾಣೆಗೆ ಬಂದವರ ದೂರು–ದುಮ್ಮಾನಗಳನ್ನ ಆಲಿಸಬೇಕು. ಅವುಗಳನ್ನು ತ್ವರಿತ್ವವಾಗಿ ಪರಿಹರಿಸಲು ಗಮನಹರಿಸಬೇಕು. ಅಗ ಇಲಾಖೆ ಮೇಲೆ ಜನರಿಗೆ ವಿಶ್ವಾಸ ಹೆಚ್ಚುತ್ತದೆ ಎಂದು ಹೇಳಿದರು.

1965 ಏ.2 ರಂದು ಕರ್ನಾಟಕ ಪೊಲೀಸ್‌ ಕಾಯ್ದೆ ಅನುಷ್ಠಾನವಾಗಿತ್ತು. ಆ ದಿನದ ಸವಿನೆನೆಪಿಗಾಗಿ ಪ್ರತಿ ವರ್ಷ ಏ.2ರಂದು ನಿವೃತ್ತ ಪೊಲೀಸರ ದಿನ ಮತ್ತು ಧ್ವಜ ದಿನ ಆಚರಿಸಲಾಗುತ್ತದೆ ಎಂದು ತಿಳಿಸಿದರು.

6 ಮಂದಿಗೆ ಸನ್ಮಾನ
ಪೊಲೀಸರ ಕಾರ್ಯನಿರ್ವಹಣೆಗೆ ಸಾಥ್‌ ನೀಡಿದ 6 ಮಂದಿಯನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಚನ್ನಕೇಶವ (6 ಸಾವಿರಕ್ಕೂ ಹೆಚ್ಚು ಶವಗಳ ಪರೀಕ್ಷೆಗೆ ಸಹಕಾರ), ನಾಜೀರ್‌ ಅಹ್ಮದ್‌ (600ಕ್ಕೂ ಹೆಚ್ಚು ಶವಸಂಸ್ಕಾರ ಸಹಕಾರ), ಎಚ್‌.ಎಂ.ಅಬೂಬಕರ್‌ (ಲಾಕ್‌ಡೌನ್‌ ಸಮಯದಲ್ಲಿ ಪೊಲೀಸರಿಗೆ, ಸಾರ್ವಜನಿಕರಿಗೆ ಅಗತ್ಯ ವಸ್ತು ಪೂರೈಕೆ), ಅಬ್ದುಲ್‌ ಜಲೀಲ್‌ (ನದಿಯಲ್ಲಿ ಶವ ಶೋಧಕ್ಕೆ ಸಹಕಾರ), ಶಶಿಕಿರಣ್‌ (ಕಾನೂನುಬಾಹಿರ ಚಟುವಟಿಕೆಗಳ ಕುರಿತು ಗುಪ್ತ ಮಾಹಿತಿ) ಹಾಗೂ ರಾಘವೇಂದ್ರ (ಚಿನ್ನ–ಬೆಳ್ಳಿ ಕಳವು ಪ್ರಕರಣಗಳ ಪಂಚನಾಮೆಗೆ ನೆರವು) ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.