ADVERTISEMENT

ಎರಡು ಕ್ಯಾಂಟರ್‌ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 38 ಜಾನುವಾರು ರಕ್ಷಣೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2021, 16:55 IST
Last Updated 8 ಜನವರಿ 2021, 16:55 IST
ಶೃಂಗೇರಿ ಪೊಲೀಸರು ವಶಕ್ಕೆ ಪಡೆದ ಜಾನುವಾರನ್ನು ಪಟ್ಟಣದ ಪೊಲೀಸ್ ವಸತಿ ಗೃಹದ ಬಳಿ ಕಟ್ಟಿ ಹಾಕಿರುವುದು
ಶೃಂಗೇರಿ ಪೊಲೀಸರು ವಶಕ್ಕೆ ಪಡೆದ ಜಾನುವಾರನ್ನು ಪಟ್ಟಣದ ಪೊಲೀಸ್ ವಸತಿ ಗೃಹದ ಬಳಿ ಕಟ್ಟಿ ಹಾಕಿರುವುದು   

ಶೃಂಗೇರಿ: ತಾಲ್ಲೂಕಿನ ಗಡಿಭಾಗದ ಮೂಲಕ ಹೊರ ಜಿಲ್ಲೆಗೆ ಅಕ್ರಮವಾಗಿ ಎರಡು ಪ್ರತ್ಯೇಕ ವಾಹನದಲ್ಲಿ ಸಾಗಣೆ ಮಾಡುತ್ತಿದ್ದ ಜಾನುವಾರನ್ನು ಬಜರಂಗದಳದ ಕಾರ್ಯಕರ್ತರ ಸಹಕಾರದೊಂದಿಗೆ ಪೊಲೀಸರು ಪತ್ತೆ ಹಚ್ಚಿ, ಪ್ರಕರಣ ದಾಖಲಿಸಿದ್ದಾರೆ.

ತನಿಕೋಡು ಚೆಕ್‍ಪೋಸ್ಟ್ ಬಳಿ ಅನುಮಾನಾಸ್ಪದವಾಗಿ ನಿಂತಿದ್ದ ಕ್ಯಾಂಟರ್‌ ಅನ್ನು ಪರಿಶೀಲಿಸಿದಾಗ ಅದರೊಳಗೆ ಅಕ್ರಮವಾಗಿ 20 ಜಾನು ವಾರನ್ನು ತುಂಬಿಸಲಾಗಿತ್ತು. ಅದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.

ಇನ್ನೊಂದು ಪ್ರಕರಣದಲ್ಲಿ ಶೃಂಗೇರಿಯಿಂದ ಆಗುಂಬೆ ಕಡೆಗೆ ತೆರಳುತ್ತಿದ್ದ ಕ್ಯಾಂಟರ್‌ ಅನ್ನು ಬಜರಂಗದಳದ ಕಾರ್ಯಕರ್ತರು ಅಡ್ಡಗಟ್ಟಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ತೆರಳಿದ ಪೊಲೀಸರು 18 ಜಾನುವಾರು, ಕ್ಯಾಂಟರ್ ಮತ್ತು ಮಾಲೀಕ ದಾವಣಗೆರೆಯ ಅಭಿದಾಲಿಕ್‍ನನ್ನು ವಶಕ್ಕೆ ಪಡೆದಿದ್ದಾರೆ.

ADVERTISEMENT

ಒಟ್ಟು 34 ಎತ್ತು ಮತ್ತು 4 ಎಮ್ಮೆಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಅದರಲ್ಲಿ 2 ಎತ್ತುಗಳು ವಾಹನದೊಳಗೆ ಮೃತಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಚಾಲಕನಿಂದ ಪ್ರತಿದೂರು: ‘ನನ್ನ ಮೇಲೆ ಅಪರಿಚಿತರು ಹಲ್ಲೆ ಮಾಡಿ ₹ 22 ಸಾವಿರ ನಗದು ಮತ್ತು 2 ಮೊಬೈಲ್‍ ಅನ್ನು ದೋಚಿ ಪರಾರಿಯಾಗಿದ್ದಾರೆ’ ಎಂದು ಕ್ಯಾಂಟರ್ ಮಾಲೀಕ ಅಭಿದಾಲಿಕ್ ಪ್ರತಿ ದೂರು ನೀಡಿದ್ದಾರೆ.

ಪೊಲೀಸರು 3 ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಸ್ಥಳಕ್ಕೆ ಪ್ರಭಾರ ಡಿವೈಎಸ್ಪಿ ಡಿ.ಟಿ ಪ್ರಭು ಭೇಟಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.