ADVERTISEMENT

ಧರ್ಮದ ವಿಷಯದಲ್ಲಿ ರಾಜಕೀಯ ಹಸ್ತಕ್ಷೇಪ ಒಳಿತಲ್ಲ: ರಂಭಾಪುರಿ ಶ್ರೀ ಅಭಿಮತ

ಧರ್ಮ ಜಾಗೃತಿ ಸಮಾರಂಭದಲ್ಲಿ ರಂಭಾಪುರಿ ಶ್ರೀ ಅಭಿಮತ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2025, 5:46 IST
Last Updated 4 ನವೆಂಬರ್ 2025, 5:46 IST
ಬೀರೂರಿನ ಗಣಪತಿ ಪೆಂಡಾಲ್‌ ಮೈದಾನದಲ್ಲಿ ಸೋಮವಾರ ನಡೆದ ಧರ್ಮಜಾಗೃತಿ ಸಮಾವೇಶವನ್ನು ಬೆಳ್ಳಿಪ್ರಕಾಶ್‌ ಉದ್ಘಾಟಿಸಿದರು. ರಂಭಾಪುರಿ, ಉಜ್ಜಯಿನಿ, ಶ್ರೀಶೈಲ, ಕಾಶಿಯ ಹಿರಿ ಮತ್ತು ಕಿರಿಯ ಸ್ವಾಮೀಜಿ, ಶಾಸಕ ಕೆ.ಎಸ್‌.ಆನಂದ್‌, ವೈ.ಎಸ್‌.ವಿ.ದತ್ತ, ಬೀರೂರು ರುದ್ರಮುನಿ ಶಿವಾಚಾರ್ಯ ಶ್ರೀಗಳು ಭಾಗವಹಿಸಿದ್ದರು
ಬೀರೂರಿನ ಗಣಪತಿ ಪೆಂಡಾಲ್‌ ಮೈದಾನದಲ್ಲಿ ಸೋಮವಾರ ನಡೆದ ಧರ್ಮಜಾಗೃತಿ ಸಮಾವೇಶವನ್ನು ಬೆಳ್ಳಿಪ್ರಕಾಶ್‌ ಉದ್ಘಾಟಿಸಿದರು. ರಂಭಾಪುರಿ, ಉಜ್ಜಯಿನಿ, ಶ್ರೀಶೈಲ, ಕಾಶಿಯ ಹಿರಿ ಮತ್ತು ಕಿರಿಯ ಸ್ವಾಮೀಜಿ, ಶಾಸಕ ಕೆ.ಎಸ್‌.ಆನಂದ್‌, ವೈ.ಎಸ್‌.ವಿ.ದತ್ತ, ಬೀರೂರು ರುದ್ರಮುನಿ ಶಿವಾಚಾರ್ಯ ಶ್ರೀಗಳು ಭಾಗವಹಿಸಿದ್ದರು   

ಬೀರೂರು (ಚಿಕ್ಕಮಗಳೂರು): ‘ಧರ್ಮ, ಪರಂಪರೆಗಳು ನಮ್ಮ ನಾಡನ್ನು ನಿರ್ಮಿಸಿವೆ. ಧರ್ಮ ಮತ್ತು ಜಾತಿಯ ನಡುವೆ ಸಂಘರ್ಷ ಹುಟ್ಟಿಸುವ ರಾಜಕೀಯ ಹಸ್ತಕ್ಷೇಪ ಒಳಿತಲ್ಲ’ ಎಂದು ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಬೀರೂರಿನ ಗಣಪತಿ ಪೆಂಡಾಲ್‌ ಮೈದಾನದಲ್ಲಿ ಸೋಮವಾರ ನಡೆದ ‘ಧರ್ಮ ಜಾಗೃತಿ’ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಪಂಚಪೀಠಗಳು ಸಕಲರಿಗೂ ಲೇಸನ್ನೇ ಬಯಸುವುದಾಗಿದ್ದು, ಜನರಲ್ಲಿ ಧರ್ಮಶ್ರದ್ಧೆ ಉಳಿಸುವಲ್ಲಿ ಗುರುಗಳು ನಿರತರಾಗಿದ್ದಾರೆ. ಜಾತಿ, ಮತ, ಪಂಥಗಳ ಗಡಿ ಮೀರಿ ಸಮಾಜದಲ್ಲಿ ಭಾವೈಕ್ಯ ಮೂಡಿಸುವುದೇ ನಮ್ಮ ಧ್ಯೇಯ. ಧರ್ಮವನ್ನು ಪಾಲಿಸುವ, ಬೋಧಿಸುವ ಕೆಲಸವನ್ನು ಗುರು ಮಾಡಬೇಕು. ರಾಜಕಾರಣಿಗಳು ಧರ್ಮಗಳ ನಡುವೆ ಸಂಘರ್ಷ ಮೂಡಿಸುವ ಕೆಲಸ ಮಾಡಬಾರದು ಎನ್ನುವುದು ನಮ್ಮ ಕಳಕಳಿಯ ಸಂದೇಶವಾಗಿದೆ. ಈ ಕಾರ್ಯಕ್ರಮ ಯಶಸ್ವಿಯಾಗಿದ್ದು, ಬೀರೂರು ಶ್ರೀಗಳ ನೇತೃತ್ವದಲ್ಲಿ ಎಲ್ಲರ ಶ್ರಮ ಸಾರ್ಥಕವಾಗಿದೆ’ ಎಂದರು.

ADVERTISEMENT

ಉಜ್ಜಯಿನಿ ಪೀಠದ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ, ‘ಪಂಚಪೀಠಗಳು ಜಾತಿಯ ಬದಲಾಗಿ ಜ್ಯೋತಿಯಂತೆ ಸರ್ವಧರ್ಮ ಸಮನ್ವಯದ ಪ್ರತೀಕವಾಗಿವೆ. ಬೀರೂರು ಐತಿಹಾಸಿಕವಾಗಿಯೂ ಪ್ರಾಮುಖ್ಯ ಪಡೆದಿದ್ದು, 1919ರ ಡಿಸೆಂಬರ್‌ ತಿಂಗಳಲ್ಲಿ ಇಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ 9ನೇ ಸಮ್ಮೇಳನ ನಮ್ಮ ಪರಮಾಚಾರ್ಯರ ಸಮ್ಮುಖದಲ್ಲಿ ನಡೆದಿತ್ತು. ಇಂದಿನ ಕಾರ್ಯಕ್ರಮದಲ್ಲಿ ಈ ಊರು ಸರ್ವ ಜನಾಂಗದ ಶಾಂತಿಯ ತೋಟ ಎಂದು ಸಾಬೀತಾಗಿದೆ. ನಾವೆಲ್ಲರೂ ಭಾರತೀಯರು ಎಂಬ ಹೆಮ್ಮೆ, ಸರ್ವರಲ್ಲಿ ಸಮಭಾವ, ಸಮನ್ವಯ, ಸೌಹಾರ್ದ, ಸಹಬಾಳ್ವೆ, ಭ್ರಾತೃತ್ವ ಮೂಡಿಬರಲಿ. 2026ರ ಜನವರಿ 7ರಂದು ಸಮೀಪದ ಬುಕ್ಕಾಂಬುಧಿಯಲ್ಲಿ ಪಂಚ ಪೀಠಾಧೀಶರ ಅಡ್ಡಪಲ್ಲಕ್ಕಿ ಉತ್ಸವ ನಡೆಯಲಿದೆ. ಅದಕ್ಕೆ ಪಾದಯಾತ್ರೆಯ ಮೂಲಕ ಬುಕ್ಕಾಂಬುಧಿ ತಲುಪುವುದಾಗಿ ತಿಳಿಸಿದರು.

ಶ್ರೀಶೈಲ ಪೀಠದ ಡಾ.ಚನ್ನಸಿದ್ದರಾಮ ರಾಜದೇಶಿಕೇಂದ್ರ ಸ್ವಾಮೀಜಿ ಆಶೀರ್ವಚನದಲ್ಲಿ, ಜೀವನ ಸಾರ್ಥಕ್ಯಕ್ಕೆ ಧರ್ಮದ ಅಗತ್ಯವಿದೆ. ನಮ್ಮಲ್ಲಿ ಧರ್ಮ ಮರೆತದ್ದಕ್ಕಾಗಿಯೇ ದುಃಖ ಉಂಟಾಗುತ್ತದೆ ಎನ್ನುವ ಅರಿವು ಬೇಕು. ಒಡೆದ ಮನಸ್ಸುಗಳನ್ನು ಕೂಡಿಸುವುದೇ ಧರ್ಮವಾಗಿದ್ದು, ದಯೆ, ಕ್ಷಮೆ, ನಿಗ್ರಹ, ಸತ್ಕಾರ್ಯ ಎಲ್ಲವೂ ಧರ್ಮವೇ ಆಗಿದೆ. ಧರ್ಮದ ಸೂಕ್ಷ್ಮತೆಯನ್ನು ಅರಿಯದವರು ವೀರಶೈವ-ಲಿಂಗಾಯತ ಬೇರೆ ಎನ್ನುತ್ತಾ ಧರ್ಮ ಒಡೆಯುವ ಕೆಲಸ ಮಾಡುತ್ತಿದ್ದಾರೆ, ಇದೇ ಅಧರ್ಮ ಎಂದರು.

ವಚನಗಳಲ್ಲಿ ಒಂದೆಡೆ ಬಸವಣ್ಣನವರೇ ‘ನಿಜ ವೀರಶೈವನಾದೆ’ ಎಂದು ಹೇಳಿದ್ದಾರೆ. ಅಲ್ಲದೆ, ಲಿಂಗಾಯತ ಎಂದು ಎಲ್ಲಿಯೂ ಬಳಸಿಲ್ಲ. ಇದನ್ನು ಸಮಾಜವು ಅರಿಯಬೇಕಾದ ಸನ್ನಿವೇಶವಿದ್ದು, ಬಸವಣ್ಣನವರ ಅನುಯಾಯಿಗಳು ಎಂದು ಹೇಳಿ ಅವರ ಹೆಸರಿನಲ್ಲಿ ತಮ್ಮ ವಾದವನ್ನು ಹೇರುವುದು ಸರಿಯಲ್ಲ. ವೀರಶೈವ-ಲಿಂಗಾಯತ ಎಂದೂ ಒಂದೇ ಎಂದು ಪ್ರತಿಪಾದಿಸಿದರು.

ಕಾಶೀ ಪೀಠದ ಕಿರಿಯ ಶ್ರೀ ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸನಾತನ ಧರ್ಮಕ್ಕೆ ಅಂತ್ಯವಿಲ್ಲ, ಸೃಷ್ಟಿಯ ಆರಂಭದಿಂದಲೂ ಇರುವ ಧರ್ಮವನ್ನು ಅಂತ್ಯ ಮಾಡಲು ಹೊರಟವರೇ ಅಂತ್ಯವಾಗಿದ್ದಾರೆ. ಇದರಿಂದ ಧರ್ಮದ ನಾಶ ಯಾರಿಂದಲೂ ಸಾಧ್ಯವಿಲ್ಲ ಎಂದು ಅರ್ಥವಾಗುತ್ತದೆ ಎಂದು ತಿಳಿಸಿದರು.

ಕಾಶೀ ಪೀಠದ ಹಿರಿಯ ಶ್ರೀ ಚಂದ್ರಶೇಖರ ಶಿವಾಚಾರ್ಯರು, ಪ್ರಕೃತಿಯೇ ಪಂಚಪೀಠಗಳ ತತ್ವವಾಗಿದ್ದು ಸಮೃದ್ಧಿ, ತ್ಯಾಗ, ವೈಶಾಲ್ಯ, ಸ್ವಚ್ಛತೆ, ಪರಿಪಕ್ವತೆ ಇದರ ಸಂಕೇತವಾಗಿದೆ. ಬೀರೂರು ಧರ್ಮದ ಬೇರನ್ನು ಗಟ್ಟಿಗೊಳಿಸಿದ ‘ಬೇರೂರು’ ಎಂದು ಬಣ್ಣಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ಎಸ್‌.ಆನಂದ್‌, ಶೈವ ಪರಂಪರೆ ಉಳಿಸುವಲ್ಲಿ ಪಂಚಪೀಠಗಳ ಪಾತ್ರ ಮಹತ್ವದ್ದಾಗಿದ್ದು, ಅವರ ತತ್ವಾದರ್ಶ ದೇಶಕ್ಕೆ ಅಗತ್ಯವಿದೆ. ಕಡೂರಿನಲ್ಲಿಯೂ ಮತ್ತೊಮ್ಮೆ ಶೀಘ್ರವಾಗಿ ಅಡ್ಡಪಲ್ಲಕ್ಕಿ ಮಹೋತ್ಸವ ನಡೆಸಲು ಅನುಮತಿ ನೀಡಬೇಕು ಎಂದು ಕೋರಿದರು.

ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಅಪೆಕ್ಸ್‌ ಬ್ಯಾಂಕ್‌ ಅಧ್ಯಕ್ಷ ಬೆಳ್ಳಿಪ್ರಕಾಶ್‌, ಧರ್ಮನಿಷ್ಠರಾಗಿ ದುಡಿಯೋಣ, ಕರ್ಮ ಹಿಂತಿರುಗುತ್ತದೆ, ಧರ್ಮ ಕಾಯುತ್ತದೆ ಎನ್ನುವ ಅರಿವು ಇರಲಿ. ಎಲ್ಲರಿಗೂ ಹೃದಯ ವೈಶಾಲ್ಯ ಇರಲಿ, ಶಾಸಕರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ತಮ್ಮ ಅಧಿಕಾರದ ವ್ಯಾಪ್ತಿಯಲ್ಲಿ ಇನ್ನಷ್ಟು ಒಳ್ಳೆಯ ಕೆಲಸಗಳನ್ನು ಮಾಡಲಿ. ಎದುರಾಳಿಗಳನ್ನೂ ಗೌರವಿಸುವ ಹೃದಯ ಶ್ರೀಮಂತಿಕೆ ಇರಲಿ ಎಂದು ಸಲಹೆ ನೀಡಿದರು.

ಆಶಯ ನುಡಿ ಆಡಿದ ವೈ.ಎಸ್‌.ವಿ.ದತ್ತ , ಪಂಚಪೀಠಾಧೀಶರು ಇಲ್ಲಿ ಬಂದಿದ್ದು ಬಾಯಾರಿದವನ ಬಳಿಗೆ ಬಾವಿಯೇ ಬಂದಂತಾಯ್ತು. ನಿಮ್ಮ ಕಾರುಣ್ಯದಿಂದ ದ್ವೇಷ, ಸಿಟ್ಟು, ಅಸೂಯೆ ಅಳಿದು ಮನುಷ್ಯ ಸಂಬಂಧಗಳು ಗಟ್ಟಿಯಾಗಲಿ. ಕಡೂರು ಶಾಂತಿ, ನೆಮ್ಮದಿ ಮತ್ತು ಸೌಹಾರ್ದಕ್ಕೆ ನೆಲೆಯಾಗಲಿ ಎಂದು ಆಶಿಸಿದರು.

ಸಮಾರಂಭದ ನೇತೃತ್ವವನ್ನು ಬೀರೂರು ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ವಹಿಸಿದ್ದರು.

ಎಡೆಯೂರು, ಹುಲಿಕೆರೆ, ಹುಣಸಘಟ್ಟ, ಕೆ.ಬಿದರೆ, ಚಿಕ್ಕಮಗಳೂರು, ಬಿಳಕಿ, ಹೊನ್ನವಳ್ಳಿ ಸೇರಿದಂತೆ ವಿವಿಧ ಶಾಖಾಮಠಗಳ ಶಿವಾಚಾರ್ಯರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.