ADVERTISEMENT

ಜನಪ್ರಿಯತೆ ವ್ಯಕ್ತಿತ್ವದಿಂದ ಸಿಗುವ ಗೌರವ: ಬಿ.ಎಲ್.ಶಂಕರ್ ಬಿ.ಎಲ್.ಶಂಕರ್

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2025, 5:34 IST
Last Updated 3 ಆಗಸ್ಟ್ 2025, 5:34 IST
ನರಸಿಂಹರಾಜಪುರದಲ್ಲಿ ಶನಿವಾರ ನಡೆದ ಎಚ್.ಟಿ.ರಾಜೇಂದ್ರ ಅವರ ನುಡಿನಮನ, ಗೀತಗಾಯನ ಕಾರ್ಯಕ್ರಮದಲ್ಲಿ ‘ಧ್ರುವತಾರೆ –ರಾಜೇಂದ್ರ ಬಾಳ ನೆನಪಿನ ಹನಿಗಳು’ ಪುಸ್ತಕವನ್ನು ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್.ಶಂಕರ್ ಬಿಡುಗಡೆ ಮಾಡಿದರು. ನ್ಯಾಯಮೂರ್ತಿ ಎಚ್.ಟಿ.ನರೇಂದ್ರ ಪ್ರಸಾದ್ ಭಾಗವಹಿಸಿದ್ದರು
ನರಸಿಂಹರಾಜಪುರದಲ್ಲಿ ಶನಿವಾರ ನಡೆದ ಎಚ್.ಟಿ.ರಾಜೇಂದ್ರ ಅವರ ನುಡಿನಮನ, ಗೀತಗಾಯನ ಕಾರ್ಯಕ್ರಮದಲ್ಲಿ ‘ಧ್ರುವತಾರೆ –ರಾಜೇಂದ್ರ ಬಾಳ ನೆನಪಿನ ಹನಿಗಳು’ ಪುಸ್ತಕವನ್ನು ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್.ಶಂಕರ್ ಬಿಡುಗಡೆ ಮಾಡಿದರು. ನ್ಯಾಯಮೂರ್ತಿ ಎಚ್.ಟಿ.ನರೇಂದ್ರ ಪ್ರಸಾದ್ ಭಾಗವಹಿಸಿದ್ದರು   

ನರಸಿಂಹರಾಜಪುರ: ‘ಜನಪ್ರಿಯತೆಯು ವ್ಯಕ್ತಿತ್ವದಿಂದ ಬರುವ ಗೌರವವಾಗಿದ್ದು, ಅಧಿಕಾರದಿಂದಲ್ಲ’ ಎಂದು ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್.ಶಂಕರ್ ಅಭಿಪ್ರಾಯಪಟ್ಟರು.

ಇಲ್ಲಿನ ಎಲ್.ಎಫ್ ಚರ್ಚ್ ಸಭಾಂಗಣದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಶನಿವಾರ ಸಮಾಜವಾದಿ ಚಿಂತಕ ಎಚ್.ಟಿ.ರಾಜೇಂದ್ರ ಅವರಿಗೆ ಹಮ್ಮಿಕೊಂಡಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹುಟ್ಟು ಸಹಜ. ಮರಣ ಅನಿವಾರ್ಯ. ಬದುಕು ಸಾವಿನೆಡೆ ನಿರಂತರವಾಗಿರುವ ಪ್ರಯಣ. ಎಚ್.ಟಿ.ರಾಜೇಂದ್ರ ಅವರು ಬೇರೆಯವರಿಗಾಗಿ ಬದುಕಿದವರು. ಬೇರೆಯವರಿಗಾಗಿ ಬದುಕುವುದು ನಿಜವಾದ ಜೀವನ. ರಾಮಕೃಷ್ಣ ಪರಮಹಂಸ, ನಾರಾಯಣ ಗುರು, ಸ್ವಾಮಿ ವಿವೇಕಾನಂದ, ರಮಣ ಮಹರ್ಷಿಯವರು ಮಾರಣಾಂತಿಕ ಕಾಯಿಲೆ ತುತ್ತಾಗಿ ಕಡಿಮೆ ವಯಸ್ಸಿನಲ್ಲಿ ಮರಣ ಹೊಂದಿದವರು. ಶಂಕರಾಚಾರ್ಯರು ಬದುಕಿದ್ದು 30 ವರ್ಷ. ರಾಮತೀರ್ಥರು, ಬಸವಣ್ಣ ಹೆಚ್ಚು ವರ್ಷ ಬದುಕಲು ಸಾಧ್ಯವಾಗಲಿಲ್ಲ ಎಂದರು.

ADVERTISEMENT

ರಾಜೇಂದ್ರ ಅವರು ಲೋಹಿಯಾ ಅವರ ಸಿದ್ಧಾಂತದಿಂದ ಆಕರ್ಷಿತರಾದವರು. ಕುವೆಂಪು ಅವರ ಸಿದ್ಧಾಂತ ಮತ್ತು ಸಾಹಿತ್ಯವನ್ನು ಅಪ್ಪಿಕೊಂಡವರು. ಕಡಿದಾಳ್ ಮಂಜಪ್ಪ, ಶಾಂತವೇರಿ ಗೋಪಾಲಗೌಡರ ಚಿಂತನೆಗಳನ್ನು ಅಳವಡಿಸಿಕೊಂಡಿದ್ದವರು. ಅವರು ಅಧಿಕಾರಕ್ಕಾಗಿ ಹಪಹಪಿಸದೆ ಒಂದೇ ದಾರಿಯಲ್ಲಿ ಹೋಗುವ ಪ್ರಯತ್ನ ಮಾಡಿದವರು. ಅವರು ವಿಧಾನಸಭೆಗೆ ಹೋಗದಿರುವುದು ಶೃಂಗೇರಿ ಕ್ಷೇತ್ರಕ್ಕೆ ಮತ್ತು ಚಿಕ್ಕಮಗಳೂರು ಜಿಲ್ಲೆಗೆ ಉಂಟಾದ ನಷ್ಟ ಎಂದರು.

ಹೈಕೋರ್ಟ್ ನ್ಯಾಯಮೂರ್ತಿ ಎಚ್.ಟಿ.ನರೇಂದ್ರ ಪ್ರಸಾದ್ ಮಾತನಾಡಿ, ಶಿಕ್ಷಣಕ್ಕೆ ಆದ್ಯತೆ ನೀಡಿದ್ದ ಅವರು ಪ್ರತಿಯೊಬ್ಬರು ವಿದ್ಯಾಭ್ಯಾಸ ಮಾಡಬೇಕು ಎಂಬ ಆಶಯ ಹೊಂದಿದ್ದರು. ಇದಕ್ಕಾಗಿ ಸ್ನೇಹಿತರೊಂದಿಗೆ ಸೇರಿ ಶಿಕ್ಷಣ ಸಂಸ್ಥೆ ಸ್ಥಾಪಿಸಿದ್ದರು. ಕ್ಯಾನ್ಸರ್ ರೋಗಕ್ಕೆ ತುತ್ತಾದಾಗ ಇದರಿಂದ ಅವರು ಗುಣಮುಖರಾಗುವಂತೆ ದೇವಸ್ಥಾನ, ಚರ್ಚ್, ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಿದ್ದು ಅವರ ಜಾತ್ಯಾತೀತ ನಿಲುವಿಗೆ ನಿದರ್ಶವಾಗಿತ್ತು ಎಂದರು.

ಭದ್ರಾ ಕಾಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ಪಿ.ಅಂಶುಮಂತ್ ಮಾತನಾಡಿ, ಎಚ್.ಟಿ.ರಾಜೇಂದ್ರ ಅವರನ್ನು ಯಾವುದೇ ಪಕ್ಷ ಸಮುದಾಯ, ಸಂಸ್ಥೆಗೆ ಸೀಮಿತಗೊಳಿಸಬಾರದು. ರಾಜಕಾರಣದಲ್ಲಿ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ನೊಂದವರ ಧ್ವನಿಯಾಗಿದ್ದರು ಎಂದರು.

ನುಡಿನಮನ ಸಮಿತಿಯ ಅಧ್ಯಕ್ಷ ಪಿ.ಜೆ.ಅಂಟೋಣಿ ಮಾತನಾಡಿ, ರಾಜೇಂದ್ರ ಅವರದು ಎಲ್ಲರನ್ನೂ ಪ್ರೀತಿಸುವ, ಗೌರವಿಸುವ ಗುಣವಿತ್ತು. ಯುವ ನಾಯಕರನ್ನು ಬೆಳೆಸಿದ್ದಾರೆ. ಯಾವುದೇ ಸಮುದಾಯಕ್ಕೆ ಸೀಮಿತವಾಗಿರದೆ ಎಲ್ಲಾ ಜಾತಿ, ಧರ್ಮ, ಜನಾಂಗದವರನ್ನು ಗೌರವಿಸಿದರು ಎಂದರು.

ರೋಮನ್ ಕ್ಯಾಥೋಲಿಕ್ ಚರ್ಚ್‌ನ ಫಾದರ್ ಟಿನೋ, ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಸುಧಾಕರ್ ಎಸ್.ಶೆಟ್ಟಿ, ಎಸ್.ಎಸ್.ಶಾಂತಕುಮಾರ್, ವಿವಿಧ ಸಂಘ ಸಂಸ್ಥೆಗಳ ಮಂಜು ಎನ್.ಗೌಡ, ಜಗದೀಶ್, ಎನ್.ಎಂ.ಕಾಂತರಾಜ್, ಆಬೀದ್, ಜೋಸ್, ಹರ್ಷ, ಪಿ.ಆರ್.ಸದಾಶಿವ, ಮನೋಹರ, ಜುಬೇದ, ಪುಸ್ತಕದ ಲೇಖಕ ಪಿ.ಕೆ.ಬಸವರಾಜಪ್ಪ ಮಾತನಾಡಿದರು. ಕಣಿವೆ ವಿನಯ್ ಮತ್ತಿತರರು ಭಾಗವಹಿಸಿದ್ದರು.

ವಿಧಾನ ಸಭಾ ಚುನಾವಣೆಯಲ್ಲಿ ನನ್ನ ಎದುರು ಸೋತಾಗಲೂ ರಾಜೇಂದ್ರ ಅವರು ಅಭಿನಂದನಾ ಭಾಷಣ ಮಾಡಿರುವುದು ಅವರ ವ್ಯಕ್ತಿತ್ವಕ್ಕೆ ಹಿಡಿದ ಸಾಕ್ಷಿ
ಡಿ.ಎನ್.ಜೀವರಾಜ್ ಬಿಜೆಪಿ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.