
ನರಸಿಂಹರಾಜಪುರ ತಾಲ್ಲೂಕು ಕಡಹಿನ ಬೈಲು ಗ್ರಾಮ ಪಂಚಾಯಿತಿ ಹಿರೇಬೀಸು ಗ್ರಾಮದಲ್ಲಿ ಮಥಾಯಿ ಅವರು ಸಾಕಾಣಿಕೆ ಮಾಡಿರುವ ನಾಟಿ ಕೋಳಿ
ಹಿರೇಬೀಸು (ನರಸಿಂಹರಾಜಪುರ): ತಾಲ್ಲೂಕಿನ ಕಡಹಿನಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರೇಬೀಸು ಗ್ರಾಮದ ರೈತರೊಬ್ಬರು ನಾಟಿ ಕೋಳಿ ಸಾಕಾಣಿಕೆ ಮೂಲಕ ಬದುಕು ರೂಪಿಸಿಕೊಂಡು ಆರ್ಥಿಕ ಸ್ವಾವಲಂಬನೆ ಸಾಧಿಸಿದ್ದಾರೆ.
ಗ್ರಾಮದ ರೈತ ಮಥಾಯಿ ಯಾನೆ ಶಿನೋಯಿ ಅವರು ಸ್ವಾವಲಂಬನೆ ಬದುಕು ಕಟ್ಟಿಕೊಂಡಿದ್ದು, ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ(ಮನರೇಗಾ) ಯೋಜನೆಯಡಿ ಕೋಳಿ ಫಾರಂ ಶೆಡ್ ನಿರ್ಮಾಣ ಮಾಡಿ ನಾಟಿ ಕೋಳಿ ಸಾಕಾಣಿಕೆ ಮಾಡುತ್ತಿದ್ದಾರೆ. ಮಥಾಯಿ ಅವರು ತಮ್ಮ ಎರಡು ಎಕರೆ ಭೂಮಿಯಲ್ಲಿ ಕೃಷಿ ಮಾಡಿ ಜೀವನ ಸಾಗಿಸುತ್ತಿದ್ದರು. ಆದರೆ ಕಳೆದ ಒಂದು ವರ್ಷದ ಹಿಂದೆ ಹೃದಯ ಸಂಬಂಧಿ ಕಾಯಿಲೆ ಕಾಣಿಸಿಕೊಂಡಿತು. ಇದರಿಂದ ದೈಹಿಕ ಶ್ರಮದ ಕೃಷಿ ಕೆಲಸ ಮಾಡುವುದು ಕಷ್ಟವಾಗಿ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದರು. ಈ ಸಂದರ್ಭದಲ್ಲಿ ನರೇಗಾ ಯೋಜನೆಯಡಿ ಕೋಳಿ ಶೆಡ್ ನಿರ್ಮಾಣ ಮಾಡಿ ಕೋಳಿ ಸಾಕಾಣಿಕೆ ಮಾಡಬಹುದು ಎಂಬ ಮಾಹಿತಿ ಪಡೆದು ₹60 ಸಾವಿರ ವೆಚ್ಚದಲ್ಲಿ ಕೋಳಿ ಶೆಡ್ ನಿರ್ಮಾಣ ಮಾಡಿ ಒಂದು ವರ್ಷದಿಂದ 200ಕ್ಕೂ ಹೆಚ್ಚು ನಾಟಿ ಕೋಳಿ ಸಾಕಾಣಿಕೆ ಮಾಡುತ್ತಿದ್ದಾರೆ.
ಫಾರಂ ಕೋಳಿಗಿಂತಲೂ ನಾಟಿ ಕೋಳಿಗೆ ಹೆಚ್ಚು ಬೇಡಿಕೆಯಿದೆ. ದೇವರ ಹರಕೆ ಮತ್ತಿತರ ಧಾರ್ಮಿಕ ಕಾರ್ಯಗಳಿಗೆ ನಾಟಿ ಕೋಳಿಗೆ ಬೇಡಿಕೆಯಿದೆ. ನಾಟಿ ಕೋಳಿಗಳ ಸಾಕಾಣಿಕೆ ಕಡಿಮೆ ಆಗಿರುವುದರಿಂದ ಇವರು ಸಾಕಾಣಿಕೆ ಮಾಡುವ ನಾಟಿ ಕೋಳಿಗಳಿಗೆ ಸುತ್ತಮುತ್ತಲ ಗ್ರಾಮಸ್ಥರಿಂದ ಹೆಚ್ಚು ಬೇಡಿಕೆಯಿದೆ. ಕೆಲವರು ಸಾಕಾಣಿಕೆ ಮಾಡಲು ಇವರಿಂದ ಮರಿಗಳನ್ನು ಖರೀದಿಸುತ್ತಾರೆ. 1 ಕೆಜಿ ನಾಟಿ ಕೋಳಿಗೆ ₹400 ದರವಿದ್ದು 1 ಕೋಳಿ ಸರಾಸರಿ 3 ಕೆಜಿ ತೂಕ ಬರುತ್ತದೆ. ದಿನಕ್ಕೆ 10 ರಿಂದ 12 ಮೊಟ್ಟೆಗಳು ಲಭಿಸುತ್ತವೆ. ಒಂದು ಮೊಟ್ಟೆಗೆ ₹10 ದರವಿಗೆ ತಿಂಗಳಿಗೆ ಸರಾಸರಿ 300 ಮೊಟ್ಟೆ ಮಾರಾಟ ಮಾಡುತ್ತಾರೆ. ಮೇ ತಿಂಗಳಲ್ಲಿ ಜಾತ್ರೆ, ಹಬ್ಬಗಳು ಹೆಚ್ಚಿರುವುದರಿಂದ ಆ ಸಂದರ್ಭದಲ್ಲಿ ನಾಟಿ ಕೋಳಿಗೆ ಹೆಚ್ಚು ಬೇಡಿಕೆಯಿದೆ ಎನ್ನುತ್ತಾರೆ ಮಥಾಯಿ.
ಹತ್ತು ವರ್ಷದಿಂದಲೂ ಕೃಷಿಯೊಂದಿಗೆ ನಾಟಿ ಕೋಳಿ ಕಡಿಮೆ ಪ್ರಮಾಣದಲ್ಲಿ ಸಾಕಾಣಿಕೆ ಮಾಡುತ್ತಿದೆ. ಹೃದಯ ಸಂಬಂಧಿ ಕಾಯಿಲೆ ಬಂದಿದ್ದರಿಂದ ಕೃಷಿಯನ್ನು ಮುಂದುವರೆಸಲು ಸಾಧ್ಯವಾಗಲಿಲ್ಲ. ಈ ಸಂದರ್ಭದಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ನೆರವಿಗೆ ಬಂತು. ಪ್ರಸ್ತುತ 200ಕ್ಕೂ ಹೆಚ್ಚು ನಾಟಿ ಕೋಳಿಗಳನ್ನು ಸಾಕಾಣಿಕೆ ಮಾಡುತ್ತಿದ್ದೇನೆ. ಬದುಕು ರೂಪಿಸಿಕೊಳ್ಳಲು ಸಹಾಯಕವಾಗಿದೆ ಎಂದು ಮಥಾಯಿ ಯಾನೆ ಶಿನೋಯಿ ‘ಪ್ರಜಾವಾಣಿ’ಗೆ ತಿಳಿಸಿದರು.
ಉದ್ಯೋಗ ಖಾತರಿ ಯೋಜನೆ ಬಡವರಿಗೆ, ಮಧ್ಯಮವರ್ಗದವರಿಗೆ ಬಹಳ ಅನುಕೂಲವಾಗಿದೆ. ಈ ಯೋಜನೆಯಡಿ ವೈಯಕ್ತಿಕ ಕಾಮಗಾರಿಗಳಿಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ಈ ಯೋಜನೆಯನ್ನು ಎಲ್ಲಾ ರೈತರು ಸದುಪಯೋಗ ಮಾಡಿಕೊಳ್ಳಬೇಕು ಎಂದು ತಾಲ್ಲೂಕು ಪಂಚಾಯಿತಿ ಇಒ ಎಚ್.ಡಿ.ನವೀನ್ ಕುಮಾರ್ ತಿಳಿಸಿದರು.
ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಿಂದ ಕುಂಟುಂಬವು ಆರ್ಥಿಕವಾಗಿ ಸದೃಢವಾಗುವುದರ ಜತೆಗೆ ಸ್ವ ಉದ್ಯೋಗ ಕಂಡು ಕೊಳ್ಳಬಹುದಾಗಿದೆ ಎನ್ನುತ್ತಾರೆ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಸಹಾಯಕ ನಿರ್ದೇಶಕ ಎನ್.ಎಲ್.ಮನೀಷ್.
ನಾಟಿ ಕೋಳಿ ಸಾಕಾಣಿಕೆ ಹಾಗೂ ಇತರೆ ಮಾಹಿತಿಗೆ ಬೇಕಾದವರು ಮಥಾಯಿ ಯಾನೆ ಶಿನೋಯಿ ಅವರ ಮೊಬೈಲ್ ಸಂಖ್ಯೆ 9731735595 ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.