ADVERTISEMENT

ಚಿಕ್ಕಮಗಳೂರು: ಚುನಾವಣೆಯಲ್ಲಿ ಪಕ್ಷಗಳಿಗೆ ಬಡತನವೇ ಬಂಡವಾಳ

ಮತದಾರರು ಆಮಿಷಕ್ಕೆ ಒಳಗಾಗದೆ, ಪ್ರಬುದ್ಧತೆಯಿಂದ ಹಕ್ಕು ಚಲಾಯಿಸಿ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2024, 12:53 IST
Last Updated 6 ಏಪ್ರಿಲ್ 2024, 12:53 IST
ಬಹುಜನ ಸಮಾಜ ಪಕ್ಷದ ಅಭ್ಯರ್ಥಿ ಕೆ.ಟಿ.ರಾಧಾಕೃಷ್ಣ ಅವರು ಹಿರೇಮಗಳೂರಿನಲ್ಲಿ ಮನೆ ಮನೆಗೆ ಹೋಗಿ ಮತದಾರರಲ್ಲಿ ಮತ ಯಾಚಿಸಿದರು
ಬಹುಜನ ಸಮಾಜ ಪಕ್ಷದ ಅಭ್ಯರ್ಥಿ ಕೆ.ಟಿ.ರಾಧಾಕೃಷ್ಣ ಅವರು ಹಿರೇಮಗಳೂರಿನಲ್ಲಿ ಮನೆ ಮನೆಗೆ ಹೋಗಿ ಮತದಾರರಲ್ಲಿ ಮತ ಯಾಚಿಸಿದರು   

ಚಿಕ್ಕಮಗಳೂರು: ಚುನಾವಣೆಯಲ್ಲಿ ಕೆಲವು ರಾಜಕೀಯ ಪಕ್ಷಗಳು ಬಡವರ ಬಡತನವನ್ನೇ ಬಂಡವಾಳವಾಗಿಸಿಕೊಂಡಿವೆ. ಮತದಾರರು ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೆ ವಿವೇಚನೆಯಿಂದ ಮತ ಚಲಾಯಿಸುವಂತೆ ಉಡುಪಿ–ಚಿಕ್ಕಮಗಳೂರು ಲೋಕಸಭೆ ಕ್ಷೇತ್ರ ಬಹುಜನ ಸಮಾಜ ಪಕ್ಷದ(ಬಿಎಸ್‍ಪಿ) ಅಭ್ಯರ್ಥಿ ಕೆ.ಟಿ.ರಾಧಾಕೃಷ್ಣ ಹೇಳಿದರು.

ಜಿಲ್ಲಾ ಬಿಎಸ್‍ಪಿ ವತಿಯಿಂದ ತಾಲ್ಲೂಕಿನ ಹಿರೇಮಗಳೂರು ಗ್ರಾಮದಲ್ಲಿ ಶುಕ್ರವಾರ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮತಯಾಚಿಸಿ ಅವರು ಮಾತನಾಡಿದರು.

ಸಂವಿಧಾನದಡಿ ಎಲ್ಲ ವರ್ಗದವರಿಗೆ ಜೀವನ ಭದ್ರತೆ ಒದಗಿಸಬೇಕಾದುದು ಅಧಿಕಾರ ನಡೆಸುವ ಪಕ್ಷಗಳ ಜವಾಬ್ದಾರಿ. ಅವುಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸದೆ ಭ್ರಷ್ಟಾಚಾರದಲ್ಲಿ ತೊಡಗಿ ಚುನಾವಣೆ ಸಮೀಪದಲ್ಲಿ ಮತದಾರರಿಗೆ ಹಣ ಮತ್ತಿತರ ಆಮಿಷವೊಡ್ಡಿ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಲುಷಿತಗೊಳಿಸಲಾಗುತ್ತಿದೆ ಎಂದು ದೂರಿದರು.

ADVERTISEMENT

ಉತ್ತರ ಪ್ರದೇಶದ ಬಹುಜನ ಸಮಾಜ ಪಾರ್ಟಿ ಬಹುಮತದಿಂದ ಒಂದು ಬಾರಿ ಗೆಲುವು ಕಂಡಿತ್ತು. ಪಕ್ಷದ ರಾಷ್ಟ್ರೀಯ ಘಟಕದ ಅಧ್ಯಕ್ಷೆ ಮಾಯಾವತಿ ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿ ಬಡವರು, ದೀನದಲಿತರ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ. ಇಂದಿಗೂ ದೇಶವನ್ನಾಳಿದ ರಾಷ್ಟ್ರೀಯ ಪಕ್ಷಗಳು ಮಾಯಾವತಿ ಅವರ ಕಾರ್ಯವೈಖರಿ ಅರಿಯಬೇಕಿದೆ. ದೇಶದಲ್ಲಿ ಬಿಎಸ್‌ಪಿ ಹೊರತುಪಡಿಸಿ ಉಳಿದ ಪಕ್ಷಗಳು ಸಾರ್ವಜನಿಕರಲ್ಲಿ ನೈತಿಕವಾಗಿ ಮತಯಾಚಿಸುವ ಅರ್ಹತೆ ಕಳೆದುಕೊಂಡಿದೆ ಎಂದು ಆಪಾದಿಸಿದರು.

ದೇಶದಲ್ಲಿ ದಲಿತರು, ಶೋಷಿತರು, ಅಲ್ಪಸಂಖ್ಯಾತರಿಗೆ ಅಭದ್ರತೆ ಕಾಡುತ್ತಿದೆ. ಬಿಎಸ್‌ಪಿ ಅಧಿಕಾರಕ್ಕೆ ಬಂದಲ್ಲಿ ಎಲ್ಲರಿಗೂ ಸೂಕ್ತ ರಕ್ಷಣೆ ಒದಗಿಸಲಿದೆ. ಮಾಯಾವತಿ ದೇಶದ ಪ್ರಧಾನಿಯಾದರೆ ಇವು ಸಾಧ್ಯವಾಗಲಿವೆ ಎಂದರು.

ರಾಜ್ಯ ಕಾರ್ಯದರ್ಶಿ ಕೆ.ಬಿ.ಸುಧಾ ಮಾತನಾಡಿ, ‘ಲೋಕಸಭೆ ಚುನಾವಣೆಯಲ್ಲಿ ಈಗಾಗಲೇ ಕೆಲವು ಪಕ್ಷಗಳು ಮತದಾರರಿಗೆ ಹಣ, ಮದ್ಯದ ಆಮಿಷ ನೀಡುತ್ತಿದ್ದಾರೆ. ಮತದಾರರು ಪ್ರಬುದ್ಧರಾಗಿ ಹಕ್ಕು ಚಲಾಯಿಸಬೇಕು. ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನದ ಆಶಯಗಳನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸಲು ಬಹುಜನ ಪಕ್ಷವನ್ನು ಬೆಂಬಲಿಸುವಂತೆ ಕೋರಿದರು. ಪ್ರಚಾರದಲ್ಲಿ ಬಿಎಸ್‍ಪಿ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಕುಮಾರ್, ಪ್ರಧಾನ ಕಾರ್ಯದರ್ಶಿ ವಸಂತ್, ಖಜಾಂಚಿ ರತ್ನಾ, ಮುಖಂಡರಾದ ಪರಮೇಶ್, ಜಗದೀಶ್, ವಿಜಯ್‍ಕುಮಾರ್, ರವಿಕುಮಾರ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.