ADVERTISEMENT

ಮಳೆ ಪರಿಸ್ಥಿತಿ ಎದುರಿಸಲು ತಯಾರಿ: ಜಿಲ್ಲಾಧಿಕಾರಿ

ಎಲ್ಲಾ ತಾಲ್ಲೂಕಿನಲ್ಲೂ ನಿಯಂತ್ರಣ ಕೊಠಡಿ

​ಪ್ರಜಾವಾಣಿ ವಾರ್ತೆ
Published 9 ಜೂನ್ 2023, 15:39 IST
Last Updated 9 ಜೂನ್ 2023, 15:39 IST

ಚಿಕ್ಕಮಗಳೂರು: ಮಳೆಗಾಲದಲ್ಲಿ ಪ್ರವಾಹ ಪರಿಸ್ಥಿತಿ ಎದುರಿಸಲು ತಯಾರಿ ಮಾಡಿಕೊಳ್ಳಲಾಗಿದ್ದು, ಪ್ರತಿ ತಾಲ್ಲೂಕು ಕಚೇರಿಯಲ್ಲಿ ನಿಯಂತ್ರಣ ಕೊಠಡಿ ತೆರೆಯಲಾಗಿದೆ ಎಂದು ಜಿಲ್ಲಾಧಿಕರಿ ಕೆ.ಎನ್.ರಮೇಶ್ ತಿಳಿಸಿದರು.

‘ಭೂಕುಸಿತವಾಗುವ ಸಂಭವ ಇರುವ 58 ಜಾಗ, 40 ಕಡೆ ಪ್ರವಾಹ ಎದುರಾಗುವ ಸ್ಥಳ, ನೀರು ತುಂಬಿಕೊಳ್ಳಬಹುದಾದ ಮೂರು ಪ್ರದೇಶಗಳನ್ನು ಗುರುತು ಮಾಡಿದ್ದೇವೆ’ ಎಂದು ಸುದ್ದಿಗಾರರಿಗೆ ಬುಧವಾರ ಮಾಹಿತಿ ನೀಡಿದರು.

ಆಪ್ತಮಿತ್ರ ಎಂಬ ವಿಪತ್ತು ನಿರ್ವಹಣಾ ತಂಡಗಳಿಗೆ ತರಬೇತಿ ನೀಡಲಾಗಿದೆ. ಎಲ್ಲಾ ತಾಲ್ಲೂಕಿನಲ್ಲೂ ಈ ತಂಡಗಳಿದ್ದು, ತುರ್ತು ಸಂದರ್ಭದಲ್ಲಿ ಜನರ ನೆರವಿಗೆ ಈ ತಂಡ ಬರಲಿದೆ ಎಂದರು.

ADVERTISEMENT

‘ಮಳೆ ಹಾನಿ ಬಗ್ಗೆ 24 ಗಂಟೆಗಳಲ್ಲಿ ವರದಿ ನೀಡಲು ತೋಟಗಾರಿಕೆ, ಕೃಷಿ, ಕಾಫಿ ಮಂಡಳಿ ಸೇರಿ ವಿವಿಧ ಇಲಾಖೆಯ ತಂಡ ರಚನೆ ಮಾಡಲಾಗಿದೆ. ಹಾವು ಕಡಿದವರಿಗೆ ನೀಡುವ ಚುಚ್ಚುಮದ್ದು ಸಂಗ್ರಹಿಸಿಟ್ಟುಕೊಳ್ಳಲು ಆರೋಗ್ಯ ಇಲಾಖೆಗೆ ತಿಳಿಸಲಾಗಿದೆ. ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಈ ಔಷಧ ದಾಸ್ತಾನಿರಬೇಕು ಎಂದು ಸೂಚನೆ ನೀಡಿದ್ದೇನೆ’ ಎಂದು ವಿವರಿಸಿದರು.

40 ಸಾವಿರ ನಿವೇಶನ: ನಿವೇಶನ ರಹಿತರಿಗೆ ನಿವೇಶನ ಒದಗಿಸಲು ಸಾವಿರಕ್ಕೂ ಹೆಚ್ಚು ಎಕರೆ ಗುರುತು ಮಾಡಲಾಗಿದ್ದು, 40 ಸಾವಿರ ಜನರಿಗೆ ನಿವೇಶನ ನೀಡಲು ಸಾಧ್ಯವಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.