ಕೊಪ್ಪ: ‘ತಾಲ್ಲೂಕಿನ ಹಿರೇಕೊಡಿಗೆ ಗ್ರಾಮ ಪಂಚಾಯಿತಿಯಲ್ಲಿ ಈ ಹಿಂದೆ ನಡೆದ ಸಾಮಾನ್ಯ ಸಭೆಯ ನಡಾವಳಿಯನ್ನು ತಿದ್ದುಪಡಿ ಮಾಡಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ಪಂಚಾಯಿತಿ ಮಾಜಿ ಸದಸ್ಯ ಎಚ್.ಕೆ.ವಿಶ್ವ ಅವರು ತಾಲ್ಲೂಕು ಪಂಚಾಯಿತಿ ಮೂಲಕ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಶನಿವಾರ ಮನವಿ ಸಲ್ಲಿಸಿದರು.
‘ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗೆ ಸಂಬಂಧಿಸಿ 2015ರ ಅ.14ರಂದು ನಡೆದ ಪಂಚಾಯಿತಿ ಸಾಮಾನ್ಯ ಸಭೆಯ ನಡಾವಳಿಯನ್ನು ತಿದ್ದುಪಡಿ ಮಾಡಿ ಎಂಬಿಕೆ ಆಗಿರುವ ನಿರ್ಮಲ ಎಂಬುವರಿಗೆ ಕೆಲಸ ನೀಡಲು ಯತ್ನಿಸಿದ್ದಾರೆ’ ಎಂದು ಆರೋಪಿಸಿದ್ದಾರೆ.
‘2015ರಲ್ಲಿ ವಿಶಾಲಾಕ್ಷಿ ಅವರು ಪಂಚಾಯಿತಿ ಅಧ್ಯಕ್ಷರಾಗಿದ್ದರು. ಈ ವೇಳೆ ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ಆಗಿ ರಮೇಶ್ ಕಾರ್ಯನಿರ್ವಹಿಸುತ್ತಿದ್ದರು. ಆಗ ಈ ಹುದ್ದೆ ಖಾಲಿ ಇರದ ಕಾರಣ ಪಂಚಾಯಿತಿಯಲ್ಲಿ ಸಾಮಾನ್ಯ ಸಭೆಯಲ್ಲಿ ಈ ವಿಷಯಕ್ಕೆ ಸಂಬಂಧಿಸಿ ಚರ್ಚೆ ಪ್ರಸ್ತಾಪಗೊಂಡಿರಲಿಲ್ಲ. ಆಗ ನಿರ್ಮಲ ಅವರು ಪಂಚಾಯಿತಿಯಲ್ಲಿ ನೀರು ಮತ್ತು ನೈರ್ಮಲ್ಯ ಸಮಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಆಗ ಸಾಮಾನ್ಯ ಸಭೆಯ ನಡಾವಳಿಗಳನ್ನು ಅವರೇ ಬರೆಯುತ್ತಿದ್ದರು. ಪಂಚಾಯಿತಿ ಖಾತೆಯಿಂದ ನಿರ್ಮಲ ಅವರಿಗೆ ಯಾವುದೇ ಸಂಬಳ, ಗೌರವ ಧನ ನೀಡಿರುವುದಿಲ್ಲ’ ಎಂದು ತಿಳಿಸಿದ್ದಾರೆ.
‘2022ರಲ್ಲಿ ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ರಮೇಶ್ ಅವರು ಹರಿಹರಪುರ ಗ್ರಾಮ ಪಂಚಾಯಿತಿಗೆ ಕಾರ್ಯದರ್ಶಿಯಾಗಿ ಬಡ್ತಿ ಹೊಂದಿದ್ದಾರೆ. ಆಗ ಹಿರೇಕೊಡಿಗೆ ಗ್ರಾಮ ಪಂಚಾಯಿತಿಯಲ್ಲಿ ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ಹುದ್ದೆ ಖಾಲಿ ಇತ್ತು. ಇತ್ತೀಚೆಗೆ ಖಾಲಿ ಹುದ್ದೆಗೆ ಕಾನೂನು ಬಾಹಿರವಾಗಿ ನಿರ್ಮಲ ಅವರನ್ನು ಶಿಫಾರಸು ಮಾಡಲು 2015ರ ಸಭಾ ನಡಾವಳಿಯನ್ನು ತಿದ್ದಿ ಲೋಪ ಮಾಡಲಾಗಿದೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಪಿಡಿಒ ಅವರನ್ನು ಅಮಾನತು ಮಾಡಿ, ಎಂಬಿಕೆಯಾಗಿ ಕಾರ್ಯನಿರ್ವಹಿಸುತ್ತಿರುವ ನಿರ್ಮಲ ಅವರನ್ನು ವಜಾ ಮಾಡಿ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕು’ ಎಂದು ಹೇಳಿದ್ದಾರೆ.
ಮನವಿಯನ್ನು ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ (ಗ್ರಾಮೀಣ ಉದ್ಯೋಗ) ಚೇತನ್ ಸ್ವೀಕರಿಸಿದರು.
ಆರೋಪದ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಪಿಡಿಒ ಪದ್ಮಲತಾ, ಅಧ್ಯಕ್ಷೆ ಜಯಲಕ್ಷ್ಮಿ, ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ತ್ರಿಪುರೇಂದ್ರ ಅವರು, ‘ನಡಾವಳಿ ತಿದ್ದುಪಡಿಯಾಗಿಲ್ಲ. ಯಾವುದೇ ಲೋಪವೂ ಆಗಿಲ್ಲ. ಈ ಸಂಬಂಧ ತನಿಖೆ ಎದುರಿಸಲು ಪಂಚಾಯಿತಿ ಸಿದ್ಧವಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.