
ನರಸಿಂಹರಾಜಪುರ: ಪಲ್ಸ್ ಪೋಲಿಯೊ ಕಾರ್ಯಕ್ರಮದಲ್ಲಿ ಸರ್ಕಾರದ ಜತೆ ಸಂಘ, ಸಂಸ್ಥೆಗಳು ಕೈ ಜೋಡಿಸಿದ್ದರಿಂದ ಉತ್ತಮ ಸಾಧನೆ ಮಾಡಲು ಸಾಧ್ಯವಾಯಿತು ಎಂದು ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ನರಸಿಂಹಮೂರ್ತಿ ಹೇಳಿದರು.
ಪಟ್ಟಣದ ಬಸ್ ನಿಲ್ದಾಣದಲ್ಲಿ ಜ್ವಾಲಾಮಾಲಿನಿ ಜೆಸಿಐ ಸಂಸ್ಥೆಯು ದತ್ತು ಪಡೆದು ನಿರ್ವಹಣೆ ಮಾಡಿದ್ದ ಪಲ್ಸ್ ಪೋಲಿಯೋ ಕೇಂದ್ರದಲ್ಲಿ ಮಂಗಳವಾರ ನಡೆದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಬಸ್ ನಿಲ್ದಾಣದ ಪಲ್ಸ್ ಪೋಲಿಯೋ ಕೇಂದ್ರದಲ್ಲಿ 3 ದಿನದಲ್ಲಿ 199 ಮಕ್ಕಳಿಗೆ ಲಸಿಕೆ ಹಾಕಲಾಗಿದೆ. ತಾಲ್ಲೂಕಿನಲ್ಲಿ 4,802 ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕುವ ಗುರಿ ಹೊಂದಲಾಗಿತ್ತು. ಆದರೆ, 4,879 ಮಕ್ಕಳಿಗೆ ಲಸಿಕೆ ಹಾಕಲಾಗಿದ್ದು ಗುರಿಗಿಂತ ಜಾಸ್ತಿ ಲಸಿಕೆ ಹಾಕಿ ಶೇ 101 ರಷ್ಟು ಸಾಧನೆ ಮಾಡಿದ್ದೇವೆ. ಈ ಸಾಧನೆ ಮಾಡಲು ಆರೋಗ್ಯ ಇಲಾಖೆಯ ಎಲ್ಲಾ ಸಿಬ್ಬಂದಿ, ವಿವಿಧ ಸಂಘ ಸಂಸ್ಥೆಗಳು ಕಾರಣವಾಗಿದೆ ಎಂದರು.
ಜ್ವಾಲಾಮಾಲಿನಿ ಜೆಸಿಐ ಸಂಸ್ಥೆಯ ಅಧ್ಯಕ್ಷ ಆದರ್ಶ ಬಿ.ಗೌಡ ಮಾತನಾಡಿ, 2009ರಲ್ಲಿ ಪ್ರಥಮ ಬಾರಿಗೆ ಜೆಸಿಐ ಸಂಸ್ಥೆಯಿಂದ ಬಸ್ ನಿಲ್ದಾಣದಲ್ಲಿ ಪಲ್ಸ್ ಪೋಲಿಯೋ ಲಸಿಕಾ ಕೇಂದ್ರವನ್ನು ದತ್ತು ಪಡೆಯಲಾಗಿತ್ತು. ಆ ವರ್ಷದಿಂದ ಪ್ರತಿ ವರ್ಷ ಬಸ್ ನಿಲ್ದಾಣದಲ್ಲಿ ಜೆಸಿಐ ಸಂಸ್ಥೆಯಿಂದ ಲಸಿಕಾ ಕೇಂದ್ರವನ್ನು ನಿರ್ವಹಿಸುತ್ತಿದ್ದೇವೆ ಎಂದರು.
ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಸಂಸ್ಥೆ ಅಧ್ಯಕ್ಷ ಎಸ್.ಎಸ್.ಜಗದೀಶ್ ಮಾತನಾಡಿ, ಜೆಸಿಐ ಸಂಸ್ಥೆಯು ಸಮಾಜಮುಖಿ ಕೆಲಸ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜೆಸಿಐ ಪೂರ್ವಾಧ್ಯಕ್ಷ ಅಭಿನವ ಗಿರಿರಾಜ್ ಮಾತನಾಡಿದರು. ಸರ್ಕಾರಿ ಆಸ್ಪತ್ರೆ ಆಡಳಿತಾಧಿಕಾರಿ ಡಾ.ನರಸಿಂಹಮೂರ್ತಿ ಹಾಗೂ ಜೆಸಿಐ ಪೂರ್ವಾಧ್ಯಕ್ಷ ಪಿ.ಆರ್.ಸುಕುಮಾರ್ ಅವರನ್ನು ಗೌರವಿಸಲಾಯಿತು. ಜೆಸಿಐ ಕಾರ್ಯದರ್ಶಿ ರಜತ್ ವಗಡೆ ಹಾಗೂ ಪದಾಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.