ADVERTISEMENT

ಕೃಷಿ ಪ್ರದೇಶ ಬಿಟ್ಟು ಸಮೀಕ್ಷೆಗೆ ಡಿ.ಎನ್‌.ಜೀವರಾಜ್‌ ಒತ್ತಾಯ

ಪರಿಭಾವಿತ ಅರಣ್ಯ; ಅರಣ್ಯ–ಕಂದಾಯ ಇಲಾಖೆಯಿಂದ ಜಂಟಿ ಸಮೀಕ್ಷೆ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2019, 13:15 IST
Last Updated 27 ಏಪ್ರಿಲ್ 2019, 13:15 IST
ಜೀವರಾಜ್‌
ಜೀವರಾಜ್‌   

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಪರಿಭಾವಿತ (ಡೀಮ್ಡ್‌) ಅರಣ್ಯ ಸಮೀಕ್ಷೆ ಪ್ರಕ್ರಿಯೆ ಕೈಗೆತ್ತಿಕೊಳ್ಳಲಾಗಿದ್ದು, ಕೃಷಿ ಪ್ರದೇಶವನ್ನು ಬಿಟ್ಟು ಸಮೀಕ್ಷೆ ನಡೆಸಬೇಕು ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಎನ್‌.ಜೀವರಾಜ್‌ ಇಲ್ಲಿ ಶನಿವಾರ ಒತ್ತಾಯಿಸಿದರು.

ಸಮೀಕ್ಷೆ ಮಾಡುವುದಕ್ಕೆ ವಿರೋಧ ಇಲ್ಲ. ಅರಣ್ಯ ಜಾಗವನ್ನು ಪಕ್ಕಾ ಮಾಡಿಕೊಳ್ಳುವುದಕ್ಕೆ ತಕರಾರು ಇಲ್ಲ. ಆದರೆ, ಪರಿಭಾವಿತ ಅರಣ್ಯದ ಹೆಸರಿನಲ್ಲಿ ರೈತರಿಗೆ ತೊಂದರೆ ಮಾಡಬಾರದು ಎಂದು ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.

‘50’, ‘53’ ಹಾಗೂ ‘57’ ಅರ್ಜಿಗಳು ಇತ್ಯರ್ಥ ಆಗಿಲ್ಲ, ಅರ್ಜಿ ವಿಲೇವಾರಿ ಮುಗಿಯದೆ ಸಮೀಕ್ಷೆ ಮಾಡುವುದಕ್ಕೂ ಅವಕಾಶ ಇಲ್ಲ. ಕಂದಾಯ, ಗೋಮಾಳ, ಕಾಫಿ ಖರಾಬು ಜಾಗವನ್ನು ಸಮೀಕ್ಷೆಗೆ ಪರಿಗಣಿಸಬಾರದು. ಸರ್ಕಾರಿ ಜಾಗವನ್ನು ಸಮೀಕ್ಷೆ ಮಾಡಿಕೊಳ್ಳಲಿ. ಒಂದು ಎಕರೆ ಪ್ರದೇಶದಲ್ಲಿ 25ಮರಗಳಿದ್ದರೆ ಅದನ್ನು ಪರಿಭಾವಿತ ಅರಣ್ಯ ಎಂದು ಪರಿಗಣಿಸುವ ಮಾನದಂಡವೇ ಸರಿಯಲ್ಲ. ಪರಿಭಾವಿತ ಅರಣ್ಯ ಹೆಸರಿನಲ್ಲಿ ರೈತರನ್ನು ಒಕ್ಕಲೆಬ್ಬಿಸಲು ಕೈಹಾಕಿದರೆ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.

ADVERTISEMENT

‘ಒತ್ತುವರಿ ಮಾಡಿಕೊಂಡು ಕೃಷಿ ಮಾಡುತ್ತಿರುವ ಜಾಗವನ್ನು ಭೋಗ್ಯಕ್ಕೆ(ಲೀಸ್‌) ಕೊಡುವ ನಿಟ್ಟಿನಲ್ಲಿ ಸರ್ಕಾರ ಗಮನಹರಿಸಬೇಕು. ಅರಣ್ಯ ಜಾಗ ಗುರುತಿಸಿ ಒತ್ತುವರಿಯಾಗದಂತೆ ಕ್ರಮ ವಹಿಸಬೇಕು’ ಎಂದರು.

‘ಕೊಪ್ಪ ತಾಲ್ಲೂಕಿನ ನುಗ್ಗಿ ಗ್ರಾಮದ ಸರ್ವೆ ನಂ 59ರಲ್ಲಿನ ಕಾಫಿ ತೋಟದಲ್ಲಿ ಅರಣ್ಯ ಇಲಾಖೆಯವರು ಟ್ರಂಚ್‌ ಮಾಡಿದ್ದಾರೆ. ಪ್ಯಾರಾ ಒಲಿಂಪಿಕ್‌ ಕ್ರೀಡಾಪಟು ಸಂದೇಶ ಅವರ ತಂದೆಯ ಜಮೀನು ಇದು. ಜಮೀನು ನಾಲ್ಕು ಮುಕ್ಕಾಲು ಎಕರೆ ಇದೆ. ಅದರಲ್ಲಿ ಒತ್ತುವರಿ ಮಾಡಿರುವ ಜಾಗ ಮುಕ್ಕಾಲು ಎಕರೆ ಇದೆ. ಹಕ್ಕುಪತ್ರಕ್ಕೆ 1991ನಲ್ಲಿ ‘50’, 1998ನಲ್ಲಿ ‘53’ ಹಾಗೂ 2019ರಲ್ಲಿ ‘57’ ಅರ್ಜಿ ಸಲ್ಲಿಸಿದ್ದಾರೆ. ಉದ್ದೇಶಪೂರ್ವಕವಾಗಿ ಅರಣ್ಯ ಇಲಾಖೆಯವರು ಈ ಜಮೀನಿನಲ್ಲಿ ಟ್ರಂಚ್‌ ನಿರ್ಮಿಸಿದ್ದಾರೆ. ರಾಜಕೀಯ ದ್ವೇಷದಿಂದ ಈ ಕೆಲಸ ಮಾಡಿಸಲಾಗಿದೆ.’ ಎಂದು ಆರೋಪಿಸಿದರು.

ಟ್ರಂಚ್‌ ಹೊಡೆದು ಗಿಡಗಳನ್ನ ಹಾಳು ಮಾಡಲಾಗಿದೆ. ಜಮೀನನಲ್ಲಿನ ಟ್ರಂಚ್‌ ಮುಚ್ಚಿ, ಆಗಿರುವ ನಷ್ಟವನ್ನು ಭರಿಸಿಕೊಡಬೇಕು’ ಎಂದು ಒತ್ತಾಯಿಸಿದರು.

‘ಬಾಳೆಹೊನ್ನೂರು(ಬಿ.ಕಣಬೂರು) ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಸ್ಥಾಪಿಸಿದ್ದ ಮತಗಟ್ಟೆಯ ಮತದಾನದ ದೃಶ್ಯಗಳನ್ನು ಅಲ್ಲಿದ್ದ ಸಿ.ಸಿ ಟಿವಿ ಬಳಸಿ ಅಧ್ಯಕ್ಷರು ವೀಕ್ಷಿಸಿದ್ದಾರೆಂದು ಆರೋಪಿಸಿ ಬಿಜೆಪಿ ಮುಖಂಡ ಜಗದೀಶ್ಚಂದ್ರ ಅವರು ಚುನಾವನಾಧಿಕಾರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿಯವರು ಕೂಲಂಕಷವಾಗಿ ಪರಿಶೀಲಿಸಿ ಸತ್ಯಾಂಶ ತಿಳಿಸಬೇಕು’ ಎಂದು ಕೋರಿದರು.

‘ಜಿಲ್ಲೆಯಲ್ಲಿ ಚುನಾವಣೆ ಶಾಂತಿ ಮತ್ತು ಸುವ್ಯವಸ್ಥಿತವಾಗಿ ನಡೆದಿದೆ. ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶೋಭಾಕರಂದ್ಲಾಜೆ ಗೆಲ್ಲುವ ವಿಶ್ವಾಸ ಇದೆ’ ಎಂದು ಹೇಳಿದರು.

ಬಿಜೆಪಿ ಮುಖಂಡರಾದ ರಾಜಪ್ಪ, ಅನಿಲ್‌ಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.