ನರಸಿಂಹರಾಜಪುರ: ತಾಲ್ಲೂಕಿನ ಮೆಣಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾವೂರು ಗ್ರಾಮದ ಮೀನುಕ್ಯಾಂಪ್ ನಿವಾಸಿಗಳಿಗೆ ಶವಸಂಸ್ಕಾರಕ್ಕೂ ಜಾಗವಿಲ್ಲದೆ ಭದ್ರಾಹಿನ್ನೀರಿನಲ್ಲಿ ತೆಪ್ಪದ ಮೂಲಕ ಶವ ಸಾಗಿಸಿ ಸಂಸ್ಕಾರ ಮಾಡುವ ಸ್ಥಿತಿಯಿದೆ.
ಮೆಣಸೂರು ಗ್ರಾಮಪಂಚಾಯಿತಿಯ ರಾವೂರು ಗ್ರಾಮದಲ್ಲಿ ಮೀನುಗಾರಿಕೆ ಕಸುಬನ್ನು ಅವಲಂಬಿಸಿರುವ ಬಹುತೇಕ ಪರಿಶಿಷ್ಟಜಾತಿಗೆ ಸೇರಿದ ಶೀಳ್ಳೆಕ್ಯಾತ ಜನಾಂಗದವರ 150ಕ್ಕೂ ಹೆಚ್ಚು ಮನೆಗಳು ಇದ್ದು, 600ಕ್ಕೂ ಹೆಚ್ಚು ಜನರು ವಾಸವಾಗಿದ್ದಾರೆ. ಈ ಗ್ರಾಮವು ಭದ್ರಾಹಿನ್ನೀರಿನ ತಟದಲ್ಲಿ ಇದ್ದು, ಮಳೆಗಾಲದಲ್ಲಿ ಭದ್ರಾ ಅಣೆಕಟ್ಟೆ ಭರ್ತಿಯಾದಾಗ ಭದ್ರಾ ಹಿನ್ನೀರು ಆವರಿಸಿಕೊಳ್ಳುತ್ತದೆ. ಈ ಜನಾಂಗದವರು ಯಾರಾದೂ ಮೃತಪಟ್ಟರೆ ಶವಸಂಸ್ಕಾರಕ್ಕೆ ಸ್ಮಶಾನವಿಲ್ಲದಿರುವುದರಿಂದ ಭದ್ರಾ ಹಿನ್ನೀರಿನ ಮಧ್ಯೆ ಇರುವ ನಡುಗಡ್ಡೆ ಪ್ರದೇಶವೇ ಅವರಿಗೆ ಆಸರೆಯಾಗಿದೆ. ಅಲ್ಲಿಗೆ ಶವವನ್ನು ತೆಪ್ಪದಲ್ಲಿ ಸುಮಾರು ಒಂದು ಕಿ.ಮೀ ತೆಗೆದುಕೊಂಡು ಹೋಗ ಬೇಕಾಗಿದೆ. ಬೇಸಿಗೆ ಸಂದರ್ಭದಲ್ಲೂ ಹಿನ್ನೀರು ಇರುವುದರಿಂದ ಆಗಲೂ ಕೆಲವು ಬಾರಿ ತೆಪ್ಪದಲ್ಲಿ ತೆಗೆದುಕೊಂಡು ಹೋಗಿ ಶವಸಂಸ್ಕಾರ ಮಾಡುವ ಸ್ಥಿತಿಯಿದೆ.
ಭದ್ರಾಹಿನ್ನೀರು ಆವರಿಸಿರುವ ನಡುಗಡ್ಡೆ ಪ್ರದೇಶದಲ್ಲಿ ಶವಸಂಸ್ಕಾರಕ್ಕೆ ಗುಂಡಿಯನ್ನು ತೆಗೆದಾಗ ಅದರಲ್ಲೂ ನೀರು ಬಂದು ತುಂಬಿಕೊಳ್ಳುತ್ತದೆ. ಶವಸಂಸ್ಕಾರ ಮಾಡುವುದು ಕಷ್ಟವಾಗುತ್ತದೆ. ಅದರಲ್ಲೇ ಶವಸಂಸ್ಕಾರ ಮಾಡಬೇಕು. ಸುತ್ತಲೂ ನೀರು ಆವರಿಸಿರುವುದರಿಂದ ಕೆಲವು ಬಾರಿ ಹಿಂದೆ ಶವ ಸಂಸ್ಕಾರ ಮಾಡಿದ ಸಮಾಧಿ ಗೊತ್ತಾಗದೆ ಮತ್ತೆ ಅದೇ ಜಾಗದಲ್ಲಿ ಶವಸಂಸ್ಕಾರ ಮಾಡುವ ಸ್ಥಿತಿಯಿದೆ ಎಂದು ಗ್ರಾಮಸ್ಥರಾದ ಮೇಘರಾಜ್, ಆನಂದ, ರತ್ನಾಕರ್ ಸಮಸ್ಯೆಯನ್ನು ವಿವರಿಸಿದರು.
ಗ್ರಾಮದವರಿಗೆ ಸ್ಮಶಾನಕ್ಕೆ ಜಾಗ ನೀಡುವಂತೆ ಗ್ರಾಮಸ್ಥರು ಹಲವು ಬಾರಿ ಶಾಸಕರಿಗೆ, ತಹಶೀಲ್ದಾರ್ ಹಾಗೂ ಸಂಬಂಧಪಟ್ಟ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದ್ದಾರೆ. ಬೇರೆ, ಬೇರೆ ಭಾಗದಲ್ಲಿ ಸ್ಮಶಾನಕ್ಕೆ ನಿವೇಶನ ಗುರುತಿಸಿದ್ದರೂ ಈ ಗ್ರಾಮಸ್ಥರಿಗೆ ಸ್ಮಶಾನ ಇದುವರೆಗೂ ಮಂಜೂರಾಗಿಲ್ಲ.
ನಮ್ಮ ಜನಾಂಗದಲ್ಲಿ ಶವವನ್ನು ಹೊಳುವುದರಿಂದ ಸ್ಮಶಾನಕ್ಕೆ ಜಾಗ ಮಂಜೂರು ಮಾಡಿಕೊಡುವಂತೆ 15–20 ವರ್ಷಗಳಿಂದ ತಾಲ್ಲೂಕು ಆಡಳಿತ, ಶಾಸಕರು ಸೇರಿದಂತೆ ಎಲ್ಲರಿಗೂ ಮನವಿ ಸಲ್ಲಿಸುತ್ತಾ ಬಂದಿದ್ದೇವೆ. ಹಳೇ ಮಾಕೋಡು ವ್ಯಾಪ್ತಿಯಲ್ಲಿ ಜಾಗ ಗುರುತಿಸಲಾಗಿತ್ತು. ಆದರೆ, ಪ್ರವಾಸೋದ್ಯಮ ಇಲಾಖೆಗೆ ಮಂಜೂರಾಗಿದ್ದರಿಂದ ಸ್ಮಶಾನಕ್ಕೆ ಜಾಗ ಸಿಗಲಿಲ್ಲ. ಪ್ರಸ್ತುತ ಶವ ಸಂಸ್ಕಾರ ಮಾಡುತ್ತಿರುವ ಭದ್ರಾಹಿನ್ನೀರಿನ ನಡುಗಡ್ಡೆ ಪ್ರದೇಶ ಭದ್ರಾ ಅಭಯಾರಣ್ಯದ ವ್ಯಾಪ್ತಿಗೆ ಬರುತ್ತದೆ. ಗ್ರಾಮದ ವ್ಯಾಪ್ತಿಯಲ್ಲಿ ಸ್ಮಶಾನಕ್ಕೆ 1 ಎಕರೆ ಮಂಜೂರು ಮಾಡಿದರೆ ಅನುಕೂಲವಾಗುತ್ತದೆ ಎಂದು ಮೆಣಸೂರು ಗ್ರಾಮ ಪಂಚಾಯಿತಿ ಸದಸ್ಯ ಅಣ್ಣಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.
ರಾವೂರು ಗ್ರಾಮದ ಗ್ರಾಮಸ್ಥರು ಕಂದಾಯ ಇಲಾಖೆಗೆ ನೀಡಿದ ಮನವಿಯನ್ನು ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ನೂರುಲ್ ಹುದಾ ತಿಳಿಸಿದರು.
ಭದ್ರಾಹಿನ್ನೀರಿನ ನಡುಗಡ್ಡೆ ಪ್ರದೇಶವೇ ಸ್ಮಶಾನ ತೆಪ್ಪದ ಮೂಲಕ 1ಕಿ.ಮೀ ಭದ್ರಾಹಿನ್ನೀರಿನಲ್ಲಿ ಶವ ಸಾಗಿಸುವ ಸ್ಥಿತಿ ಗ್ರಾಮಸ್ಥರ ಮನವಿಗೆ ಸ್ಪಂದಿಸದ ತಾಲ್ಲೂಕು ಆಡಳಿತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.