ADVERTISEMENT

ರಂಭಾಪುರಿ ಮಠಕ್ಕೆ ಬಂದು ಶ್ರೀಗಳಿಗೆ ಪಾದಪೂಜೆ ಮಾಡಿದ ವಿನಯ ಗುರೂಜಿ

ವಿವಿಧ ಬಗೆಯ ಹೂವಿನ ಅಭಿಷೇಕ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2020, 4:41 IST
Last Updated 14 ಆಗಸ್ಟ್ 2020, 4:41 IST
ಬಾಳೆಹೊನ್ನೂರಿನ ರಂಭಾಪುರಿ ಪೀಠಕ್ಕೆ ಗೌರಿಗದ್ದೆಯ ಅವದೂತ ವಿನಯ ಗುರೂಜಿ ಭೇಟಿ ನೀಡಿ ವೀರ ಸೋಮೇಶ್ವರ ಸ್ವಾಮೀಜಿಗಳ ಪಾದಪೂಜೆ ಮಾಡಿದರು.
ಬಾಳೆಹೊನ್ನೂರಿನ ರಂಭಾಪುರಿ ಪೀಠಕ್ಕೆ ಗೌರಿಗದ್ದೆಯ ಅವದೂತ ವಿನಯ ಗುರೂಜಿ ಭೇಟಿ ನೀಡಿ ವೀರ ಸೋಮೇಶ್ವರ ಸ್ವಾಮೀಜಿಗಳ ಪಾದಪೂಜೆ ಮಾಡಿದರು.   

ಬಾಳೆಹೊನ್ನೂರು: ಗೌರಿಗದ್ದೆಯ ವಿನಯ ಗುರೂಜಿ ಗುರುವಾರ ರಂಭಾಪುರಿ ಪೀಠಕ್ಕೆ ಬಂದು ವೀರ ಸೋಮೇಶ್ವರ ಸ್ವಾಮೀಜಿಯ ಪಾದಪೂಜೆ ಮಾಡಿ, ಸ್ಪಟಿಕದ ಲಿಂಗವನ್ನು ನೀಡಿ, ವಿವಿಧ ಬಗೆಯ ಹೂವಿನ ಅಭಿಷೇಕ ಮಾಡಿ ಆರ್ಶೀವಾದ ಪಡೆದರು.

ನಂತರ ಗುರೂಜಿ ಮಾತನಾಡಿ, ‘ರಂಭಾಪುರಿ ಪೀಠದಲ್ಲಿ ಸ್ವಾಮೀಜಿ 51 ಅಡಿ ಎತ್ತರದ ರೇಣುಕಾಚಾರ್ಯರ ಪ್ರತಿಮೆ ಸ್ಥಾಪಿಸಲು ಸಂಕಲ್ಪ ಮಾಡಿದ್ದಾರೆ. ಎರಡು ತಿಂಗಳ ಹಿಂದೆ ಕಾಶಿಗೆ ಹೋಗಿದ್ದಾಗ ಗುರುಗಳ ಆದೇಶದಂತೆ ಸ್ಪಟಿಕ ಲಿಂಗ ಹಾಗೂ ಶ್ರೀಚಕ್ರವನ್ನು ತಂದಿದ್ದು, ಅದನ್ನು ಪ್ರತಿಮೆಯ ಶಿಲಾನ್ಯಾಸದ ಸ್ಥಳದಲ್ಲಿ ಇರಿಸಬಹುದು’ ಎಂದು ತಿಳಿಸಿದರು.

‘ರಾಮ ಮಂದಿರಕ್ಕೆ ಭೂಮಿಪೂಜೆ ನಡೆಯುವ ಬಗ್ಗೆ ಈ ಹಿಂದೆಯೇ ಹೇಳಿದ್ದೆ. ಕೊರೊನಾದ ಜೊತೆಗೆ ಸನಾತನ ಧರ್ಮ ಮತ್ತೆ ಬೆಳಗಲಿದೆ. ಪ್ರಪಂಚ ಮತ್ತೆ ಭಾರತವನ್ನು ಜಗದ್ಗುರು ಎಂದು ಒಪ್ಪಲಿದೆ ಎಂಬುದಾಗಿ ಕಾಲಜ್ಞಾನದಲ್ಲಿ ಬರೆದಿದೆ. ಪ್ರಕೃತಿಯೇ ಕಾಯಿಲೆಯನ್ನು ಸೃಷ್ಟಿಮಾಡಿ ಅದನ್ನು ಗುಣಪಡಿಸುವುದು ಧರ್ಮ. ಆಯುರ್ವೇದದಲ್ಲಿರುವ ವಿಶೇಷತೆ ಈಗ ಜಗತ್ತಿಗೆ ಗೊತ್ತಾಗಿದೆ. ಹಿಂದೆ ರೇಣುಕಾಚಾರ್ಯ ಹಾಗೂ ಶಂಕರಾಚಾರ್ಯ ರೂಪದಲ್ಲಿ ಶಿವ ಅದ್ವೈತ ಹೇಳಲು ಬಂದಿದ್ದರು. ಜ್ಞಾನದ ಜೊತೆಗೆ ಧರ್ಮ ಕೂಡಿದ್ದರೆ ಎಲ್ಲೂ ಧರ್ಮ ಸಂಘರ್ಷ ನಡೆಯುವುದಿಲ್ಲ. ಧರ್ಮದಿಂದ ಧರಣಿ ನಡೆಯುತ್ತಿದೆ. ಜನ ಈಗಿನ ಪಾಶ್ಚಿಮಾತ್ಯ ಸಂಸ್ಕೃತಿಯಿಂದ ಹೊರಬರಬೇಕಿದೆ’ ಎಂದರು.

ADVERTISEMENT

ರಂಭಾಪುರಿ ಸ್ವಾಮೀಜಿ ಮಾತನಾಡಿ, ‘ವೀರಶೈವ ಧರ್ಮಕ್ಕೆ 3,500 ವರ್ಷಗಳ ಇತಿಹಾಸವಿದೆ. ಇದುವರೆಗೆ 120 ಸ್ವಾಮೀಜಿಗಳನ್ನು ಪೀಠ ಕಂಡಿದೆ. ಮಾನವ ಧರ್ಮ ಜಯವಾಗಲಿ ಎಂಬ ಉದ್ಘೋಷಣೆ ಹೊಂದಿದೆ. ಮೈಸೂರು ಮಹಾರಾಜರ ಕಾಲದಲ್ಲಿ ಮಿರ್ಜಾ ಇಸ್ಮಾಯಿಲ್ ಮಂತ್ರಿಯಾಗಿದ್ದ ವೇಳೆ ಮಠಕ್ಕೆ 80 ಎಕರೆ ಭೂಮಿ ನೀಡಿದ್ದು, ಇದೀಗ ಕಾಫಿತೋಟವಾಗಿದೆ’ ಎಂದರು.

ವಿನಯ ಗುರೂಜಿ ಪೀಠದ ಎಲ್ಲಾ ದೇವಸ್ಥಾನಗಳಿಗೂ ಭೇಟಿ ನೀಡಿ ದರ್ಶನ ಪಡೆದರು. ಉದ್ಯಮಿ ಕೋಣಂದೂರು ಪ್ರಕಾಶ್, ಬಿಜೆಪಿ ಮುಖಂಡ ಟಿ.ಎಂ. ಉಮೇಶ್, ಕೂಳೂರು ಶೃಂಗೇಶ್ವರರಾವ್, ಜಯಪುರದ ಚಂದ್ರಣ್ಣ, ಬಿ.ಕೆ. ಮದುಸೂಧನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.