
ಚಿಕ್ಕಮಗಳೂರು: ‘ಹವಾಮಾನ ವೈಪರೀತ್ಯ ಸಹಿಸಿಕೊಳ್ಳುವ ತಳಿಯ ರಾಗಿ ಬೆಳೆಸುವ ಪ್ರಯತ್ನವಾಗಬೇಕು’ ಎಂದು ಕೃಷಿ ಅಧಿಕಾರಿ ಮಂಜುನಾಥ್ ಅಭಿಪ್ರಾಯಪಟ್ಟರು.
ಭೂಮಿ ಸುಸ್ಥಿರ ಅಭಿವೃದ್ಧಿ ಸಂಸ್ಥೆ ಹಾಗೂ ನಬಾರ್ಡ್ ಸಹಯೋಗದಲ್ಲಿ ಕಡೂರು ತಾಲ್ಲೂಕಿನ ಲಕ್ಷ್ಮೀಪುರದ ರೈತ ಮಹಿಳೆ ನಾಗಮ್ಮ ಅವರ ಜಮೀನಿನಲ್ಲಿ ಶುಕ್ರವಾರ ಆಯೋಜಿಸಿದ್ದ ‘ರಾಗಿ ಮತ್ತು ಅಂತರ ಬೆಳೆ ಕ್ಷೇತ್ರೋತ್ಸವ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜನಸಂಖ್ಯೆ ಹೆಚ್ಚಾದಾಗ, ಅವರ ಹಸಿವು ನೀಗಿಸಲು ಹೈಬ್ರಿಡ್ ತಳಿ ಪರಿಚಯಿಸಲಾಯಿತು. ಪರಿಣಾಮವಾಗಿ ದೇಸಿ ರಾಗಿ ತಳಿಗಳು ನೇಪಥ್ಯಕ್ಕೆ ಸರಿದವು. ಹವಾಮಾನ ವೈಪರೀತ್ಯ ಎದುರಾಗಿರುವ ಸಂದರ್ಭದಲ್ಲಿ ದೇಸಿ ತಳಿಗಳನ್ನು ಮತ್ತೆ ಹೊಲಗಳಿಗೆ ತರಬೇಕಿದೆ ಎಂದು ಹೇಳಿದರು.
‘ರೈತರು ತಮ್ಮ ಒಟ್ಟು ಜಮೀನಿನಲ್ಲಿ ಕಾಲು ಭಾಗದಷ್ಟು ದೇಸಿ ರಾಗಿ ತಳಿಗಳನ್ನು ಬೆಳೆದು ಅವುಗಳನ್ನು ಸಂರಕ್ಷಿಸಬಹುದು. ರಾಗಿಯ ಜತೆಗೆ ಅಲಸಂದೆ, ಅವರೆ, ಬೀನ್ಸ್ ರೀತಿಯ ದ್ವಿದಳ ಧಾನ್ಯಗಳನ್ನು ಅಂತರ ಬೆಳೆ ಅಥವಾ ಅಕ್ಕಡಿ ಸಾಲಾಗಿ ಬೆಳೆಯಬೇಕು. ಹೊಲದ ಬದುವಿನಲ್ಲಿ ಹರಳು, ಎಳ್ಳು ರೀತಿಯ ಗಿಡಗಳನ್ನು ಬೆಳೆಸಬೇಕು. ಇದರಿಂದ ಜೀವವೈವಿಧ್ಯ ಹೆಚ್ಚಾಗುವ ಜೊತೆಗೆ ನೈಸರ್ಗಿಕವಾಗಿ ರೋಗ ಮತ್ತು ಕೀಟಬಾಧೆ ನಿಯಂತ್ರಣವಾಗುತ್ತದೆ. ಮನೆಗೆ ಬೇಕಾದ ಧಾನ್ಯಗಳು ಲಭ್ಯವಾಗುತ್ತವೆ’ ಎಂದರು.
ಹನುಮನಹಳ್ಳಿಯ ಪ್ರಗತಿಪರ ಕೃಷಿಕ ತಿಪ್ಪೇಶಪ್ಪ ಮಾತನಾಡಿ, ‘ಕಳೆ, ಕೀಟ ನಿಯಂತ್ರಣಕ್ಕಾಗಿ ರಾಸಾಯನಿಕ ಕಳೆ, ಕೀಟನಾಶಕ ಸಿಂಪಡಿಸಬೇಡಿ’ ಎಂದು ಸಲಹೆ ನೀಡಿದರು.
ಭೂಮಿ ಸುಸ್ಥಿರ ಅಭಿವೃದ್ಧಿ ಸಂಸ್ಥೆಯ ಯೋಜನಾ ನಿರ್ದೇಶಕ ಕೆ.ರವಿ, ‘ನಬಾರ್ಡ್ ಸಹಯೋಗದಲ್ಲಿ ಬುಕ್ಕಸಾಗರ, ಲಕ್ದ್ಮೀಪುರ ಮತ್ತು ಬಿಸಲೇಹಳ್ಳಿಯಲ್ಲಿ ಜೀವಾ ನೈಸರ್ಗಿಕ ಕೃಷಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಯೋಜನೆ ಭಾಗವಾಗಿ ವಿವಿಧ ಫಲಾನುಭವಿಗಳ ಹೊಲದಲ್ಲಿ ಅಕ್ಕಡಿ ಸಾಲು ಪದ್ಧತಿಯಲ್ಲಿ ರಾಗಿ ತಳಿ ಬೆಳೆಸಲಾಗಿದೆ. ಅಕ್ಕಡಿ ಸಾಲು ಬೆಳೆಗಳ ಮಹತ್ವ ತಿಳಿಸಲು ರಾಗಿ- ಅಂತರ ಬೆಳೆ ಕ್ಷೇತ್ರೋತ್ಸವ ಆಯೋಜಿಸಿದ್ದೇವೆ’ ಎಂದು ವಿವರಿಸಿದರು.
ಫಲಾನುಭವಿ ನಾಗಮ್ಮ ಅವರು ತಮ್ಮ ಜಮೀನಿನಲ್ಲಿ ಅಕ್ಕಡಿ ಸಾಲು ಬೆಳೆ ಪದ್ಧತಿಯಲ್ಲಿ ದೇಸಿ ರಾಗಿ ತಳಿ ಬೆಳೆದಿರುವ ಬಗ್ಗೆ ಅನುಭವ ಹಂಚಿಕೊಂಡರು. ಲಕ್ಷ್ಮಿಪುರ ಶಾಲೆಯ ಶಿಕ್ಷಕ ಚಂದ್ರಶೇಖರ ಮತ್ತು ಗುರುಮೂರ್ತಿ ಮಾತನಾಡಿದರು.
ಭೂಮಿ ಸುಸ್ಥಿರ ಅಭಿವೃದ್ಧಿ ಸಂಸ್ಥೆಯ ಕ್ಷೇತ್ರಾಧಿಕಾರಿ ಶ್ವೇತಾ, ಯೋಜನೆಯ ಕ್ಷೇತ್ರ ಮಾರ್ಗದರ್ಶಕ ರುದ್ರೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.