ADVERTISEMENT

ನರಸಿಂಹರಾಜಪುರ: ಮನೆಗಳಿಗೆ ನುಗ್ಗಿದ ಕೆಸರು ನೀರು

ಇಂದಿರಾ ನಗರ: 2 ಟನ್‌ ಕೊಬ್ಬರಿ ನಷ್ಟ– ಪರಿಹಾರಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 8 ಮೇ 2020, 16:51 IST
Last Updated 8 ಮೇ 2020, 16:51 IST
ನರಸಿಂಹರಾಜಪುರದಲ್ಲಿ ಸುರಿದ ಭಾರಿ ಮಳೆಗೆ ಇಂದಿರಾ ನಗರದ ವ್ಯಾಪ್ತಿಯಲ್ಲಿ ಹಾನಿಯಾದ ಸ್ಥಳಕ್ಕೆ ತಾಲ್ಲೂಕು ಪಂಚಾಯಿತಿ ಇಒ ಎಸ್.ನಯನಾ ಭೇಟಿ ನೀಡಿ ಪರಿಶೀಲಿಸಿದರು (ಎಡಚಿತ್ರ). ಇಂದಿರಾ ನಗರದ ವ್ಯಾಪ್ತಿಯ ಲೇಔಟ್‌ಗೆ ಹಾಕಿದ್ದ ಮಣ್ಣು ಕುಸಿದು, ನೀರು ಹರಿದುಬಂದು ಕೊಬ್ಬರಿ ಕೊಚ್ಚಿಹೋಗಿದೆ.
ನರಸಿಂಹರಾಜಪುರದಲ್ಲಿ ಸುರಿದ ಭಾರಿ ಮಳೆಗೆ ಇಂದಿರಾ ನಗರದ ವ್ಯಾಪ್ತಿಯಲ್ಲಿ ಹಾನಿಯಾದ ಸ್ಥಳಕ್ಕೆ ತಾಲ್ಲೂಕು ಪಂಚಾಯಿತಿ ಇಒ ಎಸ್.ನಯನಾ ಭೇಟಿ ನೀಡಿ ಪರಿಶೀಲಿಸಿದರು (ಎಡಚಿತ್ರ). ಇಂದಿರಾ ನಗರದ ವ್ಯಾಪ್ತಿಯ ಲೇಔಟ್‌ಗೆ ಹಾಕಿದ್ದ ಮಣ್ಣು ಕುಸಿದು, ನೀರು ಹರಿದುಬಂದು ಕೊಬ್ಬರಿ ಕೊಚ್ಚಿಹೋಗಿದೆ.   

ನರಸಿಂಹರಾಜಪುರ: ತಾಲ್ಲೂಕಿನ ಬಹುತೇಕ ಭಾಗಗಳಲ್ಲಿ ಗುರುವಾರ ರಾತ್ರಿ ಗುಡುಗು ಸಹಿತ ಧಾರಾಕಾರವಾಗಿ ಮಳೆ ಸುರಿಯಿತು.

ಗುರುವಾರ ರಾತ್ರಿಯಿಂದಲೇ ಮೋಡ ಕವಿದ ವಾತಾವರಣವಿತ್ತು. ಮಧ್ಯರಾತ್ರಿ 1ಗಂಟೆ ವೇಳೆ ಭಾರಿ ಪ್ರಮಾಣದಲ್ಲಿ ಮಳೆ ಸುರಿಯಿತು. ಪಟ್ಟಣದ ಸಮೀಪ ಇಂದಿರಾ ನಗರದ ವ್ಯಾಪ್ತಿಯಲ್ಲಿ ಭದ್ರಾವತಿಯ ಖಾಸಗಿ ವ್ಯಕ್ತಿಯೊಬ್ಬರು ಲೇಔಟ್ ನಿರ್ಮಿಸಿ ಎತ್ತರದಲ್ಲಿ ಮಣ್ಣು ಹಾಕಿದ್ದರು. ಮಣ್ಣಿಗೆ ಯಾವುದೇ ರೀತಿ ತಡೆಗೋಡೆ ನಿರ್ಮಿಸದಿದ್ದರಿಂದ ಭಾರಿ ಮಳೆಗೆ ಮಣ್ಣು ಜರುಗಿ ಚರಂಡಿಗಳೆಲ್ಲ ಮುಚ್ಚಿಕೊಂಡಿದ್ದರಿಂದ ಕೆಸರು ಸಹಿತ ನೀರು ಹಲವು ಮನೆಗಳಿಗೆ ನುಗ್ಗಿತು.

ಇಲ್ಲಿನ ನಿವಾಸಿ ತೆಂಗಿನಕಾಯಿ ಮಾರಾಟಗಾರ ಸೈಯದ್ ಅಹಮ್ಮದ್ ರಫಿ ಅವರ ಮನೆಯ ಮುಂಭಾಗದ ಕಾಂಪೌಡ್ ನೊಳಗೆ ಕೆಸರು ಮಿಶ್ರಿತ ನೀರು ಒಳನುಗ್ಗಿದ ಪರಿಣಾಮ ಒಣಗಿಸಲು ಹಾಕಿದ್ದ ಕೊಬ್ಬರಿ ಕೆಸರುಮಯವಾಗಿದ್ದರಿಂದ 2 ಟನ್‌ನಷ್ಟು ಕೊಬ್ಬರಿ ಮತ್ತು ತೆಂಗಿನ ಕಾಯಿ ನಷ್ಟವಾಯಿತು.

ADVERTISEMENT

ಅದೇ ರೀತಿ ಕಳೆದ ಸಾಲಿನ ಮಳೆಗಾಲದಲ್ಲಿ ಮನೆ ಕಳೆದುಕೊಂಡು ಪರಿಹಾರದ ಹಣದಲ್ಲಿ ನಿರ್ಮಾಣದ ಹಂತದಲ್ಲಿದ್ದ ಫಾತಿಮುನ್ನಿಸಾ ಅವರ ಮನೆಗೆ ಕೆಸರು ಮಿಶ್ರಿತ ನೀರು ನುಗ್ಗಿ, ಒಂದು ಲೋಡ್ ಜಲ್ಲಿ, ಮರಳು ನೀರಿನಲ್ಲಿ ಕೊಚ್ಚಿಹೋಯಿತು. ಮನೆಯಲ್ಲಿ ಕೆಸರಿನ ರಾಡಿಯೇ ನಿಂತಿತ್ತು.

ಭಾರಿ ಮಳೆಗೆ ಮಣ್ಣು ಕುಸಿದು ಚರಂಡಿಗಳಲ್ಲಿ ಮಣ್ಣು ತುಂಬಿಕೊಂಡಿದ್ದರಿಂದ ಗ್ರಾಮ ವ್ಯಾಪ್ತಿಯ ರಸ್ತೆ ಮೇಲೆಲ್ಲ ಜಲ್ಲಿ, ಮರಳು ಕೆಸರಿನ ನೀರು ಹರಿದಿದೆ.

ಸ್ಥಳಕ್ಕೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕುರಿಯಾಕೋಸ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ನಯನಾ, ನಾಗಲಾಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮನಿಷ್, ಗ್ರಾಮ ಪಂಚಾಯಿತಿ ಸದಸ್ಯರಾದ ಸಾಧಿಕ್ ಪಾಷ ಭೇಟಿ ನೀಡಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.