
ಆಲ್ದೂರು: ಬಿಸಿಲಿನ ತಾಪದಿಂದ ತತ್ತರಿಸಿದ್ದ ಜನರಿಗೆ ಮಂಗಳವಾರ ಸಂಜೆ ಹೋಬಳಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಳೆ ತಂಪೆರೆಯಿತು
ಆಲ್ದೂರು, ಹೊಸಳ್ಳಿ, ಬನ್ನೂರು,ಯಲಗುಡಿಗೆ, ದೊಡ್ಡಮಾಗರವಳ್ಳಿ, ಚಿಕ್ಕಮಾಗರವಳ್ಳಿ ಮುಂತಾದ ಕಡೆ ಗುಡುಗು ಸಹಿತ ಮಳೆಯಾಗಿದ್ದು, ಬಿಸಿಲಿನ ತಾಪ ಕೊಂಚ ಕಡಿಮೆ ಆದಂತಾಗಿದೆ.
‘ಮಳೆ ಸ್ವಲ್ಪ ಮುಂಚಿತವಾಗಿ ಬಂದಿದೆ. ಆದರೂ ರೋಬೋಸ್ಟಾ ತಳಿಯ ಕಾಫಿಗೆ ಮಳೆಯು ಅನುಕೂಲವಾಗುತ್ತದೆ. ಅರೇಬಿಕ ಕಾಫಿಗೆ ಅನುಕೂಲವಾದರೂ ಪೂರ್ಣ ಪ್ರಮಾಣದ ಹೂವು ಬರುವುದು ಮಾರ್ಚ್ 15ರ ನಂತರವೇ’ ಎಂದು ಕಾಫಿ ಬೆಳೆಗಾರ ರವಿಕುಮಾರ್ ಎಚ್.ಎಲ್ ತಿಳಿಸಿದರು.
ಮೊದಲ ಮಳೆಯ ಸಿಂಚನ(ನರಸಿಂಹರಾಜಪುರ): ಪಟ್ಟಣವೂ ಸೇರಿದಂತೆ ಮೆಣಸೂರು ಮತ್ತಿತರ ಗ್ರಾಮಗಳ ವ್ಯಾಪ್ತಿಯಲ್ಲಿ ಮಂಗಳವಾರ ಮೊದಲ ಮಳೆಯ ಸಿಂಚನವಾಯಿತು.
ಮಂಗಳವಾರ ಬೆಳಿಗ್ಗೆಯಿಂದಲೇ ಬಿಸಿಲಿನ ತಾಪಮಾನ ಹೆಚ್ಚಾಗಿತ್ತು. ಸಂಜೆ 4ರ ವೇಳೆಗೆ ಮೋಡ ಕವಿದ ವಾತಾವರಣ ಉಂಟಾಗಿ ಗುಡುಗು ಸಹಿತ ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ತುಂತುರು ಮಳೆ ಸುರಿಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.