ADVERTISEMENT

ಚಿಕ್ಕಮಗಳೂರಿನಲ್ಲಿ ಗುಡುಗು ಸಹಿತ ಮಳೆ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2019, 17:13 IST
Last Updated 7 ಏಪ್ರಿಲ್ 2019, 17:13 IST
ಚಿಕ್ಕಮಗಳೂರು ತಾಲ್ಲೂಕಿನ ವಸ್ತಾರೆ ಬಳಿ ರಸ್ತೆಗೆ ಅಡ್ಡಲಾಗಿ ಬಿದ್ದಿರುವ ಮರ.
ಚಿಕ್ಕಮಗಳೂರು ತಾಲ್ಲೂಕಿನ ವಸ್ತಾರೆ ಬಳಿ ರಸ್ತೆಗೆ ಅಡ್ಡಲಾಗಿ ಬಿದ್ದಿರುವ ಮರ.   

ಚಿಕ್ಕಮಗಳೂರು: ನಗರದಲ್ಲಿ ಭಾನುವಾರ ಸಾಧಾರಣ ಮಳೆ ಸುರಿಯಿತು.

ಮಧ್ಯಾಹ್ನ 3.40ರಿಂದ ಹತ್ತು ನಿಮಿಷ ತುಂತುರು ಮಳೆ ಸುರಿಯಿತು. ಸಂಜೆ 4.25ರಿಂದ ಇಪ್ಪತ್ತು ನಿಮಿಷ ತುಸು ಬಿರುಸಿನ ಮಳೆ ಸುರಿಯಿತು. ಗುಡುಗು, ಮಿಂಚಿನ ಆರ್ಭಟ ಇತ್ತು. ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣ ಮತ್ತು ಬಿಸಿಲಿನ ಹಗ್ಗಜಗ್ಗಾಟ ಇತ್ತು.

ಸಂಜೆ 4 ಗಂಟೆ ಸುಮಾರಿಗೆ ತಾಲ್ಲೂಕಿನ ವಸ್ತಾರೆ ಬಳಿ ರಸ್ತೆಗೆ ಅಡ್ಡಲಾಗಿ ಮರ ಬಿದ್ದು, ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ಸಂಜೆ 5 ಗಂಟೆಗೆ ಸ್ಥಳೀಯರು ಮರ ತೆರವುಗೊಳಿಸಿ, ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ADVERTISEMENT

ಮೂಡಿಗೆರೆ, ಕಳಸದ ಸುತ್ತಮುತ್ತಲೂ ಭಾನುವಾರ ಹದವಾಗಿ ಮಳೆ ಸುರಿಯಿತು.

ಶಿವಮೊಗ್ಗ ಜಿಲ್ಲೆಯ ಕೆಲವೆಡೆ ಮಳೆ
ಶಿವಮೊಗ್ಗ:
ಬೆಳಿಗ್ಗೆಯಿಂದ ಸಂಜೆಯವರೆಗೆ ಬಿಸಿಲಿನ ತೀವ್ರತೆಯಿದ್ದ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಭಾನುವಾರ ಸಂಜೆ ಮಳೆಯಾಯಿತು.

ಶಿಕಾರಿಪುರ, ಹೊಸನಗರ, ಶಿವಮೊಗ್ಗ, ತೀರ್ಥಹಳ್ಳಿ ತಾಲ್ಲೂಕಿನ ಕೆಲವೆಡೆ ಸಾಧಾರಣ ಮಳೆಯಾಗಿದೆ.ಸಾಗರ ಮತ್ತು ಸೊರಬ ತಾಲ್ಲೂಕಿನಲ್ಲಿ ಮೋಡ ಕವಿದ ವಾತಾವರಣವಿತ್ತು. ಶಿಕಾರಿಪುರದಲ್ಲಿ ತುಂತುರು ಮಳೆಯಾಗಿದೆ. ಶಿವಮೊಗ್ಗ ಮತ್ತು ಭದ್ರಾವತಿ ತಾಲ್ಲೂಕಿನಲ್ಲಿ ಗುಡುಗು ಹೆಚ್ಚಾಗಿದ್ದರೂ ಕೆಲವು ಭಾಗಗಳಲ್ಲಿ ಮಾತ್ರವೇಸಾಧಾರಣ ಮಳೆಯಾಗಿದೆ.

ರಿಪ್ಪನ್‌ಪೇಟೆಯಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಗುಡುಗು, ಸಿಡಿಲು ಸಹಿತ ಅಬ್ಬರದ ಗಾಳಿ ಮಳೆಯಾಯಿತು. ಇದರಿಂದ ವಿದ್ಯುತ್‌ ಸಂಪರ್ಕ ಕಡಿತಗೊಂಡು ಜನರು ತೊಂದರೆ ಪಡುವಂತಾಯಿತು. ತೀರ್ಥಹಳ್ಳಿ ರಸ್ತೆಯಲ್ಲಿ ನೀರು ನಿಂತು ವಾಹನ ಸವಾರರು, ಪಾದಚಾರಿಗಳು ತೊಂದರೆ ಪ‍ಡುವಂತಾಯಿತು. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕು ತುಂತುರು ಮಳೆಯಾಗಿದ್ದು, ಚಿಕ್ಕಜಾಜೂರಿನಲ್ಲಿ ಗುಡುಗು ಮಳೆಯಾಗಿದೆ. ದಾವಣಗೆರೆ ಜಿಲ್ಲೆಯ ನ್ಯಾಮತಿಯಲ್ಲಿಯೂ ತುಂತುರು ಮಳೆ ಆಗಿದೆ.

ಸಿಡಿಲು ಬಡಿದು ಯುವಕ ಸಾವು
ರಾಯಚೂರು:
ಜಿಲ್ಲೆಯ ಸಿರವಾರ ಸಮೀಪದ ನೀಲಗಲ್ ಕ್ಯಾಂಪ್ ಹತ್ತಿರದ ಹೊಲದಲ್ಲಿ‌ ಶನಿವಾರ ಸಂಜೆ ಸಿಡಿಲು ಬಡಿದು ಕುರಿಗಾಯಿ ನಾಗರಾಜ (28) ಮೃತಪಟ್ಟಿದ್ದಾರೆ. ‘ಇವರು ಜಂಬಲದಿನ್ನಿ ಗ್ರಾಮದವರಾಗಿದ್ದು, ಮಳೆ ಬಂತೆದ್ದು,ರಕ್ಷಣೆಗಾಗಿ ಮರದ ಕೆಳಗೆ ನಿಂತಾಗ ಸಿಡಿಲು ಬಡಿದಿದೆ. ಇವರ ಜೊತೆಯಲ್ಲಿದ್ದ ರಾಜೇಶ, ಮಹೇಶ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ’ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.