ADVERTISEMENT

ಚಿಕ್ಕಮಗಳೂರು | ಅಕಾಲಿಕ ಮಳೆ: ಅರಳಿದ ಕಾಫಿ ಹೂವು

ವಿಜಯಕುಮಾರ್ ಎಸ್.ಕೆ.
Published 19 ಡಿಸೆಂಬರ್ 2023, 5:34 IST
Last Updated 19 ಡಿಸೆಂಬರ್ 2023, 5:34 IST
<div class="paragraphs"><p>ಅರಳಿದ ಕಾಫಿ ಹೂವು</p></div>

ಅರಳಿದ ಕಾಫಿ ಹೂವು

   

ಚಿಕ್ಕಮಗಳೂರು: ಮಳೆ ಕೊರತೆಯಿಂದ ಕಂಗೆಟ್ಟಿದ್ದ ಕಾಫಿ ಬೆಳೆಗೆ ಅಕಾಲಿಕ ಮಳೆ ಕಾಟವಾಗಿ ಕೊಡುತ್ತಿದೆ. ಒಂದೆಡೆ ಕೊಯ್ಲು ಸಾಧ್ಯವಾಗದೆ ಗಿಡದಲ್ಲೇ ಹಣ್ಣು ಉದುರಿ ಮಣ್ಣು ಪಾಲಾಗುತ್ತಿದ್ದರೆ, ಮತ್ತೊಂದೆಡೆ ಗಿಡದಲ್ಲಿ ಹೂವುಗಳು ಅರಳಲಾರಂಭಿಸಿವೆ. ಇದು ಕಾಫಿ ಬೆಳೆಗಾರರಿಗೆ ನುಂಗಲಾರದ ತುತ್ತಾಗಿದೆ.

ಮುಂಗಾರಿನಲ್ಲಿ ಮಳೆ ಕೈಕೊಟ್ಟಿದ್ದರಿಂದ ಕಾಫಿ ಬೆಳೆ ಉಳಿಸಿಕೊಳ್ಳಲು ಬೆಳೆಗಾರರು ಪರದಾಡಿದ್ದರು. ಮಳೆ ಕಡಿಮೆಯಾಗಿದ್ದರಿಂದ ಕಾಯಿ ಕೊರಕ ಬಾಧೆ ಕಾಡಿತ್ತು. ಕಾಳುಗಟ್ಟುವ ಸಂದರ್ಭದಲ್ಲಿ ಮಳೆ ಇಲ್ಲದೆ ಗೊಬ್ಬರ ಹಾಕಲು ಸಾಧ್ಯವಾಗದೆ ಬೆಳೆಗಾರರು ಫಸಲು ಕುಂಠಿತವಾಯಿತು.

ADVERTISEMENT

ಕಾಫಿ ಹೂ ಅರಳುವ ಸಂದರ್ಭದಲ್ಲಿ ಮಳೆ ಬಂದಿದ್ದರೆ ಫಸಲು ಉತ್ತಮವಾಗಿ ಕಟ್ಟುತ್ತದೆ. ಆದರೆ, ಈ ಬಾರಿ ಮಳೆಯಾಗದೆ ಉಷ್ಣಾಂಶ ಹೆಚ್ಚಾಯಿತು. ಇದರಿಂದ ಕಾಫಿ ಹೂವುಗಳು ಉದುರಿದವು. ಈ ಎಲ್ಲಾ ಕಾರಣಗಳಿಂದ ಕಾಫಿ ಫಸಲು ಕಡಿಮೆಯಾಗಿ ಇಳುವರಿ ಕುಂಠಿತವಾಗಿದೆ.

ಅರೇಬಿಕಾ ಕಾಫಿ ತೋಟಗಳಲ್ಲಿ ಈಗ ಗಿಡದಲ್ಲಿ ಅಳಿದು ಉಳಿದಿರುವ ಹಣ್ಣು ಕೊಯ್ಲಿನ ಕಾಲ ಆರಂಭವಾಗಿದೆ. ಕಳೆದ ವಾರ ಸುರಿದ ಮಳೆ ಮತ್ತೊಂದು ರೀತಿಯ ಸಮಸ್ಯೆ ತಂದೊಡ್ಡಿದೆ. ಮಳೆ ಮತ್ತು ಮೋಡದ ವಾತಾವರಣ ಗಿಡದಿಂದ ಹಣ್ಣು ಉದುರುವಂತೆ ಮಾಡಿವೆ. ಕೊಯ್ಲಾಗಿರುವ ಹಣ್ಣುಗಳನ್ನು ಒಣಗಿಸಲು ಸಾಧ್ಯವಾಗದೆ ಗುಣಮಟ್ಟ ಹಾಳಾಗುವ ಆತಂಕ ಕಾಡುತ್ತಿದೆ. ಅದರ ಜತೆಗೆ ಈಗ ಕಾಫಿ ಹಣ್ಣುಗಳ ನಡುವೆ ಹೂವುಗಳು ಅರಳಲಾರಂಭಿಸಿವೆ. ಕಾಫಿ ಹಣ್ಣು ಕೊಯ್ಲಿಗೆ ಇದು ತೊಡಕಾಗಿದೆ.

ಹಣ್ಣು ಕೊಯ್ಲಿಗೆ ಮುಂದಾದರೆ ಅರಳಿರುವ ಹೂವು ಉದುರಿ ಹೋಗುತ್ತವೆ. ಹಾಗೇ ಬಿಟ್ಟರೆ ಹಣ್ಣುಗಳು ಕರಗಿ ಉದುರಿ ಹೋಗುತ್ತವೆ. ಏನು ಮಾಡಬೇಕು ಎಂಬ ದಿಕ್ಕು ತೋಚದ ಸ್ಥಿತಿಯಲ್ಲಿ ಬೆಳೆಗಾರರಿದ್ದಾರೆ. ಈಗ ಅರಳಿರುವ ಹೂವು ಕಾಯಿಗಟ್ಟಿದರೂ ಮಳೆಗಾಲದಲ್ಲಿ ಕೊಯ್ಲಿಗೆ ಬರಲಿವೆ. ಆಗ ಅದು ಬೆಳೆಗಾರರ ಕೈಗೆ ಸಿಗುವುದಿಲ್ಲ, ತೋಟದಲ್ಲಿ ಉದುರಿ ಹೋಗುವ ಸಾಧ್ಯತೆಯೇ ಹೆಚ್ಚು. ಹೂವು ಉದುರಿದರೆ ಆ ಗಿಡದಲ್ಲಿ ಮತ್ತೆ ಹೂವು ಬಿಡುವುದಿಲ್ಲ. ಇದು ಮುಂದಿನ ವರ್ಷದ ಫಸಲಿನ ಮೇಲೆ ಪರಿಣಾಮ ಬೀರಲಿದೆ ಎನ್ನುತ್ತಾರೆ ಕಾಫಿ ಬೆಳೆಗಾರರು. ಈಗ ಮೋಡ ಸರಿದು ಬಿಸಿಲು ಬಂದರೆ ಗಿಡದಲ್ಲಿರುವ ಕಾಫಿ ಹಣ್ಣು ಉಳಿಯಲಿದೆ. ಕೊಯ್ಲಿಗೆ ಮತ್ತು ಕಾಫಿ ಹಣ್ಣು ಒಣಗಿಸಲು ಅನುಕೂಲವಾಗಲಿದೆ. ಇಲ್ಲದಿದ್ದರೆ  ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗಲಿದೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

ಮಳೆಯಿಂದ ಎರಡು ರೀತಿಯ ನಷ್ಟ

‘ಅರೇಬಿಕಾ ಕಾಫಿ ತೋಟಗಳಲ್ಲಿ ಈಗ ಕೊಯ್ಲಿನ ಸಂದರ್ಭ. ಮಳೆಯಾಗಿರುವುದರಿಂದ ಹಣ್ಣುಗಳು ಕರಗಿ ಉದುರಿ ಹೋಗುತ್ತಿವೆ. ಇನ್ನೊಂದೆಡೆ ರೊಬಸ್ಟಾ ಕಾಫಿ ತೋಟಗಳಲ್ಲಿ ಹೂವು ಅರಳುತ್ತಿರುವುದು ಸಮಸ್ಯೆ ತೊಂದೊಡ್ಡಿದೆ’ ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಎಚ್.ಟಿ ಮೋಹನ್‌ಕುಮಾರ್ ಹೇಳಿದರು.

‘ಕೊಯ್ದಿರುವ ಕಾಫಿ ಹಣ್ಣು ಮಳೆ ನೀರಿನಲ್ಲಿ ಕೊಚ್ಚಿ ಹೋಗಿರುವ ಉದಾರಣೆ ಇದೆ. ಒಣಗಿಸಲು ಸಾಧ್ಯವಾಗದೆ ಕರಗಿ ಹೋಗುತ್ತಿವೆ. ಕಾಫಿ ಒಣಗಿಸುವ ಡ್ರೈಯರ್‌ಗಳನ್ನು ಸಬ್ಸಿಡಿ ದರದಲ್ಲಿ ಒದಗಿಸಲು ಮನವಿ ಮಾಡಿದ್ದೇವೆ. ಕಾಫಿ ಮಂಡಳಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಸಬ್ಸಿಡಿ ದೊರೆತರೆ ಈ ರೀತಿಯ ಸಂದರ್ಭಗಳಲ್ಲಿ ಅನುಕೂಲ ಆಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.