ADVERTISEMENT

ಚಿಕ್ಕಮಗಳೂರು | ಮಳೆ: ಬತ್ತಿದ್ದ ಕೆರೆಗಳಿಗೆ ಜೀವಕಳೆ

ಹರಿಹರದಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 19 ಕೆರೆಗಳು ಎರಡೇ ದಿನದಲ್ಲಿ ಭರ್ತಿ

ವಿಜಯಕುಮಾರ್ ಎಸ್.ಕೆ.
Published 10 ಜೂನ್ 2024, 8:04 IST
Last Updated 10 ಜೂನ್ 2024, 8:04 IST
ಚಿಕ್ಕಮಗಳೂರಿನ ಬಸವನಹಳ್ಳಿ ಕೆರೆಗೆ ನೀರು ಬಂದಿರುವುದು –ಪ್ರಜಾವಾಣಿ ಚಿತ್ರ/ಎ.ಎನ್.ಮೂರ್ತಿ
ಚಿಕ್ಕಮಗಳೂರಿನ ಬಸವನಹಳ್ಳಿ ಕೆರೆಗೆ ನೀರು ಬಂದಿರುವುದು –ಪ್ರಜಾವಾಣಿ ಚಿತ್ರ/ಎ.ಎನ್.ಮೂರ್ತಿ   

ಚಿಕ್ಕಮಗಳೂರು: ಮುಂಗಾರು ಪೂರ್ವ ಮಳೆ ಅಬ್ಬರಿಸಿದ್ದು, ಬಹುತೇಕ ಎಲ್ಲಾ ಕೆರೆಗಳಿಗೆ ನೀರು ಬಂದಿದೆ. ಹಲವು ಕೆರೆಗಳು ಈಗಾಗಲೇ ಭರ್ತಿಯಾಗಿದ್ದು, ಇನ್ನೂ ಹಲವು ಕೆರೆಗಳು ಭರ್ತಿ ಹಂತಕ್ಕೆ ಬಂದಿವೆ.

ಚಿಕ್ಕಮಗಳೂರು ತಾಲ್ಲೂಕಿನ ಅಂಬಳೆ ಹೋಬಳಿಯಲ್ಲಿ ಕಳೆದೊಂದು ವಾರದಿಂದ ಭಾರಿ ಮಳೆಯಾಗಿದ್ದು, ಹರಿಹರದಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 19 ಕೆರೆಗಳು ಎರಡೇ ದಿನದಲ್ಲಿ ಭರ್ತಿಯಾಗಿವೆ. 

ತವರೆಕಟ್ಟೆ ಕೆರೆ, ದೊಡ್ಡಬೀಕನಕಟ್ಟೆ, ಕಳ್ಳಿಕಟ್ಟೆ, ಮಠದ ಕಟ್ಟೆ, ಹಾಲೆಕಟ್ಟೆ, ದೊಡ್ಡಕೆರೆ, ಹುಲಿಚಿಕ್ಕನಹಳ್ಳಿ ಗುಂಡಿಶಾಸ್ತ್ರ ಕೆರೆ, ಮಾವಿನಕಟ್ಟೆ, ಹರಿಹರದಹಳ್ಳಿ ಭೂವನಕಟ್ಟೆ, ಭೈರದೇವಕಟ್ಟೆ, ಜಡಗನಹಳ್ಳಿಯ ಕುನ್ನಾರಕಟ್ಟೆ, ರಾಮನಹಳ್ಳಿ ಯಮನಕಟ್ಟೆ, ಹೊಸಕೆರೆ ಸಂಪೂರ್ಣ ಭರ್ತಿಯಾಗಿವೆ.

ADVERTISEMENT

ಅಂಬಳೆದೊಡ್ಡಕೆರೆ, ಹಿರೇಮಗಳೂರು ದೊಡ್ಡಕೆರೆ, ಹುಣಸವಳ್ಳಿ ಕೆರೆ, ಲಕ್ಷ್ಮೀಪುರ ಕೋಡಿಕೆರೆ, ಕಡೂರು ತಾಲ್ಲೂಕಿನ ಕಲ್ಲಳ್ಳಿ ಸಮುದ್ರಕೆರೆಗಳು ಭರ್ತಿಯಾಗಿವೆ.

ನಗರದಲ್ಲಿರುವ ಬಸವನಹಳ್ಳಿ ಕೆರೆ ಮತ್ತು ಕೋಟೆಕೆರೆಗಳಿಗೂ ಈಗ ನೀರು ಬಂದಿದೆ. ಬಸವನಹಳ್ಳಿ ಕೆರೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದರಿಂದ ಕಳೆದ ವರ್ಷ ನೀರು ತುಂಬಿಸಿರಲಿಲ್ಲ. ಕಾಮಗಾರಿ ವಿವಾದದಲ್ಲಿ ಸಿಲುಕಿರುವುದರಿಂದ ಸದ್ಯಕ್ಕೆ ನೀರು ತುಂಬಿಸಲು ಸಣ್ಣ ನೀರಾವರಿ ಇಲಾಖೆ ನಿರ್ಧರಿಸಿದೆ.

ಚಿಕ್ಕಮಗಳೂರು ತಾಲ್ಲೂಕಿನ ಹಂಪಾಪುರ ಗ್ರಾಮದ ಕೆರೆ ಭರ್ತಿಯಾಗಿರುವುದು

ಮುಂಗಾರು ಪೂರ್ವ ಮಳೆಗೆ ಅರ್ಧದಷ್ಟು ನೀರು ಬಂದಿದೆ. ಮರ್ಲೆ ದೊಡ್ಡಕೆರೆ ಶೇ 95ರಷ್ಟು ನೀರು ಬಂದಿದ್ದರೆ, ಕೋಟೆವೂರು ನಾಗರಬಾವಿ ಕೆರೆಗೆ ಶೇ 90ರಷ್ಟು ನೀರು ಹರಿದಿದೆ. ಬಾಳೆಹಳ್ಳಿ ಕರಿಯಪ್ಪನಗೌಡನಕೆರೆಗೆ ಶೇ 85ರಷ್ಟು ನೀರು ಬಂದಿದೆ.

ಚಿಕ್ಕಮಗಳೂರು ತಾಲ್ಲೂಕಿನ ಬೀಕನಹಳ್ಳಿ ಗ್ರಾಮದ ಕೆರೆ ಭರ್ತಿಯಾಗಿರುವುದು

ದೊಡ್ಡಕೆರೆಗಳಲ್ಲಿ ಪೈಕಿ ಅಯ್ಯನಕೆರೆ ಬೇಸಿಗೆಯಲ್ಲಿ ಸಂಪೂರ್ಣ ಖಾಲಿಯಾಗಿತ್ತು. ಈಗ ಶೇ 35ರಷ್ಟು ನೀರು ಬಂದಿದೆ. ಹಳೇ ಮದಗದ ಕೆರೆಗೆ ಇನ್ನೂ ನೀರು ಬಂದಿಲ್ಲ. ಮುಳ್ಳಯ್ಯನಗಿರಿ ಭಾಗದಲ್ಲಿ ಮಳೆ ತೀವ್ರಗೊಂಡರೆ ಈ ಕೆರೆಗೆ ನೀರು ಬರಲಿದೆ. ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾವಿರಕ್ಕೂ ಹೆಚ್ಚು ಸಣ್ಣ ಸಣ್ಣ ಕೆರೆಗಳಿದ್ದು, ಅವುಗಳಲ್ಲೂ ಬಹುತೇಕವು ಭರ್ತಿಯಾಗಿವೆ. ಜಿಲ್ಲೆಯ ಎಲ್ಲಾ ಕೆರೆಗಳಿಗೆ ನೀರು ಬಂದಿರುವುದು ರೈತರಲ್ಲಿ ಸಂತಸ ಹೆಚ್ಚಿಸಿದೆ.  

ಪೂರಕ ಮಾಹಿತಿ: ಬಾಲು ಮಚ್ಚೇರಿ, ಕೆ.ನಾಗರಾಜ್

ಕಡೂರಿನ ಕೆರೆಗಳಲ್ಲಿ ನೀರಿಲ್ಲ

ಕಡೂರು: ಪೂರ್ವ ಮುಂಗಾರು ತಾಲ್ಲೂಕಿನಾದ್ಯಂತ ಉತ್ತಮವಾಗಿ ಸುರಿದಿದೆ. ಆದರೆ ಕೆರೆ ಕಟ್ಟೆಗಳು ತುಂಬುವಂತಹ ಮತ್ತು ಹಳ್ಳಕೊಳ್ಖಗಳು ಹರಿಯುವಂತ ಮಳೆಯಾಗಿಲ್ಲ. ಜೀವನಾಡಿ ಕೆರೆಗಳಾದ ಮದಗದ ಕೆರೆ ಹಾಗೂ ಅಯ್ಯನಕೆರೆಗಳಿಗೆ ಜೋರಾದ ನೀರಿನ ಒಳ ಹರಿವು ಆರಂಭವಾಗಿಲ್ಲ. ಮಳೆ ಬಿದ್ದಾಗ ಮಾತ್ರ ಮಳೆ ನೀರು ಒಂದಿಷ್ಟು ಪ್ರಮಾಣದಲ್ಲಿ ಹರಿದಿದೆ. ಈ ಕೆರೆಗಳಿಗೆ ಒಳ ಹರಿವು ಹೆಚ್ಚಬೇಕೆಂದರೆ ಚಿಕ್ಕಮಗಳೂರು‌ ಗಿರಿಶ್ರೇಣಿಯಲ್ಲಿ ಹೆಚ್ಚಿನ ಮಳೆಯಾಗಬೇಕಿದೆ. ತಾಲ್ಲೂಕಿನ ಸೀಗೇಹಡ್ಲು ಕೆರೆ ಒಂದೇ ದಿನದ ಮಳೆಗೆ ತುಂಬಿತು. ಏರಿ ಶಿಥಿಲಗೊಂಡಿದ್ದ ಗೌಡನಕಟ್ಟೆ ಹಳ್ಳಿ ಕೆರೆ ಒಂದೇ ದಿನ ಮಳೆಯ ರಭಸಕ್ಕೆ ತುಂಬಿ ಒಡೆದು ಹೋಗಿದೆ. ಅದೇ ನೀರಿನಿಂದ ಪಿ.ಕೋಡಿಹಳ್ಳಿ ಕೆರೆ ಶೇ 35ರಷ್ಟು ತುಂಬಿತು. ಅದು ಬಿಟ್ಟರೆ ಕೆರೆಸಂತೆಯ ವಿಷ್ಣು ಸಮುದ್ರ ಕೆರೆಯಲ್ಲಿ ಶೇ 60 ರಷ್ಟು ನೀರಿದೆ. ಕೆ.ಬಿದರೆ ಬಿಳವಾಲ ಮರವಂಜಿ ಎಂ.ಕೋಡಿಹಳ್ಳಿ ಕುಕ್ಕಸಮುದ್ರ ಕೆರೆಗಳಲ್ಲಿ ಶೇ 10ಕ್ಕಿಂತ ಕಡಿಮೆ ನೀರಿದೆ. 

ತರೀಕೆರೆ ತಾಲ್ಲೂಕಿನ ಲಿಂಗದಹಳ್ಳಿ ಹೋಬಳಿಯ ಉಡೇವು ಗ್ರಾಮದ ಊರು ಮುಂದಿನ ಕೆರೆ ಭರ್ತಿಯಾಗಿರುವುದು

ಸುಧಾರಿಸಿದ ಅಂತರ್ಜಲ ಮಟ್ಟ

ತರೀಕೆರೆ: ಕಳೆದ ತಿಂಗಳಿಂದ ತರೀಕೆರೆ ತಾಲೂಕಿನಾದ್ಯಂತ ಸುರಿಯುತ್ತಿರುವ ಮುಂಗಾರು ಮಳೆ ಸರಾಸರಿಗಿಂತ ತುಸು ಹೆಚ್ಚಾಗಿದೆ. ಇನ್ನು ಈ ಮಳೆಯಿಂದ ಭೂಮಿ ತಂಪಾಗಿದ್ದು ಅಂತರ್ಜಲ ಮಟ್ಟವು ಹೆಚ್ಚಾಗಿದೆ. ಇದರಿಂದ ಬತ್ತಿ ಹೋಗಿದ್ದ ಕೊಳವೆ ಬಾವಿಗಳಲ್ಲಿ ನೀರು ಬರುತ್ತಿರುವುದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ತೀವ್ರ ಬರಗಾಲಕ್ಕೆ ತುತ್ತಾಗಿದ್ದ ತರೀಕೆರೆ ತಾಲೂಕಿನ ಕೆರೆಕಟ್ಟೆಗಳೆಲ್ಲ ಭಾಗಶಃ ಬತ್ತಿ ಹೋಗಿದ್ದವು. ಆದರೆ ಸಣ್ಣಪುಟ್ಟ ಕಟ್ಟೆಗಳನ್ನು ಹೊರತುಪಡಿಸಿದರೆ ಹಿಂದುಳಿದ ಕೆರೆಗಳಿಗೆ ಅಲ್ಪ ಸ್ವಲ್ಪ ನೀರು ಬಂದಿದೆ. ಇನ್ನು ಮುಂಗಾರು ಮತ್ತು ಮಳೆಯಾಶ್ರಿತ ಬೆಳೆಗಳಿಗೆ ಉತ್ತಮ ವಾತಾವರಣ ಉಂಟಾಗಿದ್ದು ಈ ವರ್ಷದಲ್ಲಿ ಉತ್ತಮ ಬೆಳೆ ನಿರೀಕ್ಷೆಯಲ್ಲಿ ರೈತರು ಉಲ್ಲಾಸದಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.