ADVERTISEMENT

ಅತಿಯಾದ ಮಳೆ: ಹೊಲದಲ್ಲೇ ಕೊಳೆತ ಈರುಳ್ಳಿ

ಅಜ್ಜಂಪುರ: ಬೆಳೆಗಾರಿಗೆ ಸಂಕಷ್ಟ

ಜೆ.ಒ.ಉಮೇಶ್ ಕುಮಾರ್
Published 20 ಅಕ್ಟೋಬರ್ 2022, 5:10 IST
Last Updated 20 ಅಕ್ಟೋಬರ್ 2022, 5:10 IST
ಅಜ್ಜಂಪುರ ಸಮೀಪ ಕಾಟಿಗನರೆ ಗೇಟ್ ಬಳಿ ಕಿತ್ತಿರುವ ಈರುಳ್ಳಿ ಸ್ವಚ್ಛಗೊಳಿಸಿ, ಮಾರಾಟ ಮಾಡದೇ ಜಮೀನಿನಲ್ಲಿಯೇ ಬಿಟ್ಟಿರುವುದು
ಅಜ್ಜಂಪುರ ಸಮೀಪ ಕಾಟಿಗನರೆ ಗೇಟ್ ಬಳಿ ಕಿತ್ತಿರುವ ಈರುಳ್ಳಿ ಸ್ವಚ್ಛಗೊಳಿಸಿ, ಮಾರಾಟ ಮಾಡದೇ ಜಮೀನಿನಲ್ಲಿಯೇ ಬಿಟ್ಟಿರುವುದು   

ಅಜ್ಜಂಪುರ (ಚಿಕ್ಕಮಗಳೂರು ಜಿಲ್ಲೆ): ಅತಿಯಾದ ಮಳೆ, ತಾಲ್ಲೂಕಿನ ಈರುಳ್ಳಿ ಬೆಳೆಗೆ ಮಾರಕವಾಗಿ ಪರಿಣಮಿಸಿದೆ.

ಈರುಳ್ಳಿಯು ತಾಲ್ಲೂಕಿನ ಪ್ರಮುಖ ವಾಣಿಜ್ಯ ಬೆಳೆ. ರೈತರ ಆರ್ಥಿಕ ಮೂಲವೂ ಹೌದು.

‘ತಾಲ್ಲೂಕಿನ ಮುಕ್ಕಾಲು ಭಾಗ ಕಪ್ಪು ಭೂಮಿ ಇದ್ದು, ಈರುಳ್ಳಿ ಬೆಳೆಗೆ ಹೇಳಿ ಮಾಡಿಸಿದಂತಿದೆ. ಸಾಧಾರಣ ಮಳೆಯಾದರೆ, ಉತ್ತಮ ಇಳುವರಿ ಬರುತ್ತದೆ. ಹಾಗಾಗಿಯೇ ಶೇ 90 ಕ್ಕಿಂತ ಹೆಚ್ಚಿನ ರೈತರು ಈರುಳ್ಳಿ ಬೆಳೆಯುತ್ತಾರೆ’ ಎನ್ನುತ್ತಾರೆ ಗೌರಾಪುರದ ಈರುಳ್ಳಿ ಬೆಳೆಗಾರ ರವಿ.

ADVERTISEMENT

‘ಈ ಸಲದ ಮಳೆ ವಾಡಿಕೆಗಿಂತ ದುಪ್ಪಟ್ಟಾಯಿತು. ಆರಂಭದಲ್ಲಿಯೇ ಹೆಚ್ಚಾದ ಮಳೆ, ಈರುಳ್ಳಿ ಬೆಳವಣಿಗೆಯನ್ನು ಕುಂಠಿತಗೊಳಿಸಿತು. ಬಳಿಕ ಗಡ್ಡೆ ಹಿಗ್ಗದಂತೆ ಮಾಡಿತು. ಕಡೆಗೆ ಬಂದ ಅಲ್ಪ-ಸ್ವಲ್ಪ ಈರುಳ್ಳಿಯನ್ನು ಹೊಲದಿಂದ ಹೊರತೆಗೆಯಲು, ಸ್ವಚ್ಛಗೊಳಿಸಲು, ಮಾರುಕಟ್ಟೆಗೆ ಕೊಂಡೊಯ್ಯಲು ಅಡ್ಡಿ ಮಾಡಿತು. ಇಂದಿಗೂ ಬೆಳೆದ ಈರುಳ್ಳಿಯನ್ನು ಹೊಲದಲ್ಲಿಯೇ ಬಿಟ್ಟಿದ್ದೇವೆ‘ ಎಂದು ಕೃಷಿಕ ಬಸವರಾಜಪ್ಪ ಬೇಸರ ವ್ಯಕ್ತಪಡಿಸಿದರು.

‘ಈರುಳ್ಳಿ ಬೆಳೆ ಹಾಳಾಗಿದ್ದರಿಂದ ಸಾಲದ ಬಡ್ಡಿ ಕಟ್ಟಲೂ ಹಣವಿಲ್ಲದೇ ಪರದಾಡುತ್ತಿದ್ದೇವೆ’ ಎಂದು ಈರುಳ್ಳಿ ಬೆಳೆಗಾರ ಹೆಬ್ಬೂರು ಶಿವಣ್ಣ ಅಳಲು ತೋಡಿಕೊಂಡರು.

‘ಈರುಳ್ಳಿ ಹೊಲದಲ್ಲಿದೆ. ಮಳೆಯಿಂದ ಗಡ್ಡೆ ಕೊಳೆಯುವ ಹಂತ ತಲುಪಿವೆ. ಮಾರುಕಟ್ಟೆಯಲ್ಲಿ ಬೆಲೆ ಇಲ್ಲ. ಹೊಲದಲ್ಲಿಯೇ ಬಿಟ್ಟರೂ ಅದರಿಂದ ಮುಂದಿನ ಬೆಳೆಗೆ ಹಾನಿಯಾಗುತ್ತದೆ. ಕೃಷಿ ಕಾರ್ಮಿಕರನ್ನು ಕರೆಸಿ, ಗಡ್ಡೆ ಕಿತ್ತು ಹೊರಕ್ಕೆ ಹಾಕಿಸಲು ಸಾಕಷ್ಟು ಖರ್ಚು ಮಾಡಬೇಕಿದೆ’ ಎಂದು ನಾರಣಾಪುರದ ಪವನ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.