ರಂಭಾಪುರಿ ಪೀಠ (ಬಾಳೆಹೊನ್ನೂರು): ಗುಲಾಬಿ ಗಿಡದಲ್ಲಿ ಹೂವಿದೆ, ಹಸಿರಿದೆ, ಮುಳ್ಳೂ ಇದೆ. ಕೆಲವರ ಲಕ್ಷ್ಯ ಹೂವಿನತ್ತ ಇದ್ದರೆ ಮತ್ತೆ ಕೆಲವರ ಲಕ್ಷ್ಯ ಮುಳ್ಳಿನತ್ತ ಇರುತ್ತದೆ. ಈ ಜಗತ್ತು ಗುಲಾಬಿ ಗಿಡದಂತೆ. ಕೆಲವರು ಹೂವಿನ ಸ್ವರೂಪ ಕಂಡರೆ ಕೆಲವರು ಕುರೂಪವನ್ನೇ ಕಾಣುತ್ತಾರೆ. ನೋಡುವ ನೋಟ ಚೆನ್ನಾಗಿದ್ದರೆ ಬದುಕು ಸುಂದರವಾಗಿ ಕಾಣುತ್ತದೆ ಎಂದು ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಹೇಳಿದರು.
ಮಂಗಳವಾರ ರಂಭಾಪುರಿ ಪೀಠದಲ್ಲಿ ರೇಣುಕಾಚಾರ್ಯರಿಗೆ ಹಾಗೂ ಕ್ಷೇತ್ರನಾಥ ವೀರಭದ್ರಸ್ವಾಮಿಗೆ ಶತರುದ್ರಾಭಿಷೇಕ ರಾಜೋಪಚಾರ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಮಾನವ ಜೀವನದ ನಿರಂತರ ಹೋರಾಟದಲ್ಲಿ ದೇಹ, ಮನಸ್ಸು, ಬುದ್ಧಿ ಮಲಿನವಾಗುವುದುಂಟು. ಅವುಗಳನ್ನು ಶ್ರದ್ಧೆಯಿಂದ ನಿರ್ಮಲಗೊಳಿಸುವತ್ತ ಗಮನ ಹರಿಸಬೇಕು. ಜೀವನದ ಸಮೃದ್ಧಿಗೆ, ಸಮಾಧಾನಕ್ಕೆ ದೈವೀ ಗುಣಗಳು ಕಾರಣವಾಗುತ್ತವೆ. ದೈವೀ ಗುಣಗಳನ್ನು ಸಂರಕ್ಷಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ವಿಶ್ವಾಸ ಬದುಕಿಗೆ ಭದ್ರ ಬುನಾದಿ ಒದಗಿಸುತ್ತದೆ.ಉರಿಯುವ ಹಣತೆ ಮಣ್ಣಿನದಾದರೇನು, ಹೊನ್ನಿನದಾದರೇನು. ಉರಿಯುವ ಜ್ಯೋತಿ ಒಂದೇ. ಜಗತ್ತನ್ನು ನಿರ್ಮಿಸಿದ ಪರಮಾತ್ಮ ಒಬ್ಬನೇ. ಆದರೆ ಹೆಸರುಗಳು ಅನಂತವಾಗಿವೆ. ಶಿವನಿಗೆ ಅಭಿಷೇಕ ಬಹಳ ಪ್ರೀತಿ. ಶಿವನಿಗೆ ಜಲಧಾರೆ-ಕ್ಷೀರಾಭಿಷೇಕ ಮಾಡಿ ಮನುಷ್ಯ ಸಂತೃಪ್ತ ಭಾವನೆ ತಾಳುತ್ತಾನೆ. ದೇವರು ಧರ್ಮ ಮತ್ತು ಗುರುವಿನಲ್ಲಿ ಶ್ರದ್ದೆ ಮತ್ತು ನಂಬಿಗೆ ಕಳೆದುಕೊಳ್ಳಬಾರದು ಎಂದರು.
ರೇಣುಕಾಚಾರ್ಯ ಗುರುಕುಲದ ಕುಲಪತಿ ಬೆಳಗಾಲಪೇಟೆ ಹಿರೇಮಠದ ಸಿದ್ಧಲಿಂಗ ಶಾಸ್ತ್ರಿ ಹಾಗೂ ಗುರುಕುಲ ಸಾಧಕರು ಶತರುದ್ರಾಭಿಷೇಕ-ರಾಜೋಪಚಾರ ಪೂಜಾ ಸಂಕಲ್ಪ ನೆರವೇರಿಸಿದರು.
ಪೀಠದ ಆಡಳಿತಾಧಿಕಾರಿ ಎಸ್.ಬಿ.ಹಿರೇಮಠ, ಸಂಪರ್ಕಾಧಿಕಾರಿ ಪ್ರಭುದೇವ ಕಲ್ಮಠ, ಲೆಕ್ಕಾಧಿಕಾರಿ ಸಂಕಪ್ಪನವರ, ಶಿವಪ್ರಕಾಶ ಶಾಸ್ತ್ರಿಗಳು, ಮಧುಕುಮಾರ ಶಾಸ್ತ್ರಿಗಳು, ಚಂದ್ರಶೇಖರಸ್ವಾಮಿ, ರೇಣುಕಸ್ವಾಮಿ, ರವಿ, ರುದ್ರೇಶ, ಗದಿಗೆಯ್ಯ ಹಿರೇಮಠ, ಗಂಗಾಧರ, ಶಿವಕುಮಾರ ಹಿರೇಮಠ, ಕುಮಾರ ಹಿರೇಮಠ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.