ADVERTISEMENT

ರ‍್ಯಾಪಿಡ್‌ ಆ್ಯಂಟಿಜೆನ್‌ ಪರೀಕ್ಷೆ; ತ್ವರಿತ ಫಲಿತಾಂಶ

ಕೋವಿಡ್‌–19: ಆರ್‌ಎಟಿ ಕಿಟ್‌ ಬಳಸಿ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2020, 16:06 IST
Last Updated 23 ಜುಲೈ 2020, 16:06 IST
ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್
ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್   

ಚಿಕ್ಕಮಗಳೂರು: ‘ಕೋವಿಡ್‌–19 ಪರೀಕ್ಷೆಗಾಗಿ ರ‍್ಯಾಪಿಡ್‌ ಆ್ಯಂಟಿಜೆನ್‌ ಪರೀಕ್ಷಾ (ಆರ್‌ಎಟಿ) ಕಿಟ್‌ಗಳನ್ನು ಐದು ದಿನಗಳಿಂದ ಬಳಸಲಾಗುತ್ತಿದೆ. ಈ ಕಿಟ್‌ನಿಂದ ಪರೀಕ್ಷೆ ಮಾಡಿದ ಅರ್ಧ ಗಂಟೆಯಲ್ಲಿ ಫಲಿತಾಂಶ (ಪಾಸಿಟಿವ್‌/ ನೆಗೆಟಿವ್‌) ಗೊತ್ತಾಗುತ್ತದೆ’ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ತಿಳಿಸಿದ್ದಾರೆ.

‘ಆರ್‌ಎಟಿ ಕಿಟ್‌ ತ್ವರಿತವಾಗಿ ಪರೀಕ್ಷೆ ಮಾಡಲು ಸಾಧ್ಯವಾಗುತ್ತಿದೆ. ಪಾಸಿಟಿವ್‌ ಇದ್ದವರಿಗೆ ತಕ್ಷಣವೇ ಚಿಕಿತ್ಸೆ ನೀಡಲು ಅನುಕೂಲವಾಗಿದೆ. ವ್ಯಕ್ತಿಗೆ ಸೋಂಕಿನ ಲಕ್ಷಣಗಳಿದ್ದು, ರ‍್ಯಾಪಿಡ್‌ ಆ್ಯಂಟಿಜೆನ್‌ ಪರೀಕ್ಷೆಯಲ್ಲಿ ನೆಗೆಟಿವ್‌ ಬಂದಿದ್ದರೆ, ಮಾದರಿಯನ್ನು ಆರ್‌ಟಿಪಿಸಿಆರ್‌ (ರಿವರ್ಸ್‌ ಟ್ರಾನ್ಸ್‌ಸ್ಕ್ರಿಪ್ಶನ್‌ ಪಾಲಿಮರೇಸ್‌ ಚೈನ್‌ ರಿಯಾಕ್ಷನ್‌) ಪರೀಕ್ಷೆ ಖಾತ್ರಿ ಪಡಿಸಿಕೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ.

ಶೀತ ಜ್ವರ ಮಾದರಿ (ಐಎಲ್‌ಐ), ತೀವ್ರ ಉಸಿರಾಟದ ತೊಂದರೆ (ಎಸ್‌ಎಆರ್‌ಐ) ತೊಂದರೆ ಇರುವವರು, ಕೋವಿಡ್‌ ದೃಢಪಟ್ಟಿರುವವರ ಪ್ರಾಥಮಿಕ ಸಂಪರ್ಕದಲ್ಲಿದ್ದವರು, ದ್ವಿತೀಯ ಸಂಪರ್ಕದಲ್ಲಿದ್ದವರನ್ನು (ಸೋಂಕಿನ ಲಕ್ಷಣಗಳಿರುವವರು) ಈ ಕಿಟ್‌ಗಳನ್ನು ಬಳಸಿ ಪರೀಕ್ಷೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಗರ್ಭಿಣಿ, ಬಾಣಂತಿಯರು, ಗಂಭೀರ ಕಾಯಿಲೆ ಇರುವವರನ್ನು ಈ ಕಿಟ್‌ ಬಳಸಿ ಪರೀಕ್ಷೆ ಮಾಡಲಾಗುತ್ತಿದೆ. ಸೋಂಕು ಪತ್ತೆ ಪರೀಕ್ಷಾ ಪ್ರಮಾಣ ಹೆಚ್ಚಿಸಲಾಗಿದೆ. ಜಿಲ್ಲೆಯಲ್ಲಿ ಐದಾರು ದಿನಗಳಿಂದ ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ ಎಂದು ಅವರು ತಿಳಿಸಿದ್ದಾರೆ.

3200 ಕಿಟ್‌ ಪೂರೈಕೆ: ಡಿಎಚ್‌ಒ
ಜಿಲ್ಲೆಗೆ ಕಳೆದ ವಾರ 2,000 ಕಿಟ್‌ ಒದಗಿಸಿದ್ದರು, ಎಲ್ಲ ಖಾಲಿಯಾಗಿವೆ. ಈ ವಾರ ಮತ್ತೆ 3,200 ಕಿಟ್‌ ಪೂರೈಸಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಉಮೇಶ್‌ ತಿಳಿಸಿದ್ದಾರೆ.

‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ಈ ಕಿಟ್‌ನಿಂದ ವೇಗವಾಗಿ ವರದಿ ಪಡೆಯಬಹುದಾಗಿದೆ. ಎಲ್ಲ ತಾಲ್ಲೂಕುಗಳಿಗೂ ಕೊಟ್ಟಿದ್ದೆವು. ಈಗಲೂ ಎಲ್ಲ ತಾಲ್ಲೂಕುಗಳಿಗೆ ಕಿಟ್‌ಗಳನ್ನು ಒದಗಿಸುತ್ತೇವೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.