ADVERTISEMENT

ಚಿಕ್ಕಮಗಳೂರು ವೈದ್ಯಕೀಯ ಕಾಲೇಜಿಗೆ ಬೋಧಕರ ನೇಮಕಾತಿ: ಸಂದರ್ಶನ ಮತ್ತೆ ಮುಂದೂಡಿಕೆ

ಬಿ.ಜೆ.ಧನ್ಯಪ್ರಸಾದ್
Published 22 ಅಕ್ಟೋಬರ್ 2021, 5:02 IST
Last Updated 22 ಅಕ್ಟೋಬರ್ 2021, 5:02 IST
ಚಿಕ್ಕಮಗಳೂರು ತಾಲ್ಲೂಕಿನ ತೇಗೂರು ಬಳಿ ವೈದ್ಯಕೀಯ ವಿಜ್ಞಾನ ಕಾಲೇಜು ಕಟ್ಟಡ ಕಾಮಗಾರಿ ನಡೆಯುತ್ತಿದೆ.
ಚಿಕ್ಕಮಗಳೂರು ತಾಲ್ಲೂಕಿನ ತೇಗೂರು ಬಳಿ ವೈದ್ಯಕೀಯ ವಿಜ್ಞಾನ ಕಾಲೇಜು ಕಟ್ಟಡ ಕಾಮಗಾರಿ ನಡೆಯುತ್ತಿದೆ.   

ಚಿಕ್ಕಮಗಳೂರು: ಜಿಲ್ಲೆಗೆ ಮಂಜೂರಾಗಿರುವ ವೈದ್ಯಕೀಯ ವಿಜ್ಞಾನ ಕಾಲೇಜಿಗೆ ಬೋಧಕ ಸಿಬ್ಬಂದಿ ನೇಮಕಾತಿಗೆ ನಿಗದಿಪಡಿಸಿದ್ದ ಸಂದರ್ಶನ ವೇಳಾಪಟ್ಟಿಯನ್ನು ಮೂರನೆಯ ಬಾರಿಗೆ ಮುಂದೂಡಲಾಗಿದೆ.

ಸಂದರ್ಶನಕ್ಕೆ ಅ.7ರಿಂದ 12ರವರೆಗೆ ವೇಳಾಪಟ್ಟಿ ಪ್ರಕಟಿಸಲಾಗಿತ್ತು. ಬೆಂಗಳೂರಿನ ಶಿವಾಜಿನಗರದ ಅಟಲ್‌ ಬಿಹಾರಿ ವಾಜಪೇಯಿ ವೈದ್ಯಕೀಯ ವಿಜ್ಞಾನ ವಿದ್ಯಾಲಯದಲ್ಲಿ ಸ್ಥಳ ನಿಗದಿಪಡಿಸಲಾಗಿತ್ತು. ಆದರೆ, ಈ ಪ್ರಕ್ರಿಯೆಯನ್ನು ದಿಢೀರನೆ ಮುಂದೂಡಲಾಗಿದೆ. ಮುಂದಿನ ವೇಳಾಪಟ್ಟಿಯನ್ನು ಶೀಘ್ರದಲ್ಲೇ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗವುದು ಎಂದು ಅಭ್ಯರ್ಥಿಗಳಿಗೆ ತಿಳಿಸಲಾಗಿದೆ.

ಮೊದಲು ಜೂನ್‌ನಲ್ಲಿ ಸಂದರ್ಶನ ನಡೆಸಲು ವೇಳಾಪಟ್ಟಿ ಪ್ರಕಟಿಸಲಾಗಿತ್ತು. ಆದರೆ, ಕೋವಿಡ್‌ –19 ಕಾರಣದಿಂದ ಮುಂದೂಡಲಾಗಿತ್ತು. ಮತ್ತೆ ಸೆಪ್ಟೆಂಬರ್‌ನಲ್ಲಿ ಎರಡನೆಯ ಬಾರಿ ವೇಳಾಪಟ್ಟಿ ಪ್ರಕಟಿಸಲಾಗಿತ್ತು. ಕಾರಣಾಂತರಗಳಿಂದ ಅದನ್ನೂ ಮುಂದೂಡಲಾಗಿತ್ತು. ಇದೀಗ ಮೂರನೆಯ ಬಾರಿಯೂ ಸಂದರ್ಶನ ವೇಳಾಪಟ್ಟಿ ಮುಂದೂಡಲಾಗಿದೆ.

ADVERTISEMENT

ಚಿಕ್ಕಮಗಳೂರು ವೈದ್ಯಕೀಯ ವಿಜ್ಞಾನ ವಿದ್ಯಾಲಯಕ್ಕೆ 81 ವಿವಿಧ ಹುದ್ದೆಗಳ (ಬೋಧಕ, ಇತರೆ) ನೇರ ನೇಮಕಾತಿಗೆ ಮೇನಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಿರುವ ಆಕಾಂಕ್ಷಿಗಳು 5 ತಿಂಗಳಿಂದ ಸಂದರ್ಶನದ ನಿರೀಕ್ಷೆಯಲ್ಲಿ ಇದ್ದಾರೆ.

‘ಸಂದರ್ಶನಕ್ಕೆ ತಯಾರಿ ನಡೆಸಿದ್ದೆ. ಈಗ ಇದ್ದಕ್ಕಿದ್ದಂತೆ ಮುಂದೂಡಿದ್ದಾರೆ. ವೇಳಾಪಟ್ಟಿ ನಿಗದಿಪಡಿಸಿ ಪದೇ ಪದೇ ಮುಂದೂಡುತ್ತಿದ್ದಾರೆ. ಅರ್ಜಿ ಸಲ್ಲಿಸಿ ಐದು ತಿಂಗಳಾಗಿದೆ. ಸಂಬಂಧಪಟ್ಟವರು ತ್ವರಿತವಾಗಿ ಪ್ರಕ್ರಿಯೆ ನಡೆಸಲು ಕ್ರಮ ವಹಿಸಬೇಕು’ ಎಂದು ಅರ್ಜಿ ಸಲ್ಲಿಸಿರುವ ಅಭ್ಯರ್ಥಿಯೊಬ್ಬರು ಮನವಿ ಮಾಡಿದರು.

ನಗರದ ಮಧುವನ ಬಡಾವಣೆಯ ಕೆಎಸ್‌ಒಯು ಪ್ರಾದೇಶಿಕ ಕಚೇರಿ ಕಟ್ಟಡದಲ್ಲಿ ತಾತ್ಕಾಲಿಕವಾಗಿ ವೈದ್ಯಕೀಯ ಕಾಲೇಜಿನ ತರಗತಿಗಳನ್ನು ಆರಂಭಿಸಲು ಸಿದ್ಧತೆ ನಡೆದಿದೆ. ಪ್ರಯೋಗಾಲಯ, ವಿದ್ಯಾರ್ಥಿಗಳಿಗೆ ವಸತಿ ನಿಲಯ ತೆರೆಯುವ ನಿಟ್ಟಿನಲ್ಲಿ ತಯಾರಿ ನಡೆದಿದೆ.

ಜಿಲ್ಲೆಗೆ ಕೇಂದ್ರ ಪುರಸ್ಕೃತ ಯೋಜನೆಯಡಿ ವೈದ್ಯಕೀಯ ವಿಜ್ಞಾನ ಕಾಲೇಜು ಮಂಜೂರಾಗಿದೆ. 60:40ರ ಅನುಪಾತದಲ್ಲಿ ಕೇಂದ್ರ ಸರ್ಕಾರದಿಂದ ₹ 195 ಕೋಟಿ ಹಾಗೂ ರಾಜ್ಯ ಸರ್ಕಾರದಿಂದ ₹ 130 ಕೋಟಿ ಸೇರಿ ಒಟ್ಟು ₹ 325 ಕೋಟಿ ಅನುದಾನ ಮಂಜೂರಾಗಿದೆ.

ತಾಲ್ಲೂಕಿನ ಕಸಬಾ ಹೋಬಳಿಯ ತೇಗೂರು ಬಳಿಯ ಸರ್ವೆ ನಂಬರ್‌ 138, 192, 193ರಲ್ಲಿ 30.5 ಎಕರೆ ಜಾಗವನ್ನು ವೈದ್ಯಕೀಯ ವಿಜ್ಞಾನ ಕಾಲೇಜಿಗೆ ನಿಗದಿಪಡಿಸಲಾಗಿದೆ. ಕಟ್ಟಡ ನಿರ್ಮಾಣ ಕಾಮಗಾರಿ ಆರಂಭವಾಗಿದೆ.

‘ಚಿಕ್ಕಮಗಳೂರಿನಲ್ಲೇ ಸಂದರ್ಶನ’

‘ಸಂದರ್ಶನವನ್ನು ಚಿಕ್ಕಮಗಳೂರಿನಲ್ಲೇ ನಡೆಸುವಂತೆ ವೈದ್ಯಕೀಯ ಶಿಕ್ಷಣ ಇಲಾಖೆ ಕಾರ್ಯದರ್ಶಿ ಸೂಚನೆ ನೀಡಿದ ಮೇರೆಗೆ ಪ್ರಕ್ರಿಯೆ ಮುಂದೂಡಲಾಗಿದೆ. ಮುಂದಿನ ವೇಳಾಪಟ್ಟಿಯನ್ನು ಶೀಘ್ರದಲ್ಲಿ ಪ‍್ರಕಟಿಸಲಾಗುವುದು’ ಎಂದು ಚಿಕ್ಕಮಗಳೂರು ವೈದ್ಯಕೀಯ ವಿಜ್ಞಾನ ಕಾಲೇಜಿನ ನಿರ್ದೇಶಕಿ ಡಾ.ಎಸ್‌.ಮೀರಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಂದರ್ಶನ ನಿಟ್ಟಿನಲ್ಲಿ ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ. ವಸತಿ ನಿಲಯ, ಮೈದಾನ ಎಲ್ಲವನ್ನೂ ತಾತ್ಕಾಲಿಕವಾಗಿ ವ್ಯವಸ್ಥೆ ಮಾಡಿಕೊಂಡಿದ್ದೇವೆ’ ಎಂದು ಅವರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.