ಕೊಪ್ಪ: ಪರಿಸರದ ಮೇಲೆ ದುಷ್ಪರಿಣಾಮ ಬೀರದ ನವೀಕರಿಸಬಹುದಾದ ಇಂಧನ ಶಕ್ತಿ ಬಳಕೆಗೆ ಹೆಚ್ಚು ಆದ್ಯತೆ ನೀಡಬೇಕು ಎಂದು ಭದ್ರಾ ಕಾಡಾ ನಿಗಮದ ಅಧ್ಯಕ್ಷ ಕೆ.ಪಿ.ಅಂಶುಮಂತ್ ಹೇಳಿದರು.
ಪಟ್ಟಣದಲ್ಲಿನ ಯಸ್ಕಾನ್ ಸಭಾಂಗಣದಲ್ಲಿ ಶುಕ್ರವಾರ ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿ(ಬಿ.ಇ.ಇ), ಭಾರತ ಸರ್ಕಾರದ ಇಂಧನ ಮಂತ್ರಾಲಯದ ಸ್ಟ್ಯಾಂಡರ್ಡ್ ಮತ್ತು ಲೇಬಲಿಂಗ್ ಯೋಜನೆಯಡಿ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ ಆಯೋಜಿಸಿದ್ದ ‘ವಿದ್ಯುತ್ ಹಾಗೂ ವಿದ್ಯುನ್ಮಾನ ಉಪಕರಣ ವ್ಯಾಪಾರಿಗಳ ತರಬೇತಿ ಕಾರ್ಯಕ್ರಮ’ದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವ್ಯವಸ್ಥೆ ಹಂತಹಂತವಾಗಿ ಆಧುನೀಕರಣಗೊಳ್ಳುವ ಹೊತ್ತಿನಲ್ಲಿ 2006ರಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ, ನವೀಕರಿಸುವ ಇಂಧನ ಅಭಿವೃದ್ಧಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿ ಆರಂಭಿಸಿದರು. ನವೀಕರಿಸಬಹುದಾದ ಇಂಧನ ಅಭಿವೃದ್ಧಿ (ಕ್ರೆಡೆಲ್) ನಿಗಮದ ಅಧ್ಯಕ್ಷರಾಗಿ ಶಾಸಕ ರಾಜೇಗೌಡ ಅವರು ಪ್ರಪಂಚದ ತಂತ್ರಜ್ಞಾನವನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದಾರೆ ಎಂದರು.
‘ಗ್ರಾಹಕ ಮತ್ತು ಅಂಗಡಿ ಮಾಲೀಕ ಒಳ್ಳೆಯ ಬಾಂಧವ್ಯ ಹೊಂದಬೇಕು. ಅಂಗಡಿ ಮಾಲೀಕರು ಕೇವಲ ವ್ಯಾವಹಾರಿಕ ಆಧಾರದಲ್ಲಿ ನೋಡಬಾರದು. ಗ್ರಾಹಕರಿಗೆ ಗುಣಮಟ್ಟದಿಂದ ಕೂಡಿದ ಹಾಗೂ ಕಡಿಮೆ ಬೆಲೆಯಲ್ಲಿ ವಸ್ತು ತಲುಪಿಸಬೇಕು. ಈ ಹಿಂದೆ ಇಂಧನ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ಅವರು, ಇಂಧನ ಇಲಾಖೆಯಲ್ಲಿ ಕ್ರಾಂತಿ ರೀತಿಯಲ್ಲಿ ಸೋಲಾರ್ ಶಕ್ತಿಗೆ ಉತ್ತೇಜನ ನೀಡಿದರು. ಮುಂದುವರಿದ ಭಾಗವಾಗಿ ಕೆ.ಜೆ.ಜಾರ್ಜ್ ಅಭಿವೃದ್ಧಿಗೆ ಆದ್ಯತೆ ಕೊಟ್ಟಿದ್ದಾರೆ. ಸರ್ಕಾರ ಸಾಮಾನ್ಯ ಜನರಿಗೆ ರೂಪಿಸುವ ಒಳ್ಳೆಯ ಕಾರ್ಯಕ್ರಮವನ್ನು ನಕಾರಾತ್ಮಕವಾಗಿ ಮಾತನಾಡಬಾರದು’ ಎಂದರು.
ಕಾರ್ಯಕ್ರಮ ಅನುಷ್ಠಾನ ಎಜೆನ್ಸಿ ಡಿ.ಟು.ಒ ಸಂಸ್ಥೆಯ ಪ್ರೀತಿ ಗುಪ್ತಾ ಮಾತನಾಡಿ, ‘ನವೀಕರಿಸಬಹುದಾದ ಇಂಧನ ಬಳಕೆ ಇದೊಂದು ಆಯ್ಕೆ ಅಲ್ಲ, ಬದಲಿಗೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಗ್ರಾಹಕರೊಂದಿಗೆ ಅಂಗಡಿ ಮಾಲೀಕರು ಪ್ರಾಥಮಿಕ ಸಂಪರ್ಕ ಹೊಂದಿರುತ್ತಾರೆ. ಗ್ರಾಹಕರಿಗೆ ಶಕ್ತಿ ಉಳಿತಾಯ ಉಪಕರಣದ ಬಗ್ಗೆ ಗೊತ್ತಿರುವುದಿಲ್ಲ, ಅಂಗಡಿ ಮಾಲೀಕರು ಈ ಮಾಹಿತಿ ನೀಡಬೇಕು. 5 ಸ್ಟಾರ್ ವಸ್ತುಗಳನ್ನು ಬಳಸುವುದು ದುಬಾರಿ ಎನಿಸಿದರೂ ಕೂಡ ಹೂಡಿಕೆ ಹಣ ಎರಡು ವರ್ಷಗಳಲ್ಲಿ ವಾಪಾಸ್ ಬಂದಿರುತ್ತದೆ’ ಎಂದರು.
ಶಿವಮೊಗ್ಗದ ಜೆಎಂಎನ್ ಕಾಲೇಜು ಪ್ರಾಧ್ಯಾಪಕ ಪ್ರೊ.ಸುರೇಶ್ ಅವರು, ವಿದ್ಯುತ್ ಶಕ್ತಿ ಉಳಿತಾಯ ಮಾಡುವ ಉಪಕರಣ ಮತ್ತು ಅವುಗಳ ಬಳಕೆ ಕುರಿತು ಉಪನ್ಯಾಸ ನೀಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವೀಂದ್ರ ಕುಕ್ಕುಡಿಗೆ, ಎಪಿಎಂಸಿ ಅಧ್ಯಕ್ಷ ರಾಜೇಂದ್ರ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಚ್.ಎಸ್.ಇನೇಶ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎನ್.ಆರ್.ಪುರದ ಸದಾಶಿವ, ಬಗರ್ ಹುಕುಂ ಸಮಿತಿ ಸದಸ್ಯೆ ಅನ್ನಪೂರ್ಣ ನರೇಶ್, ನುಗ್ಗಿ ಮಂಜುನಾಥ್, ಗ್ಯಾರಂಟಿ ಸಮಿತಿ ಅಧ್ಯಕ್ಷ ಓಣಿತೋಟ ರತ್ನಾಕರ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಸುಂದ್ರೇಶ್, ಕೆಡಿಪಿ ಸದಸ್ಯರಾದ ರಾಜಶಂಕರ್, ಬಿ.ಪಿ.ಚಿಂತನ್, ತಾಲ್ಲೂಕು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಸಿ.ರಾಜೇಂದ್ರ, ಕ್ರೆಡೆಲ್‌ನ ಸರಳ, ಗೀತಾ, ಮೆಸ್ಕಾಂ ಇಲಾಖೆ ಅಧಿಕಾರಿಗಳು, ವಿದ್ಯುತ್ ಉಪಕರಣ ಮಾರಾಟಗಾರರು ಭಾಗವಹಿಸಿದ್ದರು.
ವಿದ್ಯುತ್ ಉಳಿತಾಯ ಮುಖ್ಯ
ಈ ಹಿಂದೆ ಮೂಲಭೂತ ಸೌಕರ್ಯಗಳಲ್ಲಿ ಗಾಳಿ ನೀರು ಆಹಾರ ಅಷ್ಟೇ ಇತ್ತು. ಆದರೆ ಈಗ ವಿದ್ಯುತ್ ಕೂಡ ಮೂಲಭೂತ ಸೌಕರ್ಯಗಳಲ್ಲಿ ಒಂದಾಗಿದೆ. ಮನುಷ್ಯನ ಹುಟ್ಟಿನಿಂದ ಅಂತ್ಯದವರೆಗೆ ವಿದ್ಯುತ್ ಬಳಕೆ ಅತ್ಯಂತ ಅವಶ್ಯ. ಆದ್ದರಿಂದ ವಿದ್ಯುತ್ ಉಳಿತಾಯ ಮುಖ್ಯವಾಗಿದೆ. ಗ್ರಾಹಕರಿಗೆ 5 ಸ್ಟಾರ್ ಹೊಂದಿರುವ ವಿದ್ಯುತ್ ಉಪಕರಣ ಬಳಸಲು ಮಾಹಿತಿ ನೀಡುವ ಮೂಲಕ ವಿದ್ಯುತ್ ಉಳಿತಾಯ ಮಾಡಲು ಇಲಾಖೆ ಜತೆಗೆ ಕೈ ಜೋಡಿಸಬೇಕು ಎಂದು ಮೆಸ್ಕಾಂ ಕಾರ್ಯಪಾಲಕ ಎಂಜಿನಿಯರ್ ಸಿದ್ದೇಶ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.