
ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದಿಂದ ₹77.17 ಕೋಟಿ ಲಾಭಾಂಶದ ಚೆಕ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಸ್ತಾಂತರಿಸಲಾಯಿತು.
ನರಸಿಂಹರಾಜಪುರ: ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮವು 2024–25ನೇ ಸಾಲಿನಲ್ಲಿ ₹421.88 ಕೋಟಿ ವಹಿವಾಟು ನಡೆಸಿದ್ದು, ತೆರಿಗೆ ಪಾವತಿಸಿದ ನಂತರ ₹ 257.25 ಕೋಟಿ ಲಾಭ ಗಳಿಸಿದೆ ಎಂದು ನಿಗಮದ ಅಧ್ಯಕ್ಷ ಹಾಗೂ ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಿಗಮವು ಗಳಿಸಿದ ಲಾಭದಲ್ಲಿ ಸರ್ಕಾರಕ್ಕೆ ₹77.17 ಕೋಟಿ ಲಾಭಾಂಶದ ಚೆಕ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಸ್ತಾಂತರಿಸಲಾಗಿದೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ₹5 ಕೋಟಿ ನೀಡಲಾಗಿದೆ ಎಂದರು.
ಕಳೆದ ವರ್ಷಕ್ಕಿಂತ ಪ್ರಸಕ್ತ ಸಾಲಿನಲ್ಲಿ ಎರಡರಷ್ಟು ಲಾಭವಾಗಿದೆ. ನವೀಕರಿಸಹುದಾದ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷನಾಗಿ ಎರಡು ವರ್ಷ ಪೂರೈಸಿದ್ದು ನೀಡಿದ್ದ ಜವಾಬ್ಧಾರಿಯನ್ನು ಸಮರ್ಪವಾಗಿ ನಿರ್ವಹಿಸಿದ್ದೇನೆ. ಕಳೆದ ವರ್ಷ ಸೋಲಾರ್ ಇಂಧನ ಉತ್ಪಾದನೆಯ ಕಾರ್ಯ ನಿರ್ವಹಣೆಯಲ್ಲಿ ದೇಶದಲ್ಲಿಯೇ ರಾಜ್ಯ ಪ್ರಥಮ ಸ್ಥಾನ ಪಡೆದಿತ್ತು. ಈ ವರ್ಷವೂ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರ ಸಹಕಾರದೊಂದಿಗೆ ಕೆಲಸ ಮಾಡಿದ್ದು ಉತ್ತಮ ನಿರ್ವಹಣೆಗೆ ಪ್ರಥಮ ಸ್ಥಾನ ಪಡೆದು ರಾಷ್ಟ್ರಪತಿಗಳಿಂದ ಪ್ರಶಸ್ತಿ ಪತ್ರ ಪಡೆದಿದ್ದೇವೆ ಎಂದರು.
ಕೇಂದ್ರ ಸರ್ಕಾರದ ಶೇ 30ರಷ್ಟು ಹಾಗೂ ರಾಜ್ಯ ಸರ್ಕಾರದ ಶೇ 50ರಷ್ಟು ಸಹಾಯಧನ ಸೇರಿ ಶೇ 80ರಷ್ಟು ಸಹಾಯಧನದೊಂದಿಗೆ 40 ಸಾವಿರ ಫಲಾನುಭವಿಗಳಿಗೆ ಎರಡೂವರೆ ಎಚ್.ಪಿ. ಸೋಲಾರ್ ಪಂಪ್‌ಸೆಟ್ ನೀಡುವ ತೀರ್ಮಾನ ತೆಗೆದುಕೊಳ್ಳಲಾಗಿದೆ. ಇಂಧನ ಇಲಾಖೆಯಲ್ಲಿ ಸಚಿವ ಕೆ.ಜೆ.ಜಾರ್ಜ್ ಅನೇಕ ಬದಲಾವಣೆ ತರುತ್ತಿದ್ದಾರೆ. ಹಿಂದೆ ಸರ್ಕಾರದಲ್ಲಿ ಇಂಧನ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ಅವರು ಪಾವಗಡದಲ್ಲಿ ದೊಡ್ಡ ಸೋಲಾರ್ ಪಾರ್ಕ್ ನಿರ್ಮಿಸಿದ್ದರು. ಈ ಬಾರಿ 250 ಮೆಗಾವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದನೆ ಪಾರ್ಕ್ ಪ್ರಾರಂಭಿಸಲಾಗುತ್ತಿದೆ. 11 ಸಾವಿರ ಮೆಗಾವ್ಯಾಟ್ ಸಾಮರ್ಥ್ಯದ ಬೆಸ್ ಶೇಖರಣ ಘಟಕ ಸಹ ಆರಂಭಿಸಲಾಗುತ್ತಿದೆ. 2 ಸಾವಿರ ಮೆಗಾ ವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದನೆಗೆ ಕೆಇಆರ್‌ಸಿಗೆ ಪ್ರಸ್ತಾವ ಸಲ್ಲಿಸಲಾಗಿದೆ. 2030ಕ್ಕೆ ರಾಜ್ಯಕ್ಕೆ ಎಷ್ಟು ವಿದ್ಯುತ್ ಬೇಕಾಗಲಿದೆ ಎಂಬ ಸಮೀಕ್ಷೆ ಮಾಡಲಾಗಿದ್ದು ಪ್ರತಿ ನಿತ್ಯ 50 ಗಿಗಾ ವ್ಯಾಟ್ ವಿದ್ಯುತ್ ಬೇಕಾಗಲಿದೆ ಎಂದು ಅಂದಾಜಿಸಲಾಗಿದೆ ಎಂದರು.
ಕಾಂಗ್ರೆಸ್ ಮುಖಂಡರಾದ ಬಿ.ವಿ.ಉಪೇಂದ್ರ, ಎಚ್.ಎಂ.ಮನು, ಪ್ರಶಾಂತ್ ಶೆಟ್ಟಿ, ಎಂ.ಆರ್.ರವಿಶಂಕರ್, ಜುಬೇದಾ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.