ಚಿಕ್ಕಮಗಳೂರು: ಗಣರಾಜ್ಯೋತ್ಸವ ಕೇವಲ ಸಂಭ್ರಮದ ದಿನ ಮಾತ್ರವಲ್ಲ. ಭಾರತೀಯರ ಪಾಲಿಗೆ ಆತ್ಮಾವಲೋಕನ ಹಾಗೂ ಸಂಕಲ್ಪದ ಸುದಿನ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಹೇಳಿದರು.
ಜಿಲ್ಲಾಡಳಿತದ ವತಿಯಿಂದ ನಗರದ ನೇತಾಜಿ ಸುಭಾಷ್ ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಪರಕೀಯರ ಆಡಳಿತದ ಮುಷ್ಠಿಯಲ್ಲಿದ್ದ ಭಾರತ ಹಲವು ಮಹನೀಯರ ಹೋರಾಟ, ಪ್ರಾಣ ತ್ಯಾಗ, ಬಲಿದಾನದ ಫಲವಾಗಿ ಸ್ವಾತಂತ್ರ್ಯಗೊಂಡಿತು. ಸ್ವಾತಂತ್ರ್ಯ ಬಳಿಕ ದೇಶದಲ್ಲಿ ಆಹಾರದ ಕೊರತೆ, ಧಾರ್ಮಿಕ ಸಂಘರ್ಷ ಮನೆ ಮಾಡಿತ್ತು. ವಿಶಿಷ್ಟ ನೆಲ, ಜಲ, ಸಂಸ್ಕೃತಿ ಭಾಷೆಯನ್ನು ಹೊಂದಿರುವ ಭಾರತದಲ್ಲಿ ಪ್ರಬಲ ಕಾನೂನು ವ್ಯವಸ್ಥೆ ಅಗತ್ಯವಿತ್ತು. ಇದನ್ನು ಮನಗಂಡ ಅಂದಿನ ಪ್ರಧಾನಿ ಜವಾಹರ್‌ಲಾಲ್ ನೆಹರೂ ಅವರು ಬಿ.ಆರ್.ಅಂಬೇಡ್ಕರ್ ನೇತೃತ್ವದ ಸಂವಿಧಾನ ಕರಡು ಸಮಿತಿ ರಚನೆ ಮಾಡಿದರು. ಬಳಿಕ ಅರ್ಥಪೂರ್ಣ ಲಿಖಿತ ಸಂವಿಧಾನ ರಚನೆಯಾಗಿ 1950ರ ಜ.26 ರಂದು ಅಂಗೀಕರಿಸಿ ಸಮರ್ಪಣೆ ಮಾಡಿಕೊಳ್ಳಲಾಯಿತು ಎಂದರು.
ಭಾರತ ಸಂವಿಧಾನ ದೇಶದ ಎಲ್ಲ ನಾಗರಿಕರಿಗೆ ಸಮಾನ ಹಕ್ಕು ಮತ್ತು ಅವಕಾಶ ಕಲ್ಪಿಸುವುದರ ಜತೆಗೆ ಪ್ರಬಲ ಪ್ರಜಾಪ್ರಭುತ್ವ ರಾಷ್ಟ್ರ ನಿರ್ಮಾಣಕ್ಕೆ ಕಾರಣವಾಗಿದೆ. 75 ವರ್ಷ ತುಂಬಿದ ಗಣರಾಜ್ಯೋತ್ಸವದ ಮಹಾ ಸಂಭ್ರಮದ ದಿನ ಪ್ರತಿ ಭಾರತೀಯನ ಪಾಲಿಗೂ ಆತ್ಮಾವಲೋಕನ ಹಾಗೂ ಸಂಕಲ್ಪದ ಸುದಿನ. ಭೂತಕಾಲದ ಪರಂಪರೆ, ವರ್ತಮಾನದ ಸಮಸ್ಯೆ, ಭವಿಷ್ಯತ್ತಿನ ಕನಸು ಈ ತ್ರಿಕಾಲ ಜ್ಞಾನ ದೇಶದ ಸುಭಿಕ್ಷೆಗೆ ದಾರಿ ದೀಪವಾಗಿದೆ ಎಂದರು.
ಸಂವಿಧಾನ ಅಳವಡಿಸಿಕೊಂಡು 75 ವರ್ಷ ತುಂಬಿದ ಸಂಭ್ರಮದ ಕಾರಣ ಅದರ ಮಹತ್ವ, ಆಚರಣೆ ಕುರಿತು ಜಾಗೃತಿ ಮೂಡಿಸಲು ಸರ್ಕಾರದಿಂದ ಸಂವಿಧಾನ ಜಾಗೃತಿ ಜಾಥಾಗೆ ಚಾಲನೆ ದೊರೆತಿದೆ. ಇದರ ಸ್ತಬ್ದ ಚಿತ್ರವು ಆಯ್ದ ಗ್ರಾಮಪಂಚಾಯಿತಿಗಳಿಗೆ ಆಗಮಿಸಲಿದೆ. ಜನಪ್ರತಿನಿಧಿಗಳು, ಶಾಲಾ–ಕಾಲೇಜು ವಿದ್ಯಾರ್ಥಿಗಳು, ಸಂಘಟನೆಗಳ ಮುಖಂಡರು ಸಾರ್ವಜನಿಕರು ಸ್ವಾಗತಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಿದರು.
ಚುನಾವಣೆ ವೇಳೆ ನೀಡಿದ್ದ ಭರವಸೆಯಂತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಐದು ಗ್ಯಾರಂಟಿ ಯೋಜನೆಗಳಾದ ಗೃಹಜ್ಯೋತಿ, ಗೃಹಲಕ್ಷ್ಮೀ, ಉಚಿತ ಬಸ್ ಪ್ರಯಾಣದ ಶಕ್ತಿ, ಅನ್ನಭಾಗ್ಯ ಮತ್ತು ಯುವನಿಧಿ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ. ಈ ಮೂಲಕ ಆರ್ಥಿಕವಾಗಿ ಹಿಂದುಳಿದ ಎಲ್ಲ ವರ್ಗಗಳ ಸಬಲೀಕರಣಕ್ಕೆ ಶ್ರಮಿಸಲಾಗುತ್ತಿದೆ. ಆಡಳಿತದಲ್ಲಿ ಪಾರದರ್ಶಕತೆ ಕಾಪಾಡಲು ಜಿಲ್ಲಾಡಳಿತ ಇ–ಕಚೇರಿ ಆರಂಭಿಸಲಾಗಿದೆ. ಜಿಲ್ಲೆಯ ಬರಘೋಷಿತ ತಾಲ್ಲೂಕುಗಳಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರು, ಮೇವಿನ ತೊಂದರೆಯಾಗದಂತೆ ಕ್ರಮವಹಿಸಿ ಅನುದಾನ ಒದಗಿಸಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳು, ವಿವಿಧ ಸಮಾಜ ಸೇವೆ ಒಳಗೊಂಡ ಕ್ಷೇತ್ರಗಳ ಜಿಲ್ಲೆಯ ಸಾಧಕರು, ಸಂಘ–ಸಂಸ್ಥೆಗಳನ್ನು ಅಭಿನಂದಿಸಿ ಗೌರವಿಸಲಾಯಿತು. ಕಾರ್ಯಕ್ರಮದ ಬಳಿಕ ‘ಸಂವಿಧಾನ ಜಾಗೃತಿ ಜಾಥಾ’ ಯಾತ್ರೆಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಚಾಲನೆ ನೀಡಿದರು.
ಶಾಸಕ ಎಚ್.ಡಿ ತಮ್ಮಯ್ಯ, ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ, ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಜಿಲ್ಲಾಧಿಕಾರಿ ಮೀನಾನಾಗರಾಜ್, ಜಿಲ್ಲಾಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿ.ಗೋಪಾಲಕೃಷ್ಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ ಅಮಟೆ ಪಾಲ್ಗೊಂಡಿದ್ದರು.
ಆಕರ್ಷಕ ಪಥ ಸಂಚಲನ
ಗಣರಾಜ್ಯೋತ್ಸವ ಅಂಗವಾಗಿ ಜಿಲ್ಲೆಯ ಪೊಲೀಸ್ ಹಾಗೂ ವಿವಿಧ ಶಾಲಾ–ಕಾಲೇಜು ವಿದ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಸ್ಕೌಟ್ಸ್ ಮತ್ತು ಗೈಡ್ಸ್ ಗೃಹರಕ್ಷಕದಳ ಮಾಜಿ ಸೈನಿಕರ ಸಂಘ ಪೊಲೀಸ್ ಇಲಾಖೆ ಸೇವಾದಳ ಆಶಾಕಿರಣ ಅಂಧಮಕ್ಕಳ ಶಾಲೆ ಸೇರಿದಂತೆ ನಗರದ 30 ಕ್ಕೂ ಅಧಿಕ ಶಾಲೆಗಳಿಂದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ವಿವಿಧ ತುಕಡಿಗಳಿಂದ ಧ್ವಜವಂದನೆ ಸ್ವೀಕರಿಸಿದರು. ಮಕ್ಕಳಿಂದ ದೇಶಭಕ್ತಿ ಗೀತೆ ಗಾಯನ ಕಾರ್ಯಕ್ರಮದಲ್ಲಿ ನಗರದ ವಿವಿಧ ಶಾಲೆಗಳ ಸಾವಿರಾರು ವಿದ್ಯಾರ್ಥಿಗಳು ದೇಶಭಕ್ತಿಗೀತೆಗಳನ್ನು ಹಾಡಿದರು. ಸಾರೇ ಜಹಾನ್ ಸೇ.... ವಿಶ್ವವಿನೂತನ.. ಐದು ಬೆರಳು ಕೂಡಿ ಒಂದು ಮುಷ್ಠಿಯೂ... ದೇಶವೇ ಮೊದಲು ಎನ್ನೋಣ... ಗೀತೆಗಳನ್ನು ಶುಶ್ರಾವ್ಯವಾಗಿ ಹಾಡಿದರು. ಗಾಯಕ ಮಲ್ಲಿಗೆ ಸುಧೀರ್ ಸುರೇಂದ್ರ ಹಾಗೂ ಎಂ.ಎಸ್. ಸುಧೀರ್ ನೇತೃತ್ವದ ತಂಡ ಮಕ್ಕಳಿಗೆ ಗಾಯನ ತರಬೇತಿ ನೀಡಿತ್ತು. ಸಭಿಕರು ಗೀತೆಗಳನ್ನು ಕೇಳಿ ಆನಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.