ADVERTISEMENT

‘ರಾಜೀನಾಮೆ ಅಂಗೀಕಾರಕ್ಕೆ ಸಿ.ಎಂ.ಗೆ ಮನವಿ’

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2020, 11:16 IST
Last Updated 3 ನವೆಂಬರ್ 2020, 11:16 IST
ಸಿ.ಟಿ.ರವಿ
ಸಿ.ಟಿ.ರವಿ   

ಚಿಕ್ಕಮಗಳೂರು: ರಾಜೀನಾಮೆ ಅಂಗೀಕರಿಸುವಂತೆ ಇದೇ 2ರಂದು ಮುಖ್ಯಮಂತ್ರಿಯವರಿಗೆ ಮತ್ತೊಮ್ಮೆ ಮನವಿ ಮಾಡಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಅಧಿಕಾರಕ್ಕೆ ಅಂಟಿಕೊಳ್ಳುವ ಜಾಯಮಾನ ನನ್ನದಲ್ಲ. ಹೊಗಳಿಕೊಂಡು ಬಕೆಟ್‌ ಹಿಡಿಯುವ ರಾಜಕಾರಣಿಯೂ ಅಲ್ಲ. ರಾಜ್ಯೋತ್ಸವದವರೆಗೂ ಸಚಿವರಾಗಿ ಮುಂದುವರಿಯವಂತೆ ಕೆಲವು ಹಿರಿಯರು ಸಲಹೆ ನೀಡಿದ್ದರು. ಸಚಿವ ಸ್ಥಾನ ಅಧಿಕಾರ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆ ಜವಾಬ್ದಾರಿ, ಈ ಪೈಕಿ ಜವಾಬ್ದಾರಿ ಕೆಲಸ ಮಾಡುವುದಕ್ಕೆ ಉತ್ಸುಕನಾಗಿದ್ದೇನೆ’ ಎಂದು ಉತ್ತರಿಸಿದರು.

‘ಕಾಂಗ್ರೆಸ್‌ನವರು ಇವಿಎಂ ಮೇಲೆ ಆರೋಪ ಶುರು ಮಾಡಿದ್ದಾರೆ ಎಂದರೆ ಸೋಲು ಗ್ಯಾರಂಟಿ ಎಂಬುದು ಅವರಿಗೆ ತೀರ್ಮಾನವಾಗಿದೆ ಎಂದರ್ಥ. ಗೆದ್ದರೆ ಜನಾದೇಶ ಎನ್ನುತ್ತಾರೆ, ಸೋತರೆ ಇವಿಎಂ ದೋಷ ಎನ್ನುತ್ತಾರೆ’ ಮೂದಲಿಸಿದರು.

ADVERTISEMENT

‘ಚುನಾವಣೆಯಲ್ಲಿ ಸೋಲಾದಾಗ ಚುನಾವಣಾ ಆಯೋಗದ ಮೇಲೆ ಗೂಬೆ ಕೂರಿಸುವುದು. ಕೋರ್ಟ್‌ ತೀರ್ಪು ಬಂದಾಗ ನ್ಯಾಯಾಧೀಶರ ಮೇಲೆ ಅನುಮಾನ ಪಡುವುದು ಕಾಂಗ್ರೆಸ್‌ನ ಕಾಯಿಲೆ’ ಎಂದು ದೂಷಿಸಿದರು.

‘ಕರ್ನಾಟಕ ಬಿಜೆಪಿ ಭದ್ರಕೋಟೆ. ಅಲುಗಾಡಿಸಲು ಪ್ರಯತ್ನಿಸಿದವರೇ ಕುಸಿಯುತ್ತಾರೆ. ಪಕ್ಷದ ಆಂತರಿಕ ವರದಿ ಪ್ರಕಾರ ಶಿರಾ, ಆರ್‌.ಆರ್‌. ನಗರ ಎರಡೂ ಕ್ಷೇತ್ರಗಳಲ್ಲೂ ದೊಡ್ಡ ಅಂತರದಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಕಾಂಗ್ರೆಸ್‌ ಗೆಲ್ಲಿಸಲು ಡಿ.ಕೆ.ಶಿವಕುಮಾರ್‌ ಮತ್ತು ಡಿ.ಕೆ.ಸುರೇಶ್‌ ಸಹೋದರರು ಎಲ್ಲ ತಂತ್ರಗಾರಿಕೆ ಮಾಡಿದ್ದಾರೆ. ಅವು ಫಲಿಸಿದಂತಿಲ್ಲ, ಅವರು ಹತಾಶರಾಗಿದ್ದಾರೆ’ ಎಂದು ಕುಟುಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.