ADVERTISEMENT

ನರಸಿಂಹರಾಜಪುರ: ಉಪಟಳ ನೀಡುತ್ತಿದ್ದ ಒಂಟಿ ಸಲಗ ಕಾರ್ಯಾಚರಣೆ ಯಶಸ್ವಿ

ಕಾರ್ಯಾಚರಣೆಗಿಳಿದ ಕೆಲವೇ ಗಂಟೆಗಳಲ್ಲಿ ಒಂಟಿ ಸಲಗ ಸೆರೆ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2025, 5:01 IST
Last Updated 5 ಆಗಸ್ಟ್ 2025, 5:01 IST
ನರಸಿಂಹರಾಜಪುರ ತಾಲ್ಲೂಕು ವಲಯ ಅರಣ್ಯ ವ್ಯಾಪ್ತಿಯಲ್ಲಿನ ಗ್ರಾಮಗಳಲ್ಲಿ ಉಪಟಳ ನೀಡುತ್ತಿದ್ದ ಒಂಟಿ ಸಲಗವನ್ನು ಸೋಮವಾರ ಸೆರೆಹಿಡಿಯಲಾಯಿತು
ನರಸಿಂಹರಾಜಪುರ ತಾಲ್ಲೂಕು ವಲಯ ಅರಣ್ಯ ವ್ಯಾಪ್ತಿಯಲ್ಲಿನ ಗ್ರಾಮಗಳಲ್ಲಿ ಉಪಟಳ ನೀಡುತ್ತಿದ್ದ ಒಂಟಿ ಸಲಗವನ್ನು ಸೋಮವಾರ ಸೆರೆಹಿಡಿಯಲಾಯಿತು   

ನರಸಿಂಹರಾಜಪುರ: ತಾಲ್ಲೂಕಿನ ನರಸಿಂಹರಾಜಪುರ ವಲಯ ಅರಣ್ಯ ವ್ಯಾಪ್ತಿಯಲ್ಲಿ ಉಪಟಳ ನೀಡುತ್ತಿದ್ದ ಒಂಟಿ ಸಲಗವನ್ನು ಸೆರೆಹಿಡಿಯಲು ಕಾರ್ಯಾಚರಣೆಗಿಳಿದ ಕೆಲವೇ ಗಂಟೆಗಳಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.

ತಾಲ್ಲೂಕಿನ ನರಸಿಂಹರಾಜಪುರ ಅರಣ್ಯ ವಲಯ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಕಳೆದ ಆರು ತಿಂಗಳಿನಿಂದ ಉಪಟಳ ನೀಡುತ್ತಿದ್ದ ಒಂಟಿ ಸಲಗ ಸೆರೆ ಹಿಡಿಯಲು ಆಗಸ್ಟ್ 2ರಂದು ಅನುಮತಿ ದೊರೆತ್ತಿತ್ತು. ಆನೆ ಸೆರೆಹಿಡಿಯಲು ಶಿವಮೊಗ್ಗ ತಾಲ್ಲೂಕು ಸಕ್ರೆಬೈಲು ಆನೆ ಶಿಬಿರದಲ್ಲಿದ್ದ 4 ಹಾಗೂ ಕುಶಾಲಪುರದ ದುಬಾರೆ ಆನೆ ಶಿಬಿರದ 3 ಆನೆಗಳನ್ನು ಕಡಹಿನಬೈಲು ಗ್ರಾಮ ಪಂಚಾಯಿತಿಯ ಗಾಂಧಿ ಗ್ರಾಮಕ್ಕೆ ಭಾನುವಾರ ತರಿಸಲಾಗಿತ್ತು. ಸೋಮವಾರ ಬೆಳಿಗ್ಗೆ 5ರ ವೇಳೆಗೆ ಆನೆ ಬೀಡುಬಿಟ್ಟಿರುವ ಸ್ಥಳವನ್ನು ಕಂಡು ಹಿಡಿಯಲು ಅರಣ್ಯ ಅಧಿಕಾರಿಗಳು, ಶಿವಮೊಗ್ಗದ ಅರವಳಿಕೆ ತಜ್ಞ ಡಾ. ಮುರುಳಿ ಮನೋಹರ, ಕೊಡಗಿನ ಉಪವಲಯ ಅರಣ್ಯಾಧಿಕಾರಿ, ಶಾರ್ಫ್ ಶೋಟರ್ ರಂಜನ್ ನೇತೃತ್ವದ ತಂಡ ತೆರಳಿತ್ತು.

ಬೆಳಿಗ್ಗೆ 10ರ ವೇಳೆಗೆ ಆನೆ ಇರುವ ಸ್ಥಳ ತಂಡ ಪತ್ತೆ ಮಾಡಿತು. ಹಳೇ ಹಾರೆಕೊಪ್ಪ ಭಾಗದ ಅರಣ್ಯ ಪ್ರದೇಶದಲ್ಲಿ ಆನೆ ಇರುವ ಸ್ಥಳದಲ್ಲಿ ಒಂದು ಕಡೆ ದೊಡ್ಡ ಕೆರೆಯಿತ್ತು. ಇನ್ನೊಂದು ಮಲ್ಲಂದೂರು ಗುಡ್ಡ ಇತ್ತು. ಆನೆ ಅರಣ್ಯ ಬಿಟ್ಟು ಎಲ್ಲಿ ಹೋಗದಂತೆ ಯೋಜನೆ ರೂಪಿಸಲಾಯಿತು. ಮಧ್ಯಾಹ್ನ 1 ಗಂಟೆ 5 ನಿಮಿಷ ಸಮಯದಲ್ಲಿ ಆನೆಗೆ ಅರವಳಿಕೆಯನ್ನು ಬಂದೂಕಿನ ಮೂಲಕ ನೀಡಲಾಯಿತು. ನಂತರ ಮಧ್ಯಾಹ್ನ 2ರ ವೇಳೆಗೆ 7 ಸಾಕಾನೆಗಳನ್ನು ಆನೆ ಇರುವ ಸ್ಥಳಕ್ಕೆ ಕರೆದುಕೊಂಡು ಹೋಗಿ ಪ್ರಜ್ಞೆ ತಪ್ಪಿದ್ದ ಒಂಟಿಸಲಗಕ್ಕೆ ಸರಪಳಿ ಬೀಗಿದು 4.30ರ ವೇಳೆಗೆ ಅರಣ್ಯದಿಂದ ಗ್ರಾಮದ ವ್ಯಾಪ್ತಿಗೆ ತರಲಾಯಿತು.

ADVERTISEMENT

ಕಳೆದ 6 ತಿಂಗಳಿನಿಂದ ಒಂಟಿ ಸಲಗ ರೈತರು ಬೆಳೆದ ಬೆಳೆ ಹಾನಿ ಮಾಡುತ್ತಿತ್ತು. ಇದೇ ವ್ಯಾಪ್ತಿಯಲ್ಲಿ ಒಂಟಿ ಸಲಗ ಬೀಡುಬಿಟ್ಟಿರುವುದರಿಂದ ಸೀತೂರು ಗ್ರಾಮದ ಕೆರೆಗದ್ದೆ ಉಮೇಶ್ ಮತ್ತು ಮಡಬೂರು ಗ್ರಾಮದ ಎಕ್ಕಡ ಬೈಲಿನ ವರ್ಗೀಸ್ ಎಂಬುವರನ್ನು ಕೊಂದಿರಬಹುದು ಎಂಬ ಶಂಕೆಯಿದೆ. ಅಂದಾಜು 20 ವರ್ಷದ ಗಂಡಾನೆಯಾಗಿದೆ ಎಂದು ಕೊಪ್ಪ ಡಿಎಫ್‌ಒ ಶಿವಶಂಕರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಕಾರ್ಯಾಚರಣೆಯಲ್ಲಿ ಕೊಪ್ಪ ಎಸಿಎಫ್ ವಿಜಯಶಂಕರ್, ನರಸಿಂಹರಾಜಪುರ ವಲಯ ಅರಣ್ಯಾಧಿಕಾರಿ ಪ್ರವೀಣ್ ಕುಮಾರ್, ಚಿಕ್ಕಅಗ್ರಹಾರ ವಲಯ ಅರಣ್ಯಾಧಿಕಾರಿ ಆದರ್ಶ, ಕಳಸ ವಲಯ ಅರಣ್ಯಾಧಿಕಾರಿ ನಿಶ್ಚಿತ್, ಭದ್ರಾ ಅಭಯಾರಣ್ಯದ ವಲಯ ಅರಣ್ಯಾಧಿಕಾರಿ ಗೌರವ್, ಸಕ್ರಬೈಲು ಮತ್ತು ದುಬಾರೆ ಆನೆ ಶಿಬಿರದ ಮಾವುತರೂ ಸೇರಿ 150 ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಸಾವಿರಾರೂ ಸಂಖ್ಯೆಯಲ್ಲಿ ಗ್ರಾಮಸ್ಥರು ಸೆರೆಹಿಡಿದ ಒಂಟಿ ಸಲಗವನ್ನು ವೀಕ್ಷಿಸಲು ಜಮಾಯಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.