ADVERTISEMENT

ಗ್ರಾಮಾಭಿವೃದ್ಧಿ ಕಾರ್ಯಕ್ರಮ ದೇಶಕ್ಕೆ ಮಾದರಿ: ಶಾಸಕ ಟಿ.ಡಿ.ರಾಜೇಗೌಡ

ಕೊಪ್ಪ, ಎನ್.ಆರ್.ಪುರ ತಾಲ್ಲೂಕು ಮಟ್ಟದ ಜ್ಞಾನವಿಕಾಸ ತಂಡದ ಮಹಿಳಾ ಪರ ವಿಚಾರ ಗೋಷ್ಠಿ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2025, 5:05 IST
Last Updated 26 ಸೆಪ್ಟೆಂಬರ್ 2025, 5:05 IST
ಕೊಪ್ಪದಲ್ಲಿ ಧರ್ಮಸ್ಥಳ ಗ್ರಾಮಭಿವೃದ್ದಿ ಯೋಜನೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಧಕ ಮಹಿಳೆಯರನ್ನು ಸನ್ಮಾನಿಸಲಾಯಿತು. ಶಾಸಕ ಟಿ.ಡಿ.ರಾಜೇಗೌಡ ಭಾಗವಹಿಸಿದ್ದರು
ಕೊಪ್ಪದಲ್ಲಿ ಧರ್ಮಸ್ಥಳ ಗ್ರಾಮಭಿವೃದ್ದಿ ಯೋಜನೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಧಕ ಮಹಿಳೆಯರನ್ನು ಸನ್ಮಾನಿಸಲಾಯಿತು. ಶಾಸಕ ಟಿ.ಡಿ.ರಾಜೇಗೌಡ ಭಾಗವಹಿಸಿದ್ದರು   

ಕೊಪ್ಪ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳು ದೇಶಕ್ಕೆ ಮಾದರಿಯಾಗಿವೆ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.

ಪುರಭವನದಲ್ಲಿ ಈಚೆಗೆ ಆಯೋಜಿಸಿದ್ದ ಕೊಪ್ಪ, ಎನ್.ಆರ್.ಪುರ ತಾಲ್ಲೂಕು ಮಟ್ಟದ ಜ್ಞಾನವಿಕಾಸ ತಂಡದ ಮಹಿಳಾ ಪರ ವಿಚಾರ ಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಾದ್ಯಂತ ಸ್ವ–ಸಹಾಯ ಸಂಘಗಳನ್ನು ರಚನೆ ಮಾಡಿ, ಜನರ ಅಭಿವೃದ್ಧಿಗೆ ಸಹಾಯವಾಗಿದೆ. ಜ್ಞಾನವಿಕಾಸ ಕೇಂದ್ರದ ಮೂಲಕ ದುರ್ಬಲ ಮಹಿಳೆಯರು ಸ್ವಉದ್ಯೋಗ, ಮಕ್ಕಳ ಶಿಕ್ಷಣಕ್ಕೆ ಸಂಘಗಳಿಂದ ಸಾಲ ಪಡೆದುಕೊಂಡು, ಉದ್ಯೋಗ ಮಾಡಿಕೊಂಡು ಮಾದರಿಯಾಗಿದ್ದಾರೆ ಎಂದರು.

ADVERTISEMENT

ಜ್ಞಾನವಿಕಾಸ ಸದಸ್ಯರ ಮಕ್ಕಳಿಗೆ ಸುಜ್ಞಾನ ನಿಧಿ ಶಿಷ್ಯವೇತನ ಮಂಜೂರಾತಿ ಪತ್ರವನ್ನು ಶಾಸಕರು ವಿತರಿಸಿದರು. ಸಾಧಕ ಮಹಿಳೆಯರನ್ನು ಗುರುತಿಸಲಾಯಿತು. ಇಬ್ಬರು ಪಾರಂಪರಿಕ ನಾಟಿ ವೈದ್ಯರು, 250ಕ್ಕಿಂತ ಹೆಚ್ಚು ಸಹಜ ಹೆರಿಗೆ ಮಾಡಿರುವ ಮಹಿಳೆಯೊಬ್ಬರನ್ನು ಗೌರವಿಸಲಾಯಿತು. ರಂಗೋಲಿ ಸ್ಪರ್ಧೆ, ಹೂಗುಚ್ಛ ಸ್ಪರ್ಧೆ ಸಾಂಸ್ಕೃತಿಕ ನೃತ್ಯ ಸ್ಪರ್ಧೆ ನಡೆಸಿ ಬಹುಮಾನ ನೀಡಲಾಯಿತು.

ಯೋಜನೆಯ ಜಿಲ್ಲಾ ನಿರ್ದೇಶಕ ಸದಾನಂದ ಬಂಗೇರ, ಸಂಪನ್ಮೂಲ ವ್ಯಕ್ತಿ ಮಧುರ ಮಂಜುನಾಥ್ ಮಾತನಾಡಿದರು. ಜ್ಞಾನವಿಕಾಸ ಕೇಂದ್ರದ ಅಧ್ಯಕ್ಷೆ ಜಯಲಕ್ಷ್ಮಿ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಜನ ಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ಅರವಿಂದ ಸೋಮಯಾಜಿ, ವೇದಿಕೆಯ ಸದಸ್ಯ ದೇವಪ್ಪ, ನಿವೃತ್ತ ಶಿಕ್ಷಕ ಬಾಲಕೃಷ್ಣ ಭಟ್, ಶೌರ್ಯ ವಿಪತ್ತು ನಿರ್ವಹಣಾ ತಂಡದ ಕ್ಯಾಪ್ಟನ್ ರಾಘವೇಂದ್ರ ಬೇಗಾರ್, ಒಕ್ಕೂಟ ಕಾರ್ಯದರ್ಶಿ ವಸಂತ ಆಚಾರ್ಯ, ಯೋಜನಾಧಿಕಾರಿ ರಾಜೇಶ್, ಕಸಬಾ ವಲಯ ಮೇಲ್ವಿಚಾರಕ ರವಿ, ತಾಲ್ಲೂಕಿನ ಆಂತರಿಕ ಲೆಕ್ಕ ಪರಿಶೋಧಕ ಪ್ರದೀಪ್, ಜ್ಞಾನವಿಕಾಸ ಸಮನ್ವಯಾಧಿಕಾರಿ ಉಷಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.