ADVERTISEMENT

ನುಡಿ ಜಾತ್ರೆಗಳು ಕನ್ನಡಿಗರ ಧ್ವನಿಯಾಗಬೇಕು: ಕಲ್ಕುಳಿ ವಿಠಲ ಹೆಗ್ಡೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2020, 12:50 IST
Last Updated 10 ಜನವರಿ 2020, 12:50 IST
ಜಿಲ್ಲಾ ಸಾಹಿತ್ಯ ಸಮ್ಮೇಳನದ ಒಂದು ಗೋಷ್ಠಿ
ಜಿಲ್ಲಾ ಸಾಹಿತ್ಯ ಸಮ್ಮೇಳನದ ಒಂದು ಗೋಷ್ಠಿ   

ಶೃಂಗೇರಿ: ಸಾಹಿತ್ಯ ಸಮ್ಮೇಳನಗಳು ಕನ್ನಡ ನುಡಿ ಜಾತ್ರೆಗಳಾಗಿವೆಯೇ ಹೊರತು, ಕನ್ನಡಿಗರ ಧ್ವನಿಯಾದ ಉದಾಹರಣೆಗಳು ಬಹಳ ಕಡಿಮೆ ಎಂದುಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದಕಲ್ಕುಳಿ ವಿಠಲ ಹೆಗ್ಡೆಹೇಳಿದರು.

16ನೇ ಜಿಲ್ಲಾ ನುಡಿ ಜಾತ್ರೆಯಲ್ಲಿ ಅವರು ಅಧ್ಯಕ್ಷಿಯ ಭಾಷಣ ಮಾಡಿದರು.

ಜನ ಸಾಮಾನ್ಯರ ಸಂಕಟಗಳನ್ನು ಪರಿಹರಿಸುವಲ್ಲಿ ಹೋರಾಟಗಳಿಗೆ ಎಷ್ಟು ಜವಾಬ್ದಾರಿ ಇರುತ್ತದೋ ಅಷ್ಟೇ ಜವಾಬ್ದಾರಿ ಸಾಹಿತ್ಯಕ್ಕೂ ಇರುತ್ತದೆ. ಮೌಲ್ಯಯುತ ಸಾಹಿತ್ಯ ಸಾಮಾಜಿಕ ಬದ್ಧತೆಯಿಂದ ಕೂಡಿರಬೇಕಾಗುತ್ತದೆ.ಈ ಬದ್ಧತೆಯ ವಿಷಯ ಬಂದಾಗ ನನ್ನ ಆತ್ಮೀಯರಾದ, ಖ್ಯಾತ ಚಿಂತಕ ಡಾ. ಬರಗೂರು ರಾಮಚಂದ್ರಪ್ಪ ಅವರ ಮಾತು ನೆನಪಿಗೆ ಬರುತ್ತದೆ, ಅವರು ‘ಸಾಹಿತ್ಯ ಮತ್ತು ಬದ್ಧತೆ’ ಲೇಖನದಲ್ಲಿ ಹೀಗೆ ಬರೆಯುತ್ತಾರೆ,‘ಸಾಮಾಜಿಕ ಕಳಕಳಿಯ ಹಿನ್ನೆಲೆಯುಳ್ಳ ಬದ್ಧತೆ ಈ ಕಾಲದ ಅಗತ್ಯ. ಚರಿತ್ರೆ ಇಚ್ಛಿಸುವ ಸ್ಥಿತಿಯೆಂದರೆ ಸರಿಯಾದೀತು’. ಸಾಹಿತ್ಯ ಒಣ ಹರಟೆ, ಪುಂಡರ ಗೋಷ್ಠಿಯಲ್ಲ. ಅದು ಪ್ರತಿಪಾದಿಸುವುದೇನೆಂದರೆ ಮನುಷ್ಯನನ್ನು ಮನುಷ್ಯನನ್ನಾಗಿ ಕಾಣುವುದು, ಮನಸ್ಸನ್ನು ಅರಳಿಸುವುದು. ಅವನಲ್ಲಿ ಹುದುಗಿರುವ ದುರಾಸೆ, ಕ್ರೌರ್ಯ, ಅಸೂಯೆ, ಆಕ್ರಮಣ ಪ್ರವೃತ್ತಿಗಳನ್ನು ತೊಡೆದು ಉದಾತ್ತತೆಯಿಂದ, ಸುಂದರ ಸುಖಮಯ ನೆಮ್ಮದಿಯನ್ನು ಅಭಿವ್ಯಕ್ತಿಸುವುದು ಎಂದರು.

ADVERTISEMENT

ಹುಟ್ಟಿದವರಿಗೆ ಸಾವಿದೆ; ಆದರೆ ಬರೆದ ಸಾಹಿತ್ಯಕ್ಕೆಂದೂ ಅಳಿವಿಲ್ಲ ಎಂಬ ಮಾತಿದೆ. ಈ ಮಾತಿಗೆ ಪುಷ್ಟಿದಾಯಕವಾದ ವಿಚಾರವೆಂದರೆ ಯುಗದಕವಿ, ಜಗದ ಕವಿ, ಮಲೆನಾಡಿನ ಕವಿ, ರಾಷ್ಟ್ರಕವಿ ಕುವೆಂಪು ಅವರ ಸಾಹಿತ್ಯ. ಕನ್ನಡ ಜೀವಂತವಿರುವವರೆಗೂ ನಮ್ಮ ಈ ಹೆಮ್ಮೆಯ ಕವಿಯ ಸಾಹಿತ್ಯ ಜೀವಂತವಾಗಿರುತ್ತದೆ.ಕುವೆಂಪು ಎಂದರೆ ಮಲೆನಾಡು. ಅವರು ಈ ನಮ್ಮ ಮಲೆನಾಡಿನ ಪರಿಸರವನ್ನು ರಮ್ಯವಾಗಿ ವರ್ಣಿಸಿ ವಿಜೃಂಭಿಸಿದರು. ‘ಹಕ್ಕಿ ಬಳಗ ಸುತ್ತ ಕೂಡಿ ಬೈಗಂ ಬೆಳಗು ಹಾಡಿ ಹಾಡಿ ಮಲೆನಾಡ ಸಗ್ಗ ಮಾಡಿ’ ಎನ್ನುತ್ತಾ ಅವರು ಬರೆದ ಕವಿತೆ-ಕಾದಂಬರಿಗಳು ನನ್ನನ್ನು, ನನ್ನಂತಹ ಅನೇಕರನ್ನು ಪರಿಸರವಾದಿಯಾಗಿ ರೂಪಿಸಿದೆ ಎಂದರೆ ಸಾಹಿತ್ಯದ ಶಕ್ತಿ ಅಪೂರ್ವವಾದದ್ದು ಎಂದೆನಿಸುವುದಿಲ್ಲವೇ? ಎಂದರು.

ಅರಣ್ಯ ಯೋಜನೆಗಳಿಂದ ಮಲೆನಾಡಿಗರು ಸಂಕಷ್ಟಕ್ಕೆ ಸಿಲುಕಿರುವ ಹೊತ್ತಿನಲ್ಲಿಯೇ ಇಲ್ಲಿಯ ಕೃಷಿ ಕೂಡ ಬಹುದೊಡ್ಡ ಬಿಕ್ಕಟ್ಟನ್ನು ಎದುರಿಸುತ್ತಿದೆ. ಈ ಸಂಕಷ್ಟವನ್ನು ಹೇಗೆ ನಿಭಾಯಿಸಿಕೊಳ್ಳುತ್ತಾರೆ ಎಂಬುದೇ ನನಗಿರುವ ಆತಂಕವಾಗಿದೆ ಎಂದು ಸುದೀರ್ಘ ಭಾಷಣ ಮಾಡಿದರು.

ಹೋರಾಟಗಾರ, ವಿಚಾರವಾದಿ, ಕೃಷಿಕ, ಸಾಹಿತಿ ವಿಠಲ ಹಗ್ಡೆ ಅವರು ಇಲ್ಲಿನಡೆಯುತ್ತಿರುವ 16ನೇ ಕನ್ನಡ ಸಾಹಿತ್ಯ ಸಮ್ಮೇಳನದಸರ್ವಾಧ್ಯಕ್ಷರಾಗಿದ್ದಾರೆ. ಇವರು ಶೃಂಗೇರಿ ತಾಲ್ಲೂಕಿನ ಕಲ್ಕುಳಿ ಊರಿನವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.