
ಬಡಗಬೈಲು (ನರಸಿಂಹರಾಜಪುರ): ‘ಪ್ರಪಂಚದಲ್ಲಿ ಬೇರೆ ಬೇರೆ ನಂಬಿಕೆ, ಆರಾಧನೆಗಳಿದ್ದರೂ ಎಲ್ಲಾ ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರ ಕೊಡುವ ಧರ್ಮ, ಧರ್ಮಗ್ರಂಥಗಳು ಸನಾತನ ಧರ್ಮದಲ್ಲಿರುವುದರಿಂದ ಸನಾತನ ಧರ್ಮಪರಂಪರೆಗೆ ವಿಶೇಷ ಸ್ಥಾನವಿದೆ’ ಎಂದು ಶೃಂಗೇರಿ ಶಾರದಾ ಪೀಠದ ವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದರು.
ಬಡಗಬೈಲು ಗ್ರಾಮದ ಕನಗೆರೆಯಲ್ಲಿ ಗುರುವಾರ ಸಪರಿವಾರ ರಂಗನಾಥೇಶ್ವರ ಸ್ವಾಮಿ ದೇವಸ್ಥಾನ ಪ್ರತಿಷ್ಠಾ ಮಹೋತ್ಸವ ಮತ್ತು ಮಹಾಕುಂಭಾಭಿಷೇಕ ನೆರವೇರಿಸಿ ಅವರು ಅನುಗ್ರಹ ಭಾಷಣ ಮಾಡಿದರು.
ಸನಾತನ ಧರ್ಮದಲ್ಲಿ ವೇದಗಳು, ಗ್ರಂಥಗಳು, ಶಾಸ್ತ್ರಗಳು ಇದ್ದು ಕಾಲಕಾಲಕ್ಕೆ ದೀರ್ಘಾವಧಿ ವಿಚಾರ ಮಾಡಿ, ಚರ್ಚೆಗಳನ್ನು ಸಂಗ್ರಹಮಾಡಿ ಗ್ರಂಥ ರಚಿಸಲಾಗಿದೆ. ಭಗವಂತ ಎಂಬ ಆರಾಧನೆ ಎಲ್ಲಾ ಕಡೆಯಿದ್ದರೂ ಪ್ರತಿಯೊಂದು ಪ್ರಶ್ನೆಗೂ ಉತ್ತರ ನೀಡುವ ಸನಾತನ ಧರ್ಮ, ವೇದಗಳು, ಶಾಸ್ತ್ರ, ಪುರಾಣಗಳಲ್ಲಿದೆ ಎಂದರು
ಧರ್ಮದ ಬಗ್ಗೆ ಪರಿಪೂರ್ಣ ವಿಚಾರ ತಿಳಿದುಕೊಳ್ಳದೆ ಧರ್ಮಸರಿಯಿಲ್ಲ ಎಂಬ ತೀರ್ಮಾನಕ್ಕೆ ಬರದೆ ಆಳವಾಗಿ ವಿಚಾರ ತಿಳಿದುಕೊಳ್ಳಬೇಕು. ಸರಿಯಾದ ಮಾರ್ಗದಲ್ಲಿ ಕರೆದುಕೊಂಡು ಹೋಗುವುದು ಧರ್ಮ. ಯಾವುದೇ ದುರಭ್ಯಾಸಗಳಿಲ್ಲದೆ, ಎಲ್ಲರ ಗೌರವಕ್ಕೆ ಪಾತ್ರರಾಗಿ, ಕೈಲಾದಷ್ಟು ಉಪಕಾರ ಮಾಡಿ ಇನ್ನೊಬ್ಬರಿಗೆ ತೊಂದರೆಕೊಡದೆ ನೆಮ್ಮದಿಯಿಂದ ಜೀವನ ಮಾಡುವುದೇ ಭಗವಂತನ ಆರಾಧನೆಯಾಗಿದೆ ಎಂದರು.
ಶಾಸಕ ಟಿ.ಡಿ. ರಾಜೇಗೌಡ ಮಾತನಾಡಿ, ಶೃಂಗೇರಿ ಶ್ರೀಗಳು ಸನಾತನ ಧರ್ಮದ ರಕ್ಷಣೆಗೆ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದಾರೆ. ಸುಮಾರು 17 ಸಾವಿರಕ್ಕೂ ಹೆಚ್ಚು ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಸಹಕಾರ ನೀಡಿದ್ದಾರೆ. ಕ್ಷೇತ್ರದ ವ್ಯಾಪ್ತಿಯಲ್ಲಿ ಧಾರ್ಮಿಕ, ಸಾಂಸ್ಕೃತಿಕ, ಆರೋಗ್ಯ, ಮೂಲ ಸೌಕರ್ಯಕ್ಕೆ ಆದ್ಯತೆ ನೀಡಲಾಗುತ್ತಿದ್ದು, ಇದಕ್ಕೆ ಸ್ವಾಮೀಜಿ ಅವರ ಆಶೀರ್ವಾದವೇ ಕಾರಣ. ವಸ್ತಾರೆಯಿಂದ ಶೃಂಗೇರಿಗೆ ರಸ್ತೆಯನ್ನು ಮೇಲ್ದರ್ಜೆಗೆ ಏರಿಸಲು ಲೋಕಸಭಾ ಸದಸ್ಯರ ಸಹಕಾರದೊಂದಿಗೆ ಮನವಿ ಸಲ್ಲಿಸಲಾಗಿದೆ ಎಂದರು.
ಮುಖಂಡ ಡಿ.ಎನ್. ಜೀವರಾಜ್ ಮಾತನಾಡಿ, ಪೂಜ್ಯ ಶ್ರೀಗಳ ಪಾದ ಸ್ಪರ್ಶದಿಂದ ಊರಿಗೆ ಒಳಿತಾಗುತ್ತದೆ ಎಂದರು.
ಶ್ರೀನಿವಾಸ್ ಭಟ್ ಮತ್ತು ವೃಂದ, ಶ್ರೀಪ್ರೀಯ, ಎಂ.ಕೆ. ವೆಂಕಟೇಶ್, ಪ್ರತಿಮಾ ಮಧುಕುಮಾರ್, ಗಿರೀಶ್ ಭಟ್, ಹರೀಶ್ ಭಟ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.
ವಾರಕ್ಕೊಮ್ಮೆಯಾದರೂ ದೇವಾಲಯಕ್ಕೆ ಹೋಗಿ ಶಂಕರಾಚಾರ್ಯರು ಜಗತ್ತಿನ ಉದ್ಧಾರಕ್ಕೆ ಒಳ್ಳೆಯ ಸಮಾಜ ನಿರ್ಮಾಣಕ್ಕೆ ಉಪದೇಶ ನೀಡಿದ್ದಾರೆ. ಅವರ ಉಪದೇಶಗಳು ಪ್ರಪಂಚದ ಎಲ್ಲಾ ಧರ್ಮೀಯರಿಗೂ ಅನ್ವಯವಾಗುತ್ತದೆ. ಪ್ರತಿಯೊಬ್ಬರು ಕನಿಷ್ಠ ವಾರಕ್ಕೊಮ್ಮೆಯಾದರೂ ದೇವಾಲಯಕ್ಕೆ ಹೋಗಬೇಕು. ಮಕ್ಕಳಿಗೂ ದೇವಸ್ಥಾನಕ್ಕೆ ಕರೆದುಕೊಂಡ ಬರಬೇಕು. ಮಕ್ಕಳಿಗೆ ಹಿಂದೂ ಧರ್ಮದ ಸಂಸ್ಕಾರ ಹೇಳಿಕೊಡಬೇಕು ಎಂದು ವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.