
ಬೀರೂರು(ಕಡೂರು): ಹತ್ತಾರು ಜಾತಿ, ಮತ–ಪಂಥಗಳ ಅಸ್ತಿತ್ವದ ನಡುವೆಯೂ ಸಾಮರಸ್ಯದ ಜೀವನಕ್ಕೆ ಹೆಸರಾಗಿರುವ ಬೀರೂರು ಪಟ್ಟಣ ಭಾವೈಕ್ಯದ ಬೀಡಾಗಿದೆ ಎಂದು ಕಾಂಗ್ರೆಸ್ ಮುತ್ಸದ್ದಿ ಕೆ.ಬಿ. ಮಲ್ಲಿಕಾರ್ಜುನ ಬಣ್ಣಿಸಿದರು.
ಬೀರೂರು ಪಟ್ಟಣದ ಕಡೂರು ರಸ್ತೆಯ ಎಪಿಎಂಸಿ ಸಮೀಪದ ಹೆದ್ದಾರಿ ತಿರುವಿನ ಬಳಿ ಶಾಸಕ ಕೆ.ಎಸ್. ಆನಂದ್ ಅವರ ಜತೆಗೂಡಿ ಸಂಗೊಳ್ಳಿ ರಾಯಣ್ಣ ಅವರ ಕಂಚಿನ ಪುತ್ಥಳಿ ಸ್ಥಾಪನೆಗೆ, ಶುಕ್ರವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಪಟ್ಟಣದಲ್ಲಿ ಎಲ್ಲ ಸಮುದಾಯಗಳ ನಡುವೆ ಮೊದಲಿನಿಂದಲೂ ಭ್ರಾತೃತ್ವಭಾವ ಹಾಸು ಹೊಕ್ಕಾಗಿದೆ. ಪೂರ್ವಜರು ಕೇವಲ ಮನುಷ್ಯರನ್ನು ಮಾತ್ರ ಒಗ್ಗೂಡಿಸುವ ಕೆಲಸ ಮಾಡಿಲ್ಲ, ದೇವಾಲಯಗಳ ನಡುವೆಯೂ ಅವಿನಾಭಾವ ಸಂಬಂಧವಿದೆ. ಪ್ರಮುಖ ಸಂದರ್ಭಗಳಲ್ಲಿ ಎಲ್ಲ ದೇವತೆಗಳ ಸಾನ್ನಿಧ್ಯವೂ ಇರುತ್ತದೆ. ಈಗ ಬೀರೂರು ಪಟ್ಟಣದಲ್ಲಿ ಅಂಬೇಡ್ಕರ್ ಪ್ರತಿಮೆ ಸ್ಥಾಪನೆಗೆ ಭೂಮಿಪೂಜೆ ಆಗಿದ್ದು, ಇಂದು ಕನಕದಾಸರು ಮತ್ತು ಸಂಗೊಳ್ಳಿ ರಾಯಣ್ಣ ಅವರ ಪುತ್ಥಳಿ ಸ್ಥಾಪನೆಗೆ ಶಂಕುಸ್ಥಾಪನೆಯಾಗಿದೆ. ಆನಂದ್ ಅವರ ನೇತೃತ್ವದಲ್ಲಿಯೇ ಕೋಡಿಹಳ್ಳಿ ರಸ್ತೆ ಬಳಿ ಬಸವೇಶ್ವರರ ಪ್ರತಿಮೆ ಸ್ಥಾಪನೆಯೂ ಆಗಲಿದೆ. ತಾಲ್ಲೂಕಿನಲ್ಲಿ ಶಾಸಕರ ನೇತೃತ್ವದಲ್ಲಿ ಒಳ್ಳೆಯ ಕೆಲಸಗಳು ನಡೆದಿವೆ. ಇಡೀ ಕ್ಷೇತ್ರದಲ್ಲಿ ಸಾಮರಸ್ಯ ಭಾವ ತುಂಬಿ ಅವರು, ಇನ್ನೂ ಹೆಚ್ಚು ಒಳ್ಳೆಯ ಕೆಲಸಗಳನ್ನು ಮಾಡಲು ಶಕ್ತಿ ದೊರೆಯಲಿ ಎಂದು ಹಾರೈಸಿದರು.
ಶಾಸಕ ಕೆ.ಎಸ್. ಆನಂದ್ ಮಾತನಾಡಿ, ‘ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ ಶಿಲ್ಪಿ ನಂದಕುಮಾರ ಚಂದರಗಿ ಅವರಿಂದ ಈಗಾಗಲೇ ಪುತ್ಥಳಿ ನಿರ್ಮಾಣ ಕಾರ್ಯ ಆರಂಭಗೊಂಡಿದೆ. ಬಸವೇಶ್ವರರ ಪ್ರತಿಮೆಗೆ ಸ್ಥಳ ನಿಗದಿಯಾಗಿದ್ದು, ಸದ್ಯದಲ್ಲಿಯೇ ಪ್ರತಿಮೆ ಸ್ಥಾಪನೆಗೆ ಭೂಮಿಪೂಜೆ ನೆರವೇರಿಸಲಾಗುವುದು. ಕೆ.ಬಿ. ಮಲ್ಲಿಕಾರ್ಜುನರ ಆಶಯದಂತೆ ಕ್ಷೇತ್ರದಾದ್ಯಂತ ಸೌಹಾರ್ದದ ವಾತಾವರಣ ನಿರ್ಮಿಸಲು ಶ್ರಮಿಸುವುದಾಗಿ’ ತಿಳಿಸಿದರು.
ಬೀರೂರು ಪುರಸಭೆ ಮುಖ್ಯಾಧಿಕಾರಿ ಜಿ. ಪ್ರಕಾಶ್, ಪುಷ್ಪಾ ಮಲ್ಲಿಕಾರ್ಜುನ, ಕುರುಬರ ಸಂಘದ ಅಧ್ಯಕ್ಷ ತಿಮ್ಮಯ್ಯ, ಬಿ.ಪಿ. ನಂಜುಂಡಪ್ಪ, ಬಿ.ಪಿ. ನಾಗರಾಜ್, ಪುಟ್ಟಸ್ವಾಮಿ, ಗೋವಿಂದಸ್ವಾಮಿ, ಸಂತೋಷ್ ಕುಮಾರ್, ಜ್ಯೋತಿ, ಸವಿತಾ ರಮೇಶ್, ಗೌಡರ ಮರುಳಸಿದ್ದಪ್ಪ, ಮೋಹನ್, ರವಿಕುಮಾರ್, ಕೆ.ಎಚ್. ಕರಿಯಪ್ಪ, ಎಲ್. ಚಂದ್ರಶೇಖರ್, ಉಮಾಶಂಕರ್, ರವಿ, ಗಂಗಾಧರಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.