ADVERTISEMENT

ಸಂಜೀವಿನಿ ವಿದ್ಯಾಸಂಸ್ಥೆಯಲ್ಲಿ ಸಿಬಿಎಸ್‌ಇ ಆರಂಭ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2026, 7:32 IST
Last Updated 25 ಫೆಬ್ರುವರಿ 2026, 7:32 IST
ಎಸ್.ಶಾಂತಕುಮಾರಿ
ಎಸ್.ಶಾಂತಕುಮಾರಿ   

ಚಿಕ್ಕಮಗಳೂರು: ನಗರದ ಸಂಜೀವಿನಿ ವಿದ್ಯಾ ಸಂಸ್ಥೆಯಲ್ಲಿ ಸಿಬಿಎಸ್‌ಇ ಪಠ್ಯಕ್ರಮ ಆರಂಭಿಸಲು ಅನುಮತಿ ದೊರಕಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದಲೇ ಸಿಬಿಎಸ್‌ಇ ಬೋಧನೆ ಆರಂಭಿಸಲು ಶಾಲೆಯಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸಂಜೀವಿನಿ ವಿದ್ಯಾಸಂಸ್ಥೆ ಅಧ್ಯಕ್ಷೆ ಎಸ್. ಶಾಂತಕುಮಾರಿ ತಿಳಿಸಿದರು.

ಪೋಷಕರ ಹೆಚ್ಚಿನ ಬೇಡಿಕೆ ಇರುವುದರಿಂದ ವಿದ್ಯಾಸಂಸ್ಥೆಯಲ್ಲಿ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್(ಸಿಬಿಎಸ್‌ಇ) ಪಠ್ಯಕ್ರಮ ಅಳವಡಿಸಬೇಕೆಂಬ ಉದ್ದೇಶದಿಂದ ಈ ವರ್ಷ ಸಲ್ಲಿಸಿದ ಮನವಿಗೆ ಮನ್ನಣೆ ಸಿಕ್ಕಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ವಿಜ್ಞಾನ ಮತ್ತು ಗಣಿತ ವಿಷಯಗಳಿಗೆ ಹೆಚ್ಚಿನ ಒತ್ತು ಸಿಗುತ್ತಿದೆ. ಸದ್ಯ 9 ರಿಂದ 10ನೇ ತರಗತಿ ತನಕ ಈ ಸಂಸ್ಥೆಯಲ್ಲಿ ಕೇಂದ್ರೀಕೃತ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. 2025-26 ರಿಂದ 10ನೇ ತರಗತಿಗೆ ವರ್ಷಕ್ಕೆರಡು ಬಾರಿ ಮಂಡಳಿಯ ಪರೀಕ್ಷೆ ಅಳವಡಿಸಿಕೊಳ್ಳಲಿದೆ ಎಂದು ತಿಳಿಸಿದರು.

ADVERTISEMENT

ವಿದ್ಯಾರ್ಥಿಗಳಿಗೆ ಪಾಠ-ಪ್ರವಚನಗಳಷ್ಟೇ ಅಲ್ಲ, ಸಾಹಿತ್ಯ, ಸಂಗೀತ, ಚಿತ್ರಕಲೆ, ಕಂಪ್ಯೂಟ‌ರ್ ಶಿಕ್ಷಣ, ಕರಾಟೆ, ನೃತ್ಯ, ಅಬಾಕಸ್ ಅಲ್ಲದೆ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಸಂಸ್ಥೆ ಉತ್ತೇಜನ ನೀಡುತ್ತಾ ಬಂದಿದೆ. ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲೂ ಸಂಸ್ಥೆಯ ಮಕ್ಕಳು ಭಾಗವಹಿಸಿ ಬಹುಮಾನಗಳಿಗೆ ಭಾಜನರಾಗಿದ್ದಾರೆ ಎಂದು ಹೇಳಿದರು.

ಪ್ರಬಂಧ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಚರ್ಚಾ ಸ್ಪರ್ಧೆ, ಏಕಪಾತ್ರಾಭಿನಯ ಹೀಗೆ ವಿವಿಧ್ಯಮಯ ಕ್ಷೇತ್ರಗಳಲ್ಲಿ ಮಕ್ಕಳನ್ನು ತೊಡಗಿಸಿ ವಿದ್ಯಾರ್ಥಿಗಳಲ್ಲಿ ಮನೋಸ್ಥೈರ್ಯ ಜೊತೆಗೆ ಆತ್ಮವಿಶ್ವಾಸ ಬೆಳೆಸಲಾಗುತ್ತಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಜೀವಿನಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಎಂ. ಪುಂಡರೀಕ್ಷಾಕ ಉಡುಪ, ಪ್ರಾಂಶುಪಾಲೆ ಎಸ್.ಹೇಮಾ, ಆಡಳಿತ ಮಂಡಳಿ ಸದಸ್ಯ ರಂಗನಾಥ್, ಶಾಂತಲಕ್ಷ್ಮಿ ಉಪಸ್ಥಿರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.