ADVERTISEMENT

ಶಾಲೆ ಬಿಟ್ಟಿದ್ದ ತಾಂಡಾ ಹುಡುಗನ ಸಾಧನೆ

ದ್ವಿತೀಯ ಪಿಯುನಲ್ಲಿ ಫಸ್ಟ್‌ ಕ್ಲಾಸ್‌

ಬಿ.ಜೆ.ಧನ್ಯಪ್ರಸಾದ್
Published 16 ಜುಲೈ 2020, 17:40 IST
Last Updated 16 ಜುಲೈ 2020, 17:40 IST
ಮುತ್ತಪ್ಪ
ಮುತ್ತಪ್ಪ   

ಚಿಕ್ಕಮಗಳೂರು: ಬಡತನದಿಂದಾಗಿ ಒಂದನೇ ತರಗತಿಗೇ ಶಾಲೆ ತೊರೆದಿದ್ದವ ವಿದ್ಯಾಭ್ಯಾಸ ಮಾಡಲೇಬೇಕೆಂಬ ಛಲದಿಂದ ನೇರವಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಕಟ್ಟಿ ಪಾಸಾಗಿ, ಈ ವರ್ಷ ದ್ವಿತೀಯ ಪಿಯುನಲ್ಲಿ ಪ್ರಥಮ ದರ್ಜೆ ಪಡೆದು ಹುಬ್ಬೇರಿಸುವಂತೆ ಮಾಡಿದ್ದಾನೆ.

ಜಿಲ್ಲೆಯ ಕೊಪ್ಪ ತಾಲ್ಲೂಕು ಕೇಂದ್ರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಮುತ್ತಪ್ಪ ಕಾಳಪ್ಪ ಲಮಾಣಿ ಈ ಸಾಧನೆ ಮಾಡಿದ ವಿದ್ಯಾರ್ಥಿ. ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ಹತ್ತಿಮತ್ತೂರು ತಾಂಡಾದ ಕಾಳಪ್ಪ ಲಮಾಣಿ, ಶಾಂತವ್ವ ದಂಪತಿ ಪುತ್ರ.

ಕಲಾ ವಿಭಾಗದ ಈ ವಿದ್ಯಾರ್ಥಿ ಕನ್ನಡ– 78, ಇಂಗ್ಲಿಷ್‌– 42, ಇತಿಹಾಸ– 86, ಅರ್ಥಶಾಸ್ತ್ರ– 56, ತರ್ಕಶಾಸ್ತ್ರ– 90, ರಾಜ್ಯಶಾಸ್ತ್ರ– 73 ಒಟ್ಟು 600ಕ್ಕೆ 425 ಅಂಕ (ಶೇ 70.83) ಗಳಿಸಿದ್ದಾರೆ.

ADVERTISEMENT

‘ಹಾಸನದ ಸಕಲೇಶಪುರ ತಾಲ್ಲೂಕಿನ ಹರಳಿಬಿಟೇಶ್ವರಕ್ಕೆ 2004ರಲ್ಲಿ ಅಮ್ಮನೊಂದಿಗೆ ಬಂದಿದ್ದೆ. ಅಲ್ಲಿ ಕಾಫಿತೋಟದಲ್ಲಿ ಕೂಲಿ ಕೆಲಸ. ತೋಟದ ಮಾಲೀಕರು ಅವರ ಸಹೋದರಿ ಮನೆಯಲ್ಲಿ ಮಗು ಆಟವಾಡಿಸಲು ಕೊಪ್ಪ ತಾಲ್ಲೂಕಿನ ಸೂರ್ಯದೇವಸ್ಥಾನಕ್ಕೆ ನನ್ನನ್ನು ಕರೆದೊಯ್ದರು. ಶಾಲೆಗೂ ಸೇರಿಸಿದರು. ಅಪ್ಪ ತೀರಿದಾಗ ಮನೆಯವರು ಒಂದನೇ ತರಗತಿ ಅರ್ಧಕ್ಕೆ ಬಿಡಿಸಿ ಊರಿಗೆ ವಾಪಸ್‌ ಕರೆದೊಯ್ದರು’ ಎಂದು ಬದುಕಿನ ಬಂಡಿಯ ಯಾನವನ್ನು ಮುತ್ತಪ್ಪ ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡರು.

‘ಊರಲ್ಲಿ ಕುರಿ ಕಾಯಲು ಹಚ್ಚಿದರು. ಊರಿನ ಮಕ್ಕಳು ಶಾಲೆಗೆ ಹೋಗುವುದನ್ನು ನೋಡಿ ನನಗೂ ಹೋಗಬೇಕು ಅನಿಸಿ ಕಣ್ಣೀರಿಟ್ಟಿದ್ದೆ. ಹರಿಹರದಲ್ಲಿ ಒಮ್ಮೆ ಕುರಿ ಮಂದೆ ಸಹಿತ ಬೀಡುಬಿಟ್ಟಿದ್ದೆವು. ಈ ಸಮಯದಲ್ಲಿ ನನ್ನನ್ನು ಶಾಲೆಗೆ ಸೇರಿಸಿಕೊಳ್ಳಿ ಎಂದುಶಿಕ್ಷಕಿಯೊಬ್ಬರನ್ನು ಕೇಳಿದೆ. ಅವರು ಕುರಿ ಕಾಯುವುದನ್ನು ಬಿಟ್ಟು ಬಾ ಎಂದರು. ನಂತರ ಫಾರಂವೊಂದರಲ್ಲಿ ಕೆಲಸಕ್ಕೆ ಸೇರಿಕೊಂಡೆ. ಮಾಲೀಕರು ಕಾಗುಣಿತ, ಇಂಗ್ಲಿಷ್‌ ಅಕ್ಷರ ಕಲಿಸಿದರು. ಸ್ವಲ್ಪ ದಿನ ಟ್ಯೂಷನ್‌ಗೂ ಕಳಿಸಿದರು. ಅಲ್ಲಿಂದ 2014ರ ಡಿಸೆಂಬರ್‌ನಲ್ಲಿ ಕೊಪ್ಪಕ್ಕೆ ಬಂದೆ’ ಎಂದು ಮಲೆನಾಡಿನ ಹಾದಿಯನ್ನು ಮತ್ತೆ ಹಿಡಿದಿದ್ದನ್ನು ನೆನಪಿಸಿಕೊಂಡರು.

‘ಕೊಪ್ಪದ ಸೂರ್ಯದೇವಸ್ಥಾನ ಗ್ರಾಮದಲ್ಲಿ ಮೊದಲು ಇದ್ದ ಮನೆಗೆ ಹೋದೆ. ಓದಬೇಕು ಎಂಬ ಆಸೆಯನ್ನು ಶಿಕ್ಷಕಿ ಲಲಿತಾಕುಮಾರಿ ಅವರಿಗೆ ತಿಳಿಸಿದೆ. ಅವರು ಸಹಾಯ ಮಾಡಿದರು. 2017–18ರಲ್ಲಿ ಖಾಸಗಿ ಅಭ್ಯರ್ಥಿಯಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಕಟ್ಟಿದೆ. ಬಾಳಗಡಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಪಾಠ ಕೇಳಲು ಬಿಇಒ ಅವಕಾಶ ಮಾಡಿಕೊಟ್ಟಿದ್ದರು. ಒಂದು ವಿಷಯ ಫೇಲಾಯಿತು. ಪೂರಕ ಪರೀಕ್ಷೆಯಲ್ಲಿ ಪಾಸಾದೆ. ಕೊಪ್ಪದಲ್ಲಿ ಸರ್ಕಾರಿ ಕಾಲೇಜಿನಲ್ಲಿ ರೆಗ್ಯುಲರ್‌ ವಿದ್ಯಾರ್ಥಿಯಾಗಿ ಪಿಯುಸಿಗೆ ದಾಖಲಾದೆ’ ಎಂದು ತಿಳಿಸಿದರು.

‘ಕೊಪ್ಪದಲ್ಲಿ ಪೆಟ್ರೋಲ್‌ ಬಂಕ್‌ನಲ್ಲಿ ಕೆಲಸಕ್ಕೆ ಸೇರಿದೆ. ಮಾಲೀಕರ ಮೊಮ್ಮಗ ಸಹದೇವ ಬಾಲಕೃಷ್ಣ ಅವರ ಮನೆಯಲ್ಲಿ ಉಳಿದುಕೊಂಡಿದ್ದೆ. ಕಾಲೇಜಿನಲ್ಲಿ ಉಪನ್ಯಾಸಕರು ಪ್ರೋತ್ಸಾಹ ನೀಡಿದರು. ಛಲಬಿಡದೆ ಶ್ರದ್ಧೆಯಿಂದ ಅಭ್ಯಾಸ ಮಾಡಿದೆ. ಫಸ್ಟ್‌ಕ್ಲಾಸ್‌ ಪಡೆದಿದ್ದೇನೆ. ಮುಂದೆ ಬಿ.ಎ ವ್ಯಾಸಂಗ ಮಾಡಬೇಕು; ಶಿಕ್ಷಕನಾಗಬೇಕು ಇಲ್ಲವೇ ರೈಲ್ವೆ ಇಲಾಖೆ ಸೇರಬೇಕು’ ಎಂದು ಕನಸು ಬಿಚ್ಚಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.