8 ಕೊಠಡಿಗಳಲ್ಲಿ 2 ಸಂಪೂರ್ಣ ಶಿಥಿಲ, ಬಹುತೇಕ ಸೋರುವಿಕೆ | ಎಲ್.ಕೆ.ಜಿ.ಯಿಂದ ಇಂಗ್ಲಿಷ್ ಮಾಧ್ಯಮ ಆರಂಭಿಸಲು ಒತ್ತಾಯ
ನರಸಿಂಹರಾಜಪುರ: ಪಟ್ಟಣದ ಪ್ರವಾಸಿ ಮಂದಿರದ ಬಳಿಯ ಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಬಹುತೇಕ ಶಿಥಿಲಾವಸ್ಥೆಗೆ ತಲುಪಿದ್ದು, ಮಕ್ಕಳು ಜೀವ ಭಯದಿಂದ ಪಾಠ ಕೇಳುವ ಸ್ಥಿತಿ ನಿರ್ಮಾಣವಾಗಿದೆ ಎಂದು ಪೋಷಕರು ದೂರಿದ್ದಾರೆ.
ಪಟ್ಟಣ ವ್ಯಾಪ್ತಿಯ ಪ್ರವಾಸಿ ಮಂದಿರದ ಸಮೀಪ 1956ರಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯನ್ನು ಖಾಸಗಿ ಕಟ್ಟಡದಲ್ಲಿ ಪ್ರಾರಂಭಿಸಲಾಯಿತು. 1980ರವರೆಗೂ ಖಾಸಗಿ ಕಟ್ಟಡದಲ್ಲಿ ಶಾಲೆ ನಡೆಯುತ್ತಿತ್ತು. ನೂತನ ಕಟ್ಟಡವನ್ನು ಎಚ್.ಜಿ. ಗೋವಿಂದೇಗೌಡ ಅವರು ಶಿಕ್ಷಣ ಸಚಿವರಾಗಿದ್ದಾಗ ನಿರ್ಮಿಸಲಾಗಿತ್ತು. ವಿಧಾನ ಪರಿಷತ್ ಸದಸ್ಯರಾಗಿದ್ದ ಎಂ. ಶ್ರೀನಿವಾಸ್ ಅವರು ಸಭಾಂಗಣ ಸೇರಿದಂತೆ ಕೊಠಡಿಯನ್ನು ಶಾಸಕರ ಅನುದಾನದಲ್ಲಿ ನಿರ್ಮಿಸಿದ್ದಾರೆ.
ಈ ಶಾಲೆಯಲ್ಲಿ ರಾವೂರು, ಲಿಂಗಾಪುರ, ಸುಗ್ಗಪ್ಪನ ಮಠ, ಮೀನುಕ್ಯಾಂಪ್, ಹಳೆ ಹೆಬ್ಬೆರಸ್ತೆ, ಮೇದರ ಬೀದಿ, ಪ್ರವಾಸಿ ಮಂದಿರ ವ್ಯಾಪ್ತಿಯ ಸಾವಿರಾರು ಮಕ್ಕಳು ವ್ಯಾಸಂಗ ಮಾಡಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಇಲ್ಲದ ಕಾಲದಲ್ಲಿ ಈ ಶಾಲೆ ಉತ್ತಮ ಶಿಕ್ಷಣ, ಕ್ರೀಡಾ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪ್ರಸಿದ್ಧಿ ಪಡೆದಿತ್ತು.
ಪ್ರಸ್ತುತ 46 ಮಕ್ಕಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಬಹುತೇಕ ಕೊಠಡಿಗಳು ಮಳೆಗಾಲದಲ್ಲಿ ಸೋರುತ್ತಿವೆ. ಸೋರುವ ಜಾಗದಲ್ಲಿ ನೀರು ಸಂಗ್ರಹಣೆಗೆ ಬಕೆಟ್ ಇಟ್ಟು ಇದರ ಮಧ್ಯೆಯೇ ಮಕ್ಕಳು ಪಾಠ ಕೇಳುವ ಸ್ಥಿತಿಯಿದೆ. ಮುಖ್ಯಶಿಕ್ಷಕರ ಕೊಠಡಿ, ಅಡುಗೆ ಮನೆ ಸೋರುತ್ತಿದೆ. ಮಳೆಗಾಲದಲ್ಲಿ ಸೋರುವಿಕೆಯಿಂದ ಕೊಠಡಿಯಲ್ಲಿ ನಿಲ್ಲುವ ನೀರನ್ನು ತೆಗೆಯುವುದೇ ಶಿಕ್ಷಕರಿಗೆ ಕಾಯಕವಾಗಿ ಪರಿಣಮಿಸಿದೆ. ಕೆಲವು ಕೊಠಡಿಗಳ ಚಾವಣಿಯೂ ಶಿಥಿಲಾವಸ್ಥೆಗೆ ತಲುಪಿದೆ. ಒಂದು ಕೊಠಡಿಯ ಗೋಡೆ ಕುಸಿದು ಹೋಗಿದ್ದು, ಈ ಗೋಡೆಯ ಸಮೀಪದಿಂದಲೇ ಮಕ್ಕಳು ಶೌಚಾಲಯಕ್ಕೆ ಹೋಗಬೇಕಾದ ಸ್ಥಿತಿಯಿದೆ.
ಶಿಥಿಲಾವಸ್ಥೆಗೆ ತಲುಪಿರುವ ಕೊಠಡಿಯನ್ನು ತೆರವುಗೊಳಿಸುವಂತೆ ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಗೋಡೆ ಕುಸಿದಿರುವುದು, ಸೋರುತ್ತಿರುವುದನ್ನು ಕ್ಷೇತ್ರ ಶಿಕ್ಷಣಾಧಿಕಾರಿ, ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದು ದುರಸ್ತಿ ಪಡಿಸುವ ಭರವಸೆ ನೀಡಿದ್ದಾರೆ ಎಂದು ಮುಖ್ಯಶಿಕ್ಷಕಿ ರಾಜೇಶ್ವರಿ ತಿಳಿಸಿದರು.
‘ಸರ್ಕಾರ ಗಮನ ಹರಿಸಬೇಕು’
ಶಿಥಿಲಾವಸ್ಥೆಗೆ ತಲುಪಿರುವ ಶಾಲೆಯ ಕಟ್ಟಡ ತೆರವಿಗೆ ಡಿಡಿಪಿಐ ಅವರಿಗೆ ಪತ್ರ ಬರೆಯಲಾಗಿದೆ. ಒಪ್ಪಿಗೆ ದೊರೆತಿದ್ದು ಶೀಘ್ರ ತೆರವುಗೊಳಿಸಲಾಗುವುದು. ಕೊಠಡಿಗಳು ಸೋರುತ್ತಿರುವುದನ್ನು ಪರಿಶೀಲಿಸಲಾಗಿದ್ದು, ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು. ಶಿಥಿಲಗೊಂಡಿರುವ ಕೊಠಡಿಗಳನ್ನು ತೆರವುಗೊಳಿಸಿದರೂ ಹೆಚ್ಚುವರಿ ಕೊಠಡಿಗಳು ಇರುವುದರಿಂದ ತರಗತಿಗಳಿಗೆ ಸಮಸ್ಯೆಯಿಲ್ಲ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಆರ್. ಪುಷ್ಪ ‘ಪ್ರಜಾವಾಣಿ’ಗೆ ತಿಳಿಸಿದರು.
ಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಹುತೇಕ ಬಡವರ್ಗದ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಶಿಥಿಲಗೊಂಡ ಕಟ್ಟಡ ತೆರವುಗೊಳಿಸಿ ಹೊಸಕಟ್ಟಡ ನಿರ್ಮಿಸಿ ಎಲ್.ಕೆ.ಜಿ.ಯೊಂದಿಗೆ ಇಂಗ್ಲಿಷ್ ಮಾಧ್ಯಮ ಆರಂಭಿಸಿದರೆ ಪಟ್ಟಣದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಮೇಲಿನ ಒತ್ತಡ ಕಡಿಮೆಯಾಗಲಿದೆ. ಸುತ್ತಮುತ್ತಲ ಗ್ರಾಮದ ಮಕ್ಕಳಿಗೂ ಉತ್ತಮ ಶಿಕ್ಷಣ ಲಭಿಸಲಿದೆ. ಶಾಲೆಯ ಸಮೀಪವೇ ವಿದ್ಯಾರ್ಥಿನಿಲಯವೂ ಇರುವುದರಿಂದ ಬೇರೆ ಊರಿನ ಮಕ್ಕಳು ವ್ಯಾಸಂಗ ಮಾಡಲು ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಸರ್ಕಾರ ಗಮನ ಹರಿಸಬೇಕು ಎಂದು ಶಾಲೆಯ ಹಳೆವಿದ್ಯಾರ್ಥಿ, ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಶೆಟ್ಟಿ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.