ಶರನ್ನವರಾತ್ರಿ ಪ್ರಯುಕ್ತ ಶೃಂಗೇರಿ ಶಾರದೆಗೆ ಭಾನುವಾರ ಮಯೂರವಾಹನಾಲಂಕಾರ ಮಾಡಿದ್ದರು
ಶೃಂಗೇರಿ: ಇಲ್ಲಿನ ಶಾರದಾ ಮಠದ ಶಾರದೆಗೆ ಭಾನುವಾರ ಆದಿಶಕ್ತಿಯು ಕೈಯಲ್ಲಿ ಶಕ್ತ್ಯಾಯುಧ ಧರಿಸಿ, ನವಿಲ್ಲನ್ನೇರಿ, ಕುಮಾರಸ್ವಾಮಿಯ ಶಕ್ತಿಯಾಗಿರುವ ಹಾಗೇ ಮಯೂರವಾಹನಾಲಂಕಾರ ಮಾಡಿದ್ದರು.
ಮಧ್ಯಾಹ್ನ ಗುರುಗಳಾದ ಭಾರತೀತೀರ್ಥ ಸ್ವಾಮೀಜಿ, ವಿಧುಶೇಖರಭಾರತೀ ಸ್ವಾಮೀಜಿ ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿದರು. ಮಠದಲ್ಲಿ ಶರನ್ನವರಾತ್ರಿ ಪ್ರಯುಕ್ತ ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವಣ ವೇದಗಳ ಪಾರಾಯಣ, ಮಾಧವೀಯ ಶಂಕರ ದಿಗ್ವಿಜಯ, ಸೂತ ಸಂಹಿತೆ, ಭುವನೇಶ್ವರಿ ಜಪ, ಕುಮಾರೀ ಹಾಗೂ ಸುವಾಸಿನಿ ಪೂಜೆ ನಡೆದವು.
ಸಂಜೆ 6ಕ್ಕೆ ನಡೆದ ಬೀದಿ ಉತ್ಸವದಲ್ಲಿ ಮೆಣಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭಕ್ತರು ಮತ್ತು ಅಗಳಗಂಡಿ, ಜಯಪುರ, ಮೇಗುಂದ ಹೋಬಳಿ ಭಕ್ತಾದಿಗಳು, ಗೀರ್ವಾಣಿ ಮಹಿಳಾ ಮಂಡಳಿ ಮೆಣಸೆ, ಶ್ರೀಶಾರದಾ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಕ್ಷೇಮಭಿವೃದ್ಧಿ ಸಂಘ, ಶಿವಳ್ಳಿ ಬ್ರಾಹ್ಮಣ ಮಹಾಸಭಾ, ವಿನಾಯಕ ಭಜನಾ ಮಂಡಳಿ, ಕಾರ್ಮಿಕ ಮಿತ್ರ ಬಳಗ, ಶ್ರೀರಾಮ ಸೇವಾ ಸಮಿತಿ ಹುಲ್ಸಗಾರು, ಪ್ರಜ್ಞಾ ಯುವಕ ಸಂಘ ಕುಂಚೇಬೈಲು, ಆದರ್ಶ ರೈತ ಮಿತ್ರ ಕೂಟ ಕೆರೆಮನೆ, ಕುಂಚೇಬೈಲು ಹಾಗೂ ಕಲ್ಕಟ್ಟೆ ಭಾಗದ ಸಂಘ-ಸಂಸ್ಥೆಗಳು, ದೇವಸ್ಥಾನ ಸೇವಾ ಸಮಿತಿಗಳು, ಶ್ರೀಶಾರದಾಂಬ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ, ಶ್ರೀರಾಘವೇಂದ್ರ ಸ್ವಾಮಿ ದೇವಸ್ಥಾನ ಭಜನಾ ಮಂಡಳಿ ಕಲ್ಕಟ್ಟೆ, ದುರ್ಗಾಪರಮೇಶ್ವರಿ ಭಜನಾ ಮಂಡಳಿ, ದುರ್ಗಾಶ್ರೀ ಭಜನಾ ಮಂಡಳಿ ಹಾಲಂದೂರು, ಮೆಣಸೆ ವ್ಯಾಪ್ತಿಯ ಕೇಂದ್ರಿಯ ಸಂಸ್ಕೃತ ವಿಶ್ವವಿದ್ಯಾಲಯ, ರಾಮಸ್ಥರು ಭಾಗವಹಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಂಗಳೂರಿನ ಸಿಕ್ಕಿಲ್ ಮಾಲಾ ಚಂದ್ರಶೇಖರ್ ಮತ್ತು ವೃಂದದವರಿಂದ ಕೊಳಲುವಾದನ ನಡೆಯಿತು.
ದರ್ಬಾರು: ಶಾರದಾ ಮಠದ ಸಂಪ್ರದಾಯಕ್ಕೆ ಅನುಸಾರ ಮಠದ ಕಿರಿಯ ಗುರುಗಳಾದ ವಿಧುಶೇಖರಭಾರತೀ ಸ್ವಾಮೀಜಿ ಕಿರೀಟ, ಆಭರಣಗಳನ್ನು ಧರಿಸಿ ಚಂದ್ರಮೌಳೇಶ್ವರ ದೇವಾಲಯದಿಂದ ಶಾರದಾಮ್ಮನವರ ದೇವಾಲಯಕ್ಕೆ ಉತ್ಸವದಲ್ಲಿ ಭಾಗವಹಿಸಿದರು.
ಶಾರದೆಗೆ ಅಭಿಮುಖವಾಗಿ ಇರಿಸಿದ ಸಿಂಹಾಸನದಲ್ಲಿ ಗುರುಗಳು ಆಸೀನರಾದರು. ನಾಲ್ಕು ವೇದಗಳ ಪಾರಾಯಣ, ಪಂಚಾಂಗ ಶ್ರವಣ, ಸಂಗೀತ ಸೇವೆ ನೆರವೇರಿತು. ಪ್ರಸಾದ ವಿನಿಯೋಗದ ಬಳಿಕ ಉತ್ತರನೀರಾಜನದೊಂದಿಗೆ ದರ್ಬಾರು ಮುಕ್ತಾಯಗೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.